SUDDIKSHANA KANNADA NEWS/ DAVANAGERE/ DATE:21-02-2025
ದಾವಣಗೆರೆ: ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸರಣಿ ಮನೆ ಕಳ್ಳತನ ಪ್ರಕರಣ ಸಂಬಂಧ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಗ್ರಾಮಗಳ ಜನರು ನಿಟ್ಟುಸಿರುಬಿಟ್ಟಿದ್ದಾರೆ.
ದಾವಣಗೆರೆ ಜಿಲ್ಲೆಯ ಕಾಡಜ್ಜಿ ಗ್ರಾಮದ ಮನೋಜ (22) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತ ಆರೋಪಿಗಳು. ಬಸವಾಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಣಿ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿ ಆದದ್ದು ವಿಚಾರಣೆ ವೇಳೆ ತಿಳಿದು ಬಂದಿದೆ. ಒಟ್ಟು 500 ಗ್ರಾಂ ಬೆಳ್ಳಿಯ ಆಭರಣಗಳು, ಸುಮಾರು 45 ಗ್ರಾಂ ಬಂಗಾರದ ಆಭರಣ ಮತ್ತು ಕೃತ್ಯಕ್ಕೆ ಬಳಸಿದ 2 ಮೋಟಾರು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. 5.5 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಸಂತೇಬೆನ್ನೂರು ವೃತ್ತ ವ್ಯಾಪ್ತಿಯ ಬಸವಾಪಟ್ಟಣ ಠಾಣಾ ಸರಹದ್ದಿನ ದೊಡ್ಡಘಟ್ಟ ಗ್ರಾಮ ಮತ್ತು ಬಸವಾಪಟ್ಟಣ ಗ್ರಾಮದಲ್ಲಿ ಸರಣಿ ಮನೆ ಕಳ್ಳತನಗಳು ನಡೆದಿದ್ದವು. ಒಟ್ಟು 3 ಪ್ರಕರಣಗಳು ದಾಖಲಾಗಿದ್ದವು. ಸರಣಿ ಮನೆ ಕಳ್ಳತನ ಪ್ರಕರಣಗಳಿಂದ ಬಸವಾಪಟ್ಟಣ, ಸಂತೇಬೆನ್ನೂರು ಕಡೆಗಳಲ್ಲಿ ವಾಸಿಸುವ ಜನರು ಭಯಬೀತರಾಗಿದ್ದು, ಪ್ರಕರಣಗಳ ಆರೋಪಿತರ ಪತ್ತೆಕಾರ್ಯ ಪೊಲೀಸರಿಗೆ ಸವಾಲಾಗಿತ್ತು. ಸರಣಿ ಮನೆ ಕಳ್ಳತನ ಪ್ರಕರಣಗಳು ನಡೆದ ಕೃತ್ಯದ ಸ್ಥಳಗಳಿಗೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಡಿವೈಎಸ್ಪಿ ಸ್ಯಾಮ್ ವರ್ಗಿಸ್, ಪೊಲೀಸ್ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ತನಿಖಾಧಿಕಾರಿಗಳಿಗೆ ಸರಣಿ ಮನೆ ಕಳ್ಳತನದ ಆರೋಪಿತರ ಪತ್ತೆಗೆ ಸೂಕ್ತ ಸೂಚನೆಗಳನ್ನು ನೀಡಲಾಗಿತ್ತು. ಸಂತೇಬೆನ್ನೂರು ಪೊಲೀಸ್ ಠಾಣೆ ವೃತ್ತದ ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಬಸವಾಪಟ್ಟಣ ಮತ್ತು ಸಂತೇಬೆನ್ನೂರು ಪಿಎಸ್ ಐ ಸಿಬ್ಬಂದಿಗಳನ್ನೋಳಗೊಂಡ 2 ತಂಡಗಳನ್ನು ರಚನೆ ಮಾಡಲಾಗಿತ್ತು.
ತಂಡವು ವಿವಿಧ ಕಡೆ ಆರೋಪಿತರ ಪತ್ತೆ ಕಾರ್ಯ ಕೈಗೊಂಡಿದ್ದು. ಸರಣಿ ಮನೆ ಕಳ್ಳತನ ಪ್ರಕರಣಗಳ ಆರೋಪಿಗಳಾದ ಮನೋಜ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ.
ಒಂದು ಮೋಟಾರು ಬೈಕ್ ಕಳ್ಳತನ ಪ್ರಕರಣ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಇನ್ನೊಂದು ಬೈಕ್ ಅನ್ನು ಕಡೂರು ನಗರದಲ್ಲಿ ಕಳ್ಳತನ ಮಾಡಿದ್ದಾಗಿ ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾದ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಆರೋಪಿತರ ಹಿನ್ನೆಲೆ:
ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನು ಈ ಹಿಂದೆ ಜನವರಿ ತಿಂಗಳಲ್ಲಿ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ 5 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಮನೋಜ್ ಬಿಳಿಚೋಡು ಪೊಲೀಸ್ ಠಾಣೆಯ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಒಟ್ಟು 5 ಕಳ್ಳತನ ಪ್ರಕರಣಗಳಲ್ಲಿನ ಸ್ವತ್ತು ಮತ್ತು ಆರೋಪಿತರನ್ನು ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಸಂತೇಬೆನ್ನೂರು ವೃತ್ತದ ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದ ಬಸವಾಪಟ್ಟಣ ಸಿಪಿಐ ಭಾರತಿ, ಹಾಗೂ ವೀಣಾ, ಸಂತೇಬೆನ್ನೂರು ಪಿಎಸ್ ಐ ಜಗದೀಶ್ ಮತ್ತು ಸಿಬ್ಬಂದಿಯವರಾದ ಎಎಸ್ ಐ ದೊಡ್ಡಬಸಪ್ಪ, ಸತೀಶ, ರುದ್ರೇಶ ಎಂ., ವೀರಭದ್ರಪ್ಪ, ಹನುಮಂತಪ್ಪ ರಾಘವೇಂದ್ರ, ಪರಶುರಾಮ, ಅರುಣ, ಮೋಹನ, ತಿಮ್ಮರಾಜು, ಇಬ್ರಾಹಿಂ, ಅಣ್ಣೇಶ, ವೆಂಕಟೇಶ, ರವಿ ಕುಮಾರ, ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿಗಳಾದ ಶಿವಕುಮಾರ ಬಿ. ಕೆ. ಮತ್ತು ರಮೇಶ್ ಎಂ. ಪಿ. ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.