ಬೆಂಗಳೂರು: ಸ್ಯಾಂಡಲ್ವುಡ್ನ ಮೋಹಕ ತಾರೆ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಹಾಗೂ ನಟ ದರ್ಶನ್ ಅಭಿಮಾನಿಗಳ ನಡುವಿನ ಸಾಮಾಜಿಕ ಜಾಲತಾಣಗಳ ಕಿರುಕುಳ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ನ್ಯಾಯಾಲಯದ ಅಂಗಳದಲ್ಲೂ ಈ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಆರೋಪಿಗಳು ಹಾಗೂ ಅವರ ಕುಟುಂಬಸ್ಥರು ಪರಿಪರಿಯಾಗಿ ಬೇಡಿಕೊಂಡರೂ ರಮ್ಯಾ ಅವರು ತಮ್ಮ ಕಾನೂನು ಹೋರಾಟದಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ.
ಘಟನೆಯ ಹಿನ್ನೆಲೆ:
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಮೆಂಟ್ ಒಂದನ್ನು ಉಲ್ಲೇಖಿಸಿ ರಮ್ಯಾ ಅವರು ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದರು. ಇದರಿಂದ ಕೆರಳಿದ ನಟ ದರ್ಶನ್ ಅವರ ಅಭಿಮಾನಿಗಳು ಹಾಗೂ ಕೆಲ ಸೋಷಿಯಲ್ ಮೀಡಿಯಾ ಟ್ರೋಲರ್‌ಗಳು ನಟಿ ರಮ್ಯಾ ವಿರುದ್ಧ ಅತ್ಯಂತ ಕೆಟ್ಟ ಹಾಗೂ ಅಶ್ಲೀಲ ಪದಗಳನ್ನು ಬಳಸಿ ಮೆಸೇಜ್ ಕಳುಹಿಸಿದ್ದರು. ಲೈಂಗಿಕ ದೌರ್ಜನ್ಯ ಮತ್ತು ಪ್ರಾಣ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ, ರಮ್ಯಾ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.
ಸಿಸಿಬಿ ಚಾರ್ಜ್‌ಶೀಟ್ ಮತ್ತು ಕೋರ್ಟ್ ಅಂಗಳದಲ್ಲಿ ಕ್ಷಮೆಯಾಚನೆ:
ದೂರು ದಾಖಲಿಸಿಕೊಂಡ ಸಿಸಿಬಿ (CCB) ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ 380 ಪುಟಗಳ ಬೃಹತ್ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಹಲವು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಭರದಿಂದ ಸಾಗಿದೆ.
ವಿಚಾರಣೆ ವೇಳೆ, ‘ಮೊಬೈಲ್ ಮತ್ತು ಇಂಟರ್ನೆಟ್ ಸಿಕ್ಕಿದೆ ಎಂಬ ಕಾರಣಕ್ಕೆ ಯಾರ ವಿರುದ್ಧ ಬೇಕಾದರೂ ಹೇಗೆ ಬೇಕಾದರೂ ಅಶ್ಲೀಲ ಕಮೆಂಟ್ ಮಾಡಬಹುದಾ?’ ಎಂದು ರಮ್ಯಾ ಪ್ರಶ್ನಿಸಿದ್ದಾರೆ. ನ್ಯಾಯಾಲಯದಲ್ಲಿ ಆರೋಪಿಗಳು ಮತ್ತು ಅವರ ಕುಟುಂಬದವರು ರಮ್ಯಾ ಅವರ ಬಳಿ “ಇದೊಂದು ಬಾರಿ ಕ್ಷಮಿಸಿ, ಕೇಸ್ ವಾಪಸ್ ಪಡೆಯಿರಿ” ಎಂದು ಕಾಲಿಗೆ ಬಿದ್ದು ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದಾರೆ.
ರಮ್ಯಾ ಸ್ಪಷ್ಟ ನುಡಿ:
“ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣುಮಕ್ಕಳ ಮೇಲಾಗುತ್ತಿರುವ ನಿಂದನೆ ಮತ್ತು ಸೈಬರ್ ದೌರ್ಜನ್ಯಕ್ಕೆ ಕೊನೆ ಹಾಡಬೇಕಿದೆ. ಈ ಶಿಕ್ಷೆ ಪ್ರತಿಯೊಬ್ಬ ಕೆಟ್ಟ ಮನಸ್ಥಿತಿಯ ವ್ಯಕ್ತಿಗೂ ಪಾಠವಾಗಬೇಕು. ಯಾವುದೇ ಕಾರಣಕ್ಕೂ ನಾನು ದೂರು ಹಿಂಪಡೆಯುವುದಿಲ್ಲ” ಎಂದು ರಮ್ಯಾ ಖಡಕ್ ಆಗಿ ಹೇಳಿದ್ದಾರೆ. ಅಲ್ಲದೆ, ಚಿತ್ರರಂಗದ ಇತರ ನಟ-ನಟಿಯರು ಮತ್ತು ಹೆಣ್ಣುಮಕ್ಕಳು ಇಂತಹ ಅನ್ಯಾಯದ ವಿರುದ್ಧ ಧೈರ್ಯವಾಗಿ ಮುಂದೆ ಬಂದು ಧ್ವನಿ ಎತ್ತಬೇಕೆಂದು ಕರೆ ನೀಡಿದ್ದಾರೆ.





Leave a comment