ಉತ್ತರಾಖಂಡ: ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್ಯಾಲಿ ನಡೆದ ಸ್ಥಳದಲ್ಲಿ ನಡೆದಿದೆ ಎನ್ನಲಾದ ‘ಶುದ್ಧೀಕರಣ’ ಪೂಜೆಯ ವಿವಾದ ಮತ್ತಷ್ಟು ಕಾವೇರಿದೆ. ಈ ವಿಚಾರವಾಗಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಖಂಡಿಸಿ ಬಿಜೆಪಿ ನಾಯಕರು ಡೆಹ್ರಾಡೂನ್‌ನಲ್ಲಿ ‘ಬುದ್ಧಿ ಶುದ್ಧಿ ಯಜ್ಞ’ ನಡೆಸಿದ್ದಾರೆ.
ಬುದ್ಧಿ ಶುದ್ಧಿ ಯಜ್ಞ: ಡೆಹ್ರಾಡೂನ್‌ನ ಪಂಚಾಯತಿ ದೇವಸ್ಥಾನದಲ್ಲಿ ಬಿಜೆಪಿ ಪರಿಶಿಷ್ಟ ಜಾತಿ (SC) ಮೋರ್ಚಾ ವತಿಯಿಂದ ರಾಹುಲ್ ಗಾಂಧಿ ಅವರ ಫೋಟೋ ಇಟ್ಟು ‘ಬುದ್ಧಿ ಶುದ್ಧಿ ಯಜ್ಞ’ ನೆರವೇರಿಸಲಾಯಿತು. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರಿಗೆ ಸದ್ಬುದ್ಧಿ ಬರಲಿ ಮತ್ತು ಅವರು ಸುಳ್ಳು ಹರಡುವುದನ್ನು ನಿಲ್ಲಿಸಲಿ ಎಂಬ ಉದ್ದೇಶದಿಂದ ಈ ಪೂಜೆ ಮಾಡಲಾಗಿದೆ ಎಂದು ಬಿಜೆಪಿ ತಿಳಿಸಿದೆ.
ವಿವಾದದ ಹಿನ್ನೆಲೆ: ಆ ಆಗಸ್ಟ್‌ನಲ್ಲಿ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ರ್ಯಾಲಿ ಮುಗಿದ ನಂತರ ಸ್ಥಳದಲ್ಲಿ ‘ಶುದ್ಧೀಕರಣ’ ಪೂಜೆ ಮಾಡಲಾಗಿತ್ತು. ಖರ್ಗೆ ಅವರ ದಲಿತ ಹಿನ್ನೆಲೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಈ ರೀತಿ ಅಸ್ಪೃಶ್ಯತೆ ಆಚರಿಸಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ರಾಹುಲ್ ಗಾಂಧಿ ವಿರುದ್ಧ FIR: ರಾಹುಲ್ ಗಾಂಧಿ ಅವರು ಈ ಘಟನೆಯನ್ನು ‘ಅಸ್ಪೃಶ್ಯತೆ ಮತ್ತು ಅಪರಾಧ’ ಎಂದು ಕ ಕರೆದು, ತಪ್ಪಿತಸ್ಥರ ವಿರುದ್ಧ SC/ST ಕಾಯ್ದೆಯಡಿ FIR ದಾಖಲಿಸುವಂತೆ ಒತ್ತಾಯಿಸಿದ್ದರು. ಆದರೆ, ಸ್ಥಳೀಯ ವಾಲ್ಮೀಕಿ ಸಮುದಾಯದ ಮುಖಂಡ ಅಮಿತ್ ಕುಮಾರ್ ನೀಡಿದ ದೂರಿನ ಮೇರೆಗೆ, ರಾಹುಲ್ ಗಾಂಧಿ ಅವರು ಈ ಶುದ್ಧೀಕರಣ ಪೂಜೆಗೆ ಜಾತಿಯ ಬಣ್ಣ ಬಳಿದು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಉತ್ತರಾಖಂಡ ಪೊಲೀಸರು ರಾಹುಲ್ ಗಾಂಧಿ ವಿರುದ್ಧವೇ FIR (SC/ST ಕಾಯ್ದೆ ಮತ್ತು BNS ಅಡಿಯಲ್ಲಿ) ದಾಖಲಿಸಿದ್ದಾರೆ.
ಪ್ರತಿಭಟನೆ ತೀವ್ರ: ಮೈದಾನವನ್ನು ಕೇವಲ ಸ್ವಚ್ಛಗೊಳಿಸಿ ಹವನ ಮಾಡಲಾಗಿತ್ತು, ಅದರಲ್ಲಿ ವಾಲ್ಮೀಕಿ ಸಮುದಾಯದವರೂ ಭಾಗವಹಿಸಿದ್ದರು ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ದೂರು ನೀಡುತ್ತಿದ್ದು, ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.





Leave a comment