SUDDIKSHANA KANNADA NEWS/ DAVANAGERE/ DATE:23-02-2025
ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಹಾಗೂ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹೈಕಮಾಂಡ್ ಸೂಚನೆ ನೀಡಿದ ಬಳಿಕವೂ ಮಾತನಾಡಿದರೆ ಅದು ತಪ್ಪು. ಹಿರಿಯರು ತಪ್ಪು ದಾರಿಯಲ್ಲಿ ಹೋದರೆ ನಾವೂ ತಪ್ಪು ಹಾದಿ ಹಿಡಿಯುತ್ತೇವೆ ಎಂದು ಶಾಸಕ ಶಿವಗಂಗಾ ವಿ. ಬಸವರಾಜ್ ಕಿಡಿಕಾರಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಕೆ. ಎನ್.ರಾಜಣ್ಣ ಮಾತನಾಡಿದ್ದು ತಪ್ಪೇ. ಕೆ. ಎನ್. ರಾಜಣ್ಣ ಹಿರಿಯರಿದ್ದಾರೆ. ಹೈಕಮಾಂಡ್ ಏನೂ ಮಾತನಾಡಬಾರದು ಎಂದು ಹೇಳಿದೆ. ಹಾಗಾಗಿ ಮೌನವಾಗಿದ್ದೇವೆ. ಮೊದಲ ಬಾರಿಗೆ ಶಾಸಕರಾದವರು ನಾವು. ಹಿರಿಯರು ತಪ್ಪು ದಾರಿಯಲ್ಲೇ ಹೋದರೆ ನಾವೂ ತಪ್ಪು ದಾರಿಯಲ್ಲೇ ಹೋಗಬೇಕಾಗುತ್ತದೆ. ಈ ರೀತಿ ಮಾತನಾಡಬಾರದು. ಹೈಕಮಾಂಡ್ ಮಾಧ್ಯಮಗಳ ಮುಂದೆ ಮಾತನಾಡಬಾರದು ಎಂಬ ಎಚ್ಚರಿಕೆ ನೀಡಿದೆ. ಆದರೂ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಿರಬೇಕು. ನನ್ನ ಒಬ್ಬನಿಂದ ಬದಲಾವಣೆ ಆಗುವುದಾದರೆ ನಾನು ಹೇಳಬಹುದು. ಅದು ಆಗಲ್ಲ. ರಾಜಣ್ಣರು ಹಿರಿಯರಿದ್ದಾರೆ. ಬಹಿರಂಗವಾಗಿ ಮಾತನಾಡುವುದರಿಂದ ಪಕ್ಷಕ್ಕೂ, ಅವರಿಗೆ ಶೋಭೆ ತರುವುದಿಲ್ಲ. ಹಿರಿಯರೇ ಕಿತ್ತಾಡಿದರೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ. ಚೆನ್ನಾಗಿ ಇರಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೃಹ ಸಚಿವರು ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ ಅಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂಥದ್ದು ಯಾವುದೂ ಇಲ್ಲ. ಇದು ಊಹಾಪೋಹ. ಈ ಐದು ವರ್ಷ ಅಷ್ಟೇ ಅಲ್ಲ. ಮುಂದಿನ ಐದು ವರ್ಷವೂ ಕಾಂಗ್ರೆಸ್ ಪಕ್ಷವೇ
ಅಧಿಕಾರಕ್ಕೆಬರುತ್ತದೆ. ಅಂಥ ಕಾರ್ಯಕ್ರಮ ನೀಡಲಾಗಿದೆ. ನಮ್ಮ ವ್ಯತ್ಯಾಸಗಳು ಮಾಧ್ಯಮಗಳ ಸೃಷ್ಟಿ ಎಂದು ಹೇಳಿದರು.
ಪವರ್ ಶೇರಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲ್ಲ. ಈ ಸಂಬಂಧ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದಕ್ಕೆ ನಾವು ಬದ್ಧರಿರುತ್ತೇವೆ ಎಂದರು.