Home ದಾವಣಗೆರೆ ತರಳಬಾಳು ಗುರುಪರಂಪರೆಗೆ ಭಕ್ತಿ ಸಮರ್ಪಿಸಿ ಅಕ್ಕ ಕನ್ನಡ ಸಂಸ್ಥೆಯ ರಜತೋತ್ಸವಕ್ಕೆ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರುಗಳ ಅಮೆರಿಕಾ ಪಯಣ!
ದಾವಣಗೆರೆನವದೆಹಲಿಬೆಂಗಳೂರು

ತರಳಬಾಳು ಗುರುಪರಂಪರೆಗೆ ಭಕ್ತಿ ಸಮರ್ಪಿಸಿ ಅಕ್ಕ ಕನ್ನಡ ಸಂಸ್ಥೆಯ ರಜತೋತ್ಸವಕ್ಕೆ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರುಗಳ ಅಮೆರಿಕಾ ಪಯಣ!

Share
ತರಳಬಾಳು
Share
ಸಿರಿಗೆರೆ: ಅಮೆರಿಕಾದ ಫಿಲಡೆಲ್ಫಿಯಾ ನಗರದಲ್ಲಿ ನಡೆಯಲಿರುವ ಅಕ್ಕ ಕನ್ನಡ ಸಂಸ್ಥೆಯ ರಜತೋತ್ಸವ ಹಾಗೂ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಇಂದು ಅಮೆರಿಕಾಕ್ಕೆ ಪ್ರಯಾಣ ಬೆಳೆಸಿದರು.
ವಿದೇಶ ಪ್ರವಾಸವು ಶ್ರೀ ಜಗದ್ಗುರುಗಳವರ ಪಾಲಿಗೆ ಕೇವಲ ಭೌಗೋಳಿಕ ಪಯಣವಲ್ಲ; ಅದು ಗುರುಪರಂಪರೆಯ ಸ್ಮರಣೆ, ಭಕ್ತಿ ಮತ್ತು ಆಶೀರ್ವಾದದೊಂದಿಗೆ ಆರಂಭವಾಗುವ ಪವಿತ್ರ ಪಯಣ. ನೂರಾರು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದರೂ, ಪ್ರತಿಬಾರಿಯೂ ಸಿರಿಗೆರೆಯ ಐಕ್ಯ ಮಂಟಪಕ್ಕೆ ದಯಮಾಡಿಸಿ, ತಮ್ಮ ಪರಮಾರಾಧ್ಯ ಗುರುವರ್ಯರಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಗದ್ದುಗೆಗೆ ಪೂಜೆ ಸಲ್ಲಿಸಿ, ಭಕ್ತಿ-ಶ್ರದ್ಧೆಯನ್ನು ಸಮರ್ಪಿಸಿ, ಆಶೀರ್ವಾದ ಪಡೆದು ಪಯಣ ಬೆಳೆಸುವುದು ಶ್ರೀ ಜಗದ್ಗುರುಗಳವರ ಅವಿಚ್ಛಿನ್ನ ಗುರುಭಕ್ತಿಯ ಪರಂಪರೆಯಾಗಿದೆ.
ಅದರಂತೆ ಇಂದು ಬೆಳಿಗ್ಗೆ 11 ಗಂಟೆಗೆ ಐಕ್ಯ ಮಂಟಪಕ್ಕೆ ದಯಮಾಡಿಸಿದ ಶ್ರೀ ಜಗದ್ಗುರುಗಳವರು ಹಿರಿಯ ಗುರುಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿ, ಆಶೀರ್ವಾದ ಪಡೆದು ಬೆಂಗಳೂರು ಮಾರ್ಗವಾಗಿ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಐಕ್ಯ ಮಂಟಪದಲ್ಲಿ ಆಶೀರ್ವಚನ ನೀಡಿದ ಶ್ರೀ ಜಗದ್ಗುರುಗಳವರು, ಪರಮಾರಾಧ್ಯ ಗುರುವರ್ಯರಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ಶ್ರದ್ಧಾಂಜಲಿ ಸಮಾರಂಭವು ಸೆಪ್ಟೆಂಬರ್ 22, 23 ಮತ್ತು 24ರಂದು ಸಿರಿಗೆರೆಯಲ್ಲಿ ನಡೆಯಲಿದೆ. ನಾಡಿನ ಮಂತ್ರಿಗಳು, ಗಣ್ಯರು ಹಾಗೂ ಸಹಸ್ರಾರು ಭಕ್ತರು ಭಾಗವಹಿಸಲಿರುವ ಈ ಮೂರು ದಿನಗಳ ಕಾರ್ಯಕ್ರಮದ ಪೂರ್ವಸಿದ್ಧತೆಗಳು ಒಂದು ಕಡೆ ನಡೆಯುತ್ತಿವೆ. ಮತ್ತೊಂದೆಡೆ, ಅಕ್ಕ ಕನ್ನಡ ಸಂಸ್ಥೆಯ ರಜತೋತ್ಸವದಲ್ಲಿ ಭಾಗವಹಿಸುವಂತೆ ಸಮ್ಮೇಳನದ ಸಂಘಟಕರಿಂದ ನಿರಂತರವಾಗಿ ಆಹ್ವಾನ ಹಾಗೂ ಒತ್ತಾಯ ಬಂದಿತ್ತು ಎಂದು ತಿಳಿಸಿದರು.
“ಒಂದೆಡೆ ನಮ್ಮ ಪರಮಾರಾಧ್ಯ ಗುರುವರ್ಯರ ಶ್ರದ್ಧಾಂಜಲಿ ಸಮಾರಂಭದ ಸಿದ್ಧತೆ, ಮತ್ತೊಂದೆಡೆ ವಿಶ್ವದ ಕನ್ನಡಿಗರನ್ನು ಒಂದೆಡೆ ಸೇರಿಸುವ ಅಕ್ಕ ಕನ್ನಡ ಸಂಸ್ಥೆಯ ರಜತೋತ್ಸವ. ಎರಡೂ ಸಂದರ್ಭಗಳ ಮಹತ್ವವನ್ನು ಪರಿಗಣಿಸಿ, ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದೇವೆ” ಎಂದು ಶ್ರೀ ಜಗದ್ಗುರುಗಳವರು ತಿಳಿಸಿದರು. ಪ್ರತಿವರ್ಷದಂತೆ ಈ ವರ್ಷವೂ ನಡೆಯಲಿರುವ ಲಿಂಗೈಕ್ಯ ಗುರುವರ್ಯರ 35ನೇ ಶ್ರದ್ಧಾಂಜಲಿ ಸಮಾರಂಭದ ಸಿದ್ಧತೆಗಳು ಸಿರಿಗೆರೆಯಲ್ಲಿ ಈಗಾಗಲೇ ಆರಂಭಗೊಂಡಿವೆ
Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles