SUDDIKSHANA KANNADA NEWS/ DAVANAGERE/ DATE:21-02-2025
ದಾವಣಗೆರೆ: ಬ್ಯಾಂಕುಗಳಲ್ಲಿ ಅಗತ್ಯ ನೇಮಕಾತಿ ಮಾಡಬೇಕು, ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ದಾವಣಗೆರೆ ಜಿಲ್ಲಾ ಸಮಿತಿಯ ವತಿಯಿಂದ ಬ್ಯಾಂಕ್ ನೌಕರರು ಹಾಗೂ ಅಧಿಕಾರಿ ಸಮೂಹ ನಗರದ ಮಂಡಿಪೇಟೆ ಕೆನರಾ ಬ್ಯಾಂಕ್ ಮುಂಭಾಗ ಪ್ರತಿಭಟನಾ ಮತಪ್ರದರ್ಶನ ನಡೆಸಿದರು.
ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸಬೇಕು. ಉದ್ಯೋಗ ಭದ್ರತೆಯನ್ನು ರಕ್ಷಿಸಬೇಕು. ಬ್ಯಾಂಕ್ ಉದ್ಯೋಗಿಗಳ ಮೇಲಾಗುತ್ತಿರುವ ದಾಳಿಯಿಂದ ನೌಕರರನ್ನು ರಕ್ಷಿಸಬೇಕು, ಐಡಿಬಿಐ ಬ್ಯಾಂಕಿನಲ್ಲಿ ಸರಕಾರಿ ಬಂಡವಾಳವನ್ನು ಶೇಕಡಾ 51 ಕ್ಕಿಂತ ಹೆಚ್ಚಿರಬೇಕು, ಬ್ಯಾಂಕಿಂಗ್ ಸೇವೆಗಳನ್ನು ಹೊರಗುತ್ತಿಗೆ ನೀಡಬಾರದು ಹಾಗೂ ಇನ್ನಿತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.
ಯುಎಫ್‌ಬಿಯು ಜಿಲ್ಲಾ ಸಂಚಾಲಕ ಕೆ.ರಾಘವೇಂದ್ರ ನಾಯರಿ ಮಾತನಾಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಲು ಮುಂಬರುವ ಮಾರ್ಚ್ ತಿಂಗಳ 24 ಮತ್ತು 25 ರಂದು
ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಮುಷ್ಕರಕ್ಕೆ ಪೂರ್ವಭಾವಿಯಾಗಿ ಇಂದು ದೇಶದಾದ್ಯಂತ ಬ್ಯಾಂಕ್ ಉದ್ಯೋಗಿಗಳಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಈ ಪ್ರತಿಭಟನಾ ಮತಪ್ರದರ್ಶನ
ಆಯೋಜಿಸಲಾಗಿದೆ. ಸರಕಾರವು ನಮ್ಮ ನ್ಯಾಯಯುತವಾದ ಬೇಡಿಕೆಗಳ ಈಡೇರಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು ಹಾಗೂ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಷ್ಕರವು ಅನಿವಾರ್ಯವಾಗಲಿದೆ ಎಂದರು.
ಮುಷ್ಕರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ಸಂಘದ ಪ್ರಾದೇಶಿಕ ಕಾರ್ಯದರ್ಶಿ ಆರ್. ಶಂಕರಪ್ಪ, ಚಿತ್ರದುರ್ಗ ಮಹೇಶ್ವರಪ್ಪ, ನಿವೃತ್ತ ಬ್ಯಾಂಕ್ ನೌಕರರ ಸಂಘದ ಹೆಚ್.ಸುಗಿರಪ್ಪ ಭಾಗವಹಿಸಿ
ಮುಷ್ಕರನಿರತರನ್ನು ಉದ್ದೇಶಿಸಿ ಮಾತನಾಡಿದರು.
ಮುಷ್ಕರದ ನೇತೃತ್ವವನ್ನು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್‌ನ ಸದಸ್ಯ ಸಂಘಟನೆಗಳ ನಾಯಕರುಗಳಾದ ಆರ್.ಆಂಜನೇಯ, ಹೆಚ್.ಎಸ್.ತಿಪ್ಪೇಸ್ವಾಮಿ, ಪ್ರದೀಪ್ ಪಾಟೀಲ್, ಸುನಿಲ್‌ಕುಮಾರ್
ಎಸ್. ಮ್ಯಾಗೇರಿ, ಎಂ.ಎಸ್.ವಾಗೀಶ್, ಕೆ.ಗಂಗಾಧರ್, ದುರ್ಗಪ್ಪ, ಎಂ.ಡಿ.ವಿದ್ಯಾಸಾಗರ್, ಪರಶುರಾಮ, ಕೆ. ಜಯಲಕ್ಷ್ಮಿ, ಎನ್.ಜಿ.ಉಷಾ, ನಿಶಾ ಪಿಂಟೋ, ಭಾರತಿ, ಹೆಚ್.ಜೆ.ಆಶಾ, ರೇಣುಕಮ್ಮ ಮುಂತಾದವರು
ಭಾಗವಹಿಸಿದ್ದರು.