SUDDIKSHANA KANNADA NEWS/ DAVANAGERE/ DATE:11-09-2023
ದಾವಣಗೆರೆ: ಮಾಜಿ ಸಚಿವ ಹಾಗೂ ಹೊನ್ನಾಳಿ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ (M. P. Renukacharya) ಬಿಜೆಪಿಗೆ ಕಪ್ಪು ಚುಕ್ಕೆ. ಇನ್ನು ಮುಂದೆಯೂ ಪಕ್ಷ, ಮುಖಂಡರ ತೇಜೋವಧೆ ಮುಂದುವರಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ನಮಗೂ ಸಹನೆಯ ಕಟ್ಟೆ ಒಡೆದಿದೆ. ರೇಣುಕಾಚಾರ್ಯರ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ರಾಜ್ಯದ ಪಕ್ಷ ಶಿಸ್ತುಪಾಲನಾ ಸಮಿತಿಗೆ ವರದಿ ನೀಡಲಾಗುವುದು. ಬೆಳವಣಿಗೆಗಳ ಕುರಿತಂತೆಯೂ ಮಾಹಿತಿ ನೀಡಲಾಗುವುದು. ಶಿಸ್ತು ಕ್ರಮ, ಉಚ್ಚಾಟನೆ ಸೇರಿದಂತೆ ಕ್ರಮ ಏನಿದ್ದರೂ ರಾಜ್ಯ ಘಟಕ ತೆಗೆದುಕೊಳ್ಳುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ವೀರಾವೇಶದ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ:
Bhadra Dam: ಭದ್ರಾ ಡ್ಯಾಂನ ಇಂದಿನ ನೀರಿನ ಮಟ್ಟ ಎಷ್ಟು..? ಬಲದಂಡೆ ನಾಲೆಯಲ್ಲಿ ನೀರು ಹರಿಸುವಿಕೆಯಿಂದ ಎಷ್ಟು ಕಡಿಮೆಯಾಗಿದೆ ಗೊತ್ತಾ…?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯ (M. P. Renukacharya) ರ ದ್ವಂದ್ವ ಹೇಳಿಕೆ, ನಿಲುವಿನಿಂದಾಗಿ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಪಕ್ಷ ವಿರೋಧಿ ಹೇಳಿಕೆಗಳ ಬಗ್ಗೆ ಕಾರ್ಯಕರ್ತರು ಗೊಂದಲಕ್ಕೆ ಈಡಾಗುವುದು ಬೇಡ. ರೇಣುಕಾಚಾರ್ಯ (M. P. Renukacharya) ರ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಡಿ. ಬೂತ್, ಜಿಲ್ಲಾ, ತಾಲೂಕು ಮಟ್ಟದ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ. ನಮ್ಮ ಸಹನೆಯ ಕಟ್ಟೆ ಒಡೆದಿದೆ. ಕಾರ್ಯಕರ್ತರು ನಾವು ಮಾತನಾಡಬೇಕೋ ನೀವು ಮಾತನಾಡುತ್ತೀರೋ ಎಂದು ನಮ್ಮನ್ನು ಕೇಳುತ್ತಿದ್ದಾರೆ. ರಾಜ್ಯ ಘಟಕಕ್ಕೆ ರೇಣುಕಾಚಾರ್ಯ (M. P. Renukacharya) ರ ವರ್ತನೆ, ಹೇಳಿಕೆ, ಪಕ್ಷ ವಿರೋಧಿ ನಡೆಗಳ ಕುರಿತಂತೆ ಮಾಹಿತಿ ಈಗಾಗಲೇ ನೀಡಲಾಗಿದೆ. ಕಳೆದರಡು ದಿನಗಳಿಂದ ನಡೆದ ಬೆಳವಣಿಗೆಗಳ ಬಗ್ಗೆಯೂ ವರದಿ ನೀಡುತ್ತೇವೆ ಎಂದರು.
ನೊಟೀಸ್ ಗೆ ಉತ್ತರ ಕೊಡಲ್ಲ ಎಂದ್ರೆ ಹೇಗೆ…?
ರೇಣುಕಾಚಾರ್ಯರಿಗೆ ರಾಜ್ಯ ಘಟಕ ಈಗಾಗಲೇ ನೊಟೀಸ್ ಕೊಟ್ಟಿದೆ. ಉತ್ತರ ಕೊಡಲ್ಲ ಎಂದಿದ್ದಾರೆ. ಈ ವರ್ತನೆ ಸರಿಯಲ್ಲ. ಪಕ್ಷದಲ್ಲಿ ಯಾರೂ ಸುಪ್ರೀಂ ಇಲ್ಲ. ರೇಣುಕಾಚಾರ್ಯ (M. P. Renukacharya) ಉಚ್ಚಾಟನೆ ಮಾಡಬೇಕೋ, ಶಿಸ್ತು ಕ್ರಮ ಜರುಗಿಸಬೇಕೋ ಎಂಬ ಬಗ್ಗೆ ರಾಜ್ಯ ಘಟಕವೇ ನಿರ್ಧಾರ ತೆಗೆದುಕೊಳ್ಳುತ್ತದೆ. ನಾವು ರಾಜ್ಯ ಘಟಕ ಹೇಳಿದ್ದನ್ನು ಪಾಲಿಸುತ್ತೇವೆ ಅಷ್ಟೇ. ಜಿಲ್ಲೆಯಲ್ಲಿ ರೇಣುಕಾಚಾರ್ಯ (M. P. Renukacharya) ರ ನಡೆ ಸರಿಯಿಲ್ಲ. ಈ ವಿಚಾರವನ್ನು ಈಗಾಗಲೇ ರಾಜ್ಯ ಘಟಕಕ್ಕೆ ತಿಳಿಸಿದ್ದೇವೆ. ಮತ್ತೆ ಈಗಲೂ ಹೇಳುತ್ತೇವೆ. ಬಿಜೆಪಿ ಕೋರ್ ಕಮಿಟಿ ನಡೆಸಿ, ನಿರ್ಧಾರ ಮಾಡಿ ರಾಜ್ಯ ಘಟಕಕ್ಕೆ ಕಳುಹಿಸುತ್ತೇವೆ ಎಂದರು.
ರೇಣುಕಾಚಾರ್ಯ (M. P. Renukacharya) ವರ್ತನೆ ಬಿಜೆಪಿಗೆ ಕಪ್ಪು ಚುಕ್ಕೆ:
ಇತ್ತೀಚಿನ ದಿನಗಳಲ್ಲಿನ ರೇಣುಕಾಚಾರ್ಯರ ವರ್ತನೆ ಬಿಜೆಪಿಗೆ ಕಪ್ಪು ಚುಕ್ಕೆಯಾಗಿದೆ. ಇಂದು ರವೀಂದರನಾಥ್ ಅವರ ಬಗ್ಗೆ ಅನುಕಂಪ ಬಂದಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ನನಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿಕೊಂಡು ಓಡಾಡಿದ್ದ
ರೇಣುಕಾಚಾರ್ಯ ರವೀಂದ್ರನಾಥ್ ಅವರು ಸಚಿವರಾಗಲಿ ಎಂದು ಏಕೆ ಒತ್ತಾಯ ಮಾಡಲಿಲ್ಲ. ಮಾಜಿ ಸಚಿವರು ಪ್ರಚಾರ ಪ್ರಿಯರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಪಕ್ಷ, ಮುಖಂಡರ ತೇಜೋವಧೆ ಮಾಡುತ್ತಿದ್ದಾರೆ. ಕೂಡಲೇ ಇದನ್ನು
ನಿಲ್ಲಿಸಬೇಕು. ನಾವು ಇಷ್ಟು ದಿನ ಸುಮ್ಮನಿದ್ದೆವು. ಇನ್ನು ಮುಂದೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ವಾರ್ನಿಂಗ್ ನೀಡಿದರು.
ಎಷ್ಟು ಜನಕ್ಕೆ ಗೂಟದ ಕಾರು ಕೊಡಿಸಿದ್ದಾರೆ…?
ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಲು ಎಂ. ಪಿ. ರೇಣುಕಾಚಾರ್ಯ (M. P. Renukacharya) ರೇ ಕಾರಣ. ತಮ್ಮ ಅಧಿಕಾರದ ಲಾಲಸೆಯಿಂದ ಜಿಲ್ಲೆಯಲ್ಲಿ ಐವರು ಶಾಸಕರಿದ್ದರೂ ಸಚಿವ ಸ್ಥಾನ ಸಿಗಲಿಲ್ಲ. ರವೀಂದ್ರನಾಥ್ ಹಾಗೂ ಗುರುಸಿದ್ದನಗೌಡರ ಬಗ್ಗೆ ಮಾತನಾಡುವ ರೇಣುಕಾಚಾರ್ಯ ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯನ್ನು ಗುರುಸಿದ್ದನಗೌಡರಿಗೆ ನೀಡಿಸಬಹುದಿತ್ತು. ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಪಡೆದು ಗೂಟದ ಕಾರಿನಲ್ಲಿ ಓಡಾಡಲಿಲ್ವಾ. ಎಷ್ಟು ಕಾರ್ಯಕರ್ತರಿಗೆ ಈ ಹುದ್ದೆ ಕೊಡಿಸಿದ್ದಾರೆ, ಒತ್ತಡ ಹೇರಿದ್ದಾರೆ ಎಂದು ಪ್ರಶ್ನಿಸಿದರು.
ನೂರಾರು ಮುಖಂಡರ ಹೊರ ಹಾಕಿಸಿದ್ದು ಯಾರು…?
ನಿತ್ಯವೂ ಗೊಂದಲ ಮೂಡಿಸುತ್ತಿರುವ ರೇಣುಕಾಚಾರ್ಯ (M. P. Renukacharya) ಸಚಿವರಾಗಿ, ಶಾಸಕರಾಗಿ, ನಿಗಮ ಮಂಡಳಿ ಅಧ್ಯಕ್ಷರಾಗಿ, ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬ ಪಟ್ಟಿಯೂ ನಮ್ಮ ಬಳಿ ಇದೆ. ಶಾಂತರಾಜ್ ಪಾಟೀಲ್, ಹನುಮಂತಪ್ಪ ಎಂದೋ ಶಾಸಕರಾಗಬೇಕಿತ್ತು. ರೇಣುಕಾಚಾರ್ಯ (M. P. Renukacharya) ರಿಗೆ ಪಕ್ಷವು ಟಿಕೆಟ್ ನೀಡಿದ್ದರಿಂದ ಈ ಅಧಿಕಾರವೆಲ್ಲಾ ಸಿಕ್ಕಿದೆ. ಆದ್ರೆ, ಈಗ ಏನೇನೋ ಮಾತನಾಡುತ್ತಾ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವೀರೇಶ್ ಹನಗವಾಡಿ ಆರೋಪಿಸಿದರು.
ಗುರುಸಿದ್ದನಗೌಡರ ಬೆನ್ನಿಗೆ ನಿಲ್ಲಲು ಈಗ ಬಂದಿದ್ದೀರಾ. ಬಿಜೆಪಿ ಜಿಲ್ಲಾಧ್ಯಕ್ಷರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಬಿಜೆಪಿ ಕೋರ್ ಕಮಿಟಿಯಲ್ಲಿ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಸದಸ್ಯ ನವೀನ್ ಸೇರಿದಂತೆ 15 ಮಂದಿ ಸದಸ್ಯರು ಇದ್ದರು. ಎಲ್ಲರ ಒಪ್ಪಿಗೆ ಮೇರೆಗೆ ರಾಜ್ಯ ಘಟಕಕ್ಕೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದ ಗುರುಸಿದ್ದನಗೌಡ ಹಾಗೂ ಅವರ ಪುತ್ರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಜಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ವಿ. ರಾಮಚಂದ್ರಪ್ಪ ಸೋಲಲು ಗುರುಸಿದ್ದನಗೌಡ ಹಾಗೂ ಅವರ ಪುತ್ರರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇ ಕಾರಣ. ಈ ಬಗ್ಗೆ ರಾಜ್ಯ ನಾಯಕರು ಹಾಗೂ ಹೈಕಮಾಂಡ್ ಗೆ ಜಗಳೂರು ಮಾಜಿ ಶಾಸಕ ಎಸ್. ವಿ. ರಾಮಚಂದ್ರಪ್ಪ ಪತ್ರ ಬರೆದಿದ್ದರು. ಇದನ್ನು ಪರಿಶೀಲಿಸಿ ನಮಗೆ ಸೂಚನೆ ನೀಡಿದ ಬಳಿಕ ಮಾಜಿ ಶಾಸಕರು ಹಾಗೂ ಅವರ ಪುತ್ರರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿಸಿದರು.
ರೇಣುಕಾಚಾರ್ಯ (M. P. Renukacharya) ಸ್ಪಷ್ಟನೆ ನೀಡಬೇಕು:
ನಾನು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದಿರುವ ರೇಣುಕಾಚಾರ್ಯ (M. P. Renukacharya) ಸ್ಪಷ್ಟನೆ ನೀಡಬೇಕು. ಹೊನ್ನಾಳಿಯಲ್ಲಿ ಎಷ್ಟು ಮುಖಂಡರು ಬಿಜೆಪಿ ಪಕ್ಷವಂತೆ ಬಿಡುವಂತೆ ಮಾಡಿದರು. ಯಾರೂ ಬೆಳೆಯದಂತೆ ಚಿವುಟಿ ಹಾಕುವ ಕೆಲಸ ಮಾಡಿದರು, ರಾಜ್ ಕುಮಾರ್, ಗದ್ದಿಗೇಶ್, ಹರಮಘಟ್ಟೆ ರಮೇಶ್, ಎಂ. ಆರ್. ಮಹೇಶಪ್ಪ, ಜವಳಿ ಪ್ರಕಾಶ್ ಸೇರಿದಂತೆ ನೂರಾರು ಬಿಜೆಪಿ ಮುಖಂಡರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಬೇರೆ ಪಕ್ಷಕ್ಕೆ ಅವರು ಹೋಗಲು ರೇಣುಕಾಚಾರ್ಯ (M. P. Renukacharya) ಕಾರಣ. ಅವರ ತಾಳಕ್ಕೆ ಕುಣಿಯಲಿಲ್ಲ ಎಂಬ ಕಾರಣಕ್ಕೆ ಎಲ್ಲರ ರಾಜಕೀಯ ಮುಗಿಸಲು ಯತ್ನಿಸಿದರು. ಪಕ್ಷದಿಂದ ಹೊರ ಹಾಕಿದರು. ಅವರೆಲ್ಲಾ ಈಗ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಹೇಳುತ್ತಾ ಹೋದರೆ ಪಟ್ಟಿಯೇ ದೊಡ್ಡದಾಗುತ್ತದೆ. ರೇಣುಕಾಚಾರ್ಯ ಪಕ್ಷದ ನಾಯಕರ ವಿರುದ್ಧ ಮಾತನಾಡಿದರೆ ಸುಮ್ಮನೆ ಕೂರಲ್ಲ ಎಂದು ಪದೇ ಪದೇ ಎಚ್ಚರಿಕೆ ನೀಡಿದರು.
ಪಕ್ಷ, ಮುಖಂಡರ ತೇಜೋವಧೆ ಮಾಡಿದ್ರೆ ಸಹಿಸಲ್ಲ:
ಬಿಜೆಪಿ ಪಕ್ಷದಲ್ಲಿ ಜೀ ಎನ್ನಬೇಕು ಎಂದಿರುವ ರೇಣುಕಾಚಾರ್ಯ (M. P. Renukacharya) ಅವರು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ವಿರುದ್ಧವೇ ಮಾತನಾಡುವ ರೇಣುಕಾಚಾರ್ಯ ಗ್ರಾಮ ಪಂಚಾಯಿತಿ ಗೆಲ್ಲದವರು ಬಿಜೆಪಿ ಪಕ್ಷದ ಕಚೇರಿಯಲ್ಲಿ ಕುಳಿತಿದ್ದಾರೆ ಅಂತಾರೆ. ರೇಣುಕಾಚಾರ್ಯ ಬೊಕ್ಕೆ ಕೊಟ್ಟು ಬಿ. ಎಲ್. ಸಂತೋಷ್ ರನ್ನು ನವದೆಹಲಿಯಲ್ಲಿ ಭೇಟಿ ಮಾಡಿರಲಿಲ್ವಾ. ಬಿಜೆಪಿ ರಾಜ್ಯಾಧ್ಯಕ್ಷರನ್ನು ಹೊನ್ನಾಳಿಗೆ ಬಂದಾಗ ಬರಮಾಡಿಕೊಂಡಿರಲಿಲ್ವಾ. ತನ್ನ ತಾಳಕ್ಕೆ ಕುಣಿಯದ ಅನೇಕ ಮುಖಂಡರನ್ನು ಸಸ್ಪೆಂಡ್ ಮಾಡಿಸಿದಾಗ ರೇಣುಕಾಚಾರ್ಯರಿಗೆ ಪಕ್ಷ ನಿಷ್ಠೆ ಎಲ್ಲಿ ಹೋಗಿತ್ತು ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯಲ್ಲಿ ಯಾರೂ ಸುಪ್ರೀಂ ಅಲ್ಲ:
ಬಿಜೆಪಿಯಲ್ಲಿ ಯಾರೂ ಸುಪ್ರೀಂ ಅಲ್ಲ. ಕಾರ್ಯಕರ್ತರೇ ಮುಖ್ಯ. ಮಾಡಾಳ್ ವಿರೂಪಾಕ್ಷಪ್ಪರನ್ನು ದಿನ ಭೇಟಿ ಮಾಡಿ. ಯಾರೂ ಬೇಡ ಅಂತಾರೆ. ಸಂಸದರ ಟಾರ್ಗೆಟ್ ಮಾಡಿ ರೇಣುಕಾಚಾರ್ಯ (M. P. Renukacharya) ಮಾತನಾಡುತ್ತಿದ್ದಾರೆ ಅಂತಾ ಕಾರ್ಯಕರ್ತರು ಹೇಳುತ್ತಿದ್ದಾರೆ. ಸಾಮಾನ್ಯ ಕಾರ್ಯಕರ್ತ ಎನ್ನುವುದಾದರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಪಕ್ಷದ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳುವುದು ಯಾಕೆ ಎಂದು ಹೇಳಿದರು.
ಬಿಎಸ್ ವೈ ಹಿಮಾಲಯ ಪರ್ವತ:
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಿಮಾಲಯ ಪರ್ವತ ಇದ್ದ ಹಾಗೆ. ಅವರ ಹೆಸರು ಬಳಸಿಕೊಂಡು ರಾಜಕೀಯ, ಬೇಳೆ ಬೇಯಿಸಿಕೊಳ್ಳುವುದು ಬೇಡ. ಯಡಿಯೂರಪ್ಪರ ಪುತ್ರ ವಿಜಯೇಂದ್ರ ಅವರನ್ನು ಬೆಳೆಸುವುದು ನೀವಲ್ಲ. ಪಕ್ಷ ನಿರ್ಧಾರ ಮಾಡುತ್ತೆ. ಕಾರ್ಯಕರ್ತರು ಬೆಳೆಸುತ್ತಾರೆ. ಯಡಿಯೂರಪ್ಪ, ಅವರ ಮಕ್ಕಳ ಬಗ್ಗೆ ಬಿಜೆಪಿಯವರು ಯಾವಾಗಲೂ ಮರೆಯಲ್ಲ. ಅಷ್ಟೊಂದು ಕೊಡುಗೆ ಅವರದ್ದು ಇದೆ. ನಾವ್ಯಾರೂ ಮರೆಯಲು ಸಾಧ್ಯವಿಲ್ಲ. ಪಕ್ಷ ಕಟ್ಟಿ ಅಧಿಕಾರಕ್ಕೆ ತಂದಿರುವ ಯಡಿಯೂರಪ್ಪ ಅವರು ಸೂರ್ಯ ಇದ್ದಂತೆ. ಟಾರ್ಚ್ ಬಿಡುವ ಕೆಲಸ ಮಾಡುವುದು ಬೇಡ. ಬಿಎಸ್ ವೈ ಸಂಘಟನೆ, ಹೋರಾಟ, ಪಕ್ಷಕ್ಕೆ ಮಾಡಿರುವ ತ್ಯಾಗ ಎಲ್ಲರಿಗೂ ಗೊತ್ತಿರುವ ವಿಚಾರ. ಅವರೇ ಸಿಎಂ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿದ್ದರು. ಆದರೂ ರೇಣುಕಾಚಾರ್ಯ ಬಿಎಸ್ ವೈ ಗೆ ಮೋಸ ಮಾಡಿದೆ ಎಂದು ಪದೇ ಪದೇ ಯಾಕೆ ಹೇಳುತ್ತಾರೋ ಗೊತ್ತಿಲ್ಲ ಎಂದರು.
ಬಿಎಸ್ ವೈ ಗೆ ಮೊದಲು ಕಣ್ಮೀರು ಹಾಕಿಸಿದ್ದೇ ರೇಣುಕಾಚಾರ್ಯ (M. P. Renukacharya)
2008ರಲ್ಲಿ ಯಾವ ಪುರುಷಾರ್ಥಕ್ಕೆ ಗೋವಾ, ಚೆನ್ನೈ, ಹೈದರಾಬಾದ್ ರೆಸಾರ್ಟ್ ಗೆ ಹೋಗಿದ್ದರು? ಯಡಿಯೂರಪ್ಪರು ಕಣ್ಣೀರು ಸುರಿಸುವಂತೆ ಮೊದಲು ಮಾಡಿದ್ದು ನೀವು. ದಾರಿ ತಪ್ಪಬಾರದು ಅಂತಾ ಸುಮ್ಮನಿದ್ದೆವು. ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಎಂದು ವೀರೇಶ್ ಹನಗವಾಡಿ ಎಚ್ಚರಿಕೆ ಕೊಟ್ಟರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ಮಾಜಿ ಶಾಸಕ ಎಸ್. ವಿ. ರಾಮಚಂದ್ರಪ್ಪ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಗಳೂರು ಬಿಜೆಪಿ ತಾಲೂಕು ಘಟಕ ಅಧ್ಯಕ್ಷ ಮಹೇಶ್ ಪಲ್ಲಾಗಟ್ಟಿ, ಶಾಂತರಾಜ್ ಪಾಟೀಲ್, ಮಂಜಾನಾಯ್ಕ ಮತ್ತಿತರರು ಹಾಜರಿದ್ದರು.