ಬೆಂಗಳೂರು: ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ಪಡೆಯುವುದು ಪ್ರತಿಯೊಬ್ಬ ಉದ್ಯೋಗಿಯ ಡ್ರೀಮ್ ಮೈಲಿಗಲ್ಲು. ಆದರೆ, ಈ ಮಟ್ಟದ ಆದಾಯವೇ ವೃತ್ತಿಜೀವನದ ಅತ್ಯಂತ ‘ಅಪಾಯಕಾರಿ ಹಂತ’ ಎಂದು ಬೆಂಗಳೂರಿನ ಸಾಫ್ಟ್ವೇರ್ ವೃತ್ತಿಪರ ಶಶಾಂಕ್ ದೀಕ್ಷಿತ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಟೆಕ್ಕಿ ಹಂಚಿಕೊಂಡಿರುವ ಪೋಸ್ಟ್ ಈಗ ಉದ್ಯೋಗಿಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
‘ಸಾಕಾಗುವಷ್ಟು ಆದಾಯ’ ಚೌಕಟ್ಟಿನಲ್ಲಿ ಪ್ರಶ್ನೆಗಳೇ ನಿಲ್ಲುತ್ತವೆ!
ಶಶಾಂಕ್ ದೀಕ್ಷಿತ್ ಅವರ ಪ್ರಕಾರ, 2 ಲಕ್ಷ ರೂ. ಸಂಬಳ ಕಡಿಮೆಯಲ್ಲ, ಬದಲಿಗೆ ಅದು ‘ಸಾಕಾಗುವಷ್ಟು’ ಆರಾಮದಾಯಕ ಜೀವನ ನೀಡುತ್ತದೆ. ಈ ಆದಾಯವು ಸಮಾಜದಲ್ಲಿ ಗೌರವ, ಆರ್ಥಿಕ ಸ್ಥಿರತೆ ಮತ್ತು ಕುಟುಂಬಕ್ಕೆ ಭರವಸೆ ನೀಡಲು ನೆರವಾಗುತ್ತದೆ. ಆದರೆ, ಈ ಕಂಫರ್ಟ್ ಸಿಕ್ಕ ತಕ್ಷಣ ಉದ್ಯೋಗಿ ತನ್ನ ಕೆರಿಯರ್ನಲ್ಲಿ ಮುಂದಿನ ದೊಡ್ಡ ಹೆಜ್ಜೆ ಇಡಲು ಅಥವಾ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುತ್ತಾನೆ. “ನಿಮ್ಮ ಸಂಬಳವೇ ನಿಮ್ಮ ಗುರುತಾಗಿ ಬದಲಾದಾಗ, ಹೊಸ ಸವಾಲುಗಳನ್ನು ಎದುರಿಸುವ ಬದಲು ಇರುವ ಕೆಲಸವನ್ನು ಉಳಿಸಿಕೊಳ್ಳುವುದೇ ಆದ್ಯತೆಯಾಗುತ್ತದೆ” ಎಂದು ಅವರು ವಿಶ್ಲೇಷಿಸಿದ್ದಾರೆ.
ರಿಸ್ಕ್ ತೆಗೆದುಕೊಳ್ಳುವ ಧೈರ್ಯ ಕುಸಿತ:
ಆರಂಭದಲ್ಲಿ ಆರ್ಥಿಕ ಸ್ವಾತಂತ್ರ್ಯದಂತೆ ಕಾಣುವ ಈ ವೇತನ, ಕಾಲಕ್ರಮೇಣ ಉದ್ಯೋಗಿಯನ್ನು ಗಿಲ್ಡೆಡ್ ಕೇಜ್ (ಬಂಗಾರದ ಪಂಜರ) ನಲ್ಲಿ ಬಂಧಿಸುತ್ತದೆ. ಸ್ವಂತ ಉದ್ಯಮ ಆರಂಭಿಸಲು, ಹೊಸ ಕ್ಷೇತ್ರಕ್ಕೆ ಜಿಗಿಯಲು ಅಥವಾ ಇಷ್ಟದ ಕೆಲಸ ಮಾಡಲು ಬಯಸುವವರು ತಮ್ಮ ಪ್ರಸ್ತುತ ಲೈಫ್ಸ್ಟೈಲ್ ಹಾಗೂ ಆರ್ಥಿಕ ಭದ್ರತೆಯನ್ನು ಕಳೆದುಕೊಳ್ಳುವ ಭಯಕ್ಕೆ ಬೀಳುತ್ತಾರೆ. ಪರಿಣಾಮವಾಗಿ, “ಮುಂದಿನ ತಿಂಗಳು, ಮುಂದಿನ ವರ್ಷ ನೋಡೋಣ” ಎಂದು ನಿರ್ಧಾರಗಳನ್ನು ಮುಂದೂಡುತ್ತಾ ತಮ್ಮ ಮೂಲ ಮಹತ್ವಾಕಾಂಕ್ಷೆಯನ್ನೇ ಮರೆತುಬಿಡುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ:
ಈ ಪೋಸ್ಟ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ದೀಕ್ಷಿತ್ ಅವರ ಅಭಿಪ್ರಾಯವನ್ನು ಬೆಂಬಲಿಸಿದ್ದು, ಜೀವನಶೈಲಿಯ ವೆಚ್ಚಗಳು ಹೆಚ್ಚಾದಂತೆ ಉದ್ಯೋಗಿಗಳು ಕಂಫರ್ಟ್ ಜೋನ್ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಇನ್ನು ಕೆಲವರು, ಸಮಸ್ಯೆ 2 ಲಕ್ಷ ರೂ. ವೇತನದಲ್ಲಿಲ್ಲ, ಬದಲಿಗೆ ಗಳಿಸಿದಷ್ಟೇ ಖರ್ಚು ಮಾಡುವ ಜೀವನಶೈಲಿಯಲ್ಲಿ ಇದೆ ಎಂದು ವಾದಿಸಿದ್ದಾರೆ.
Leave a comment