ಇಸ್ಲಾಮಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಅವರ ಮದುವೆಯ ಬಗ್ಗೆ ಹರಿದಾಡುತ್ತಿರುವ ವಾದಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಕರಾಚಿ ಮೇಯರ್ ಹಾಗೂ ಹಿರಿಯ ಪಿಪಿಪಿ ನಾಯಕ ಮುರ್ತಜಾ ವಹಾಬ್ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ತಮ್ಮ ಮಗನ ಮದುವೆ ದಿನಾಂಕ ನಿಗದಿಪಡಿಸಲು ಲೈಖ್ಟೆನ್‌ಸ್ಟೈನ್ ಅಥವಾ ಯುರೋಪ್‌ಗೆ ಭೇಟಿ ನೀಡಿದ್ದಾರೆ ಹಾಗೂ ಬಿಲಾವಲ್ ಅವರು ಆಸ್ಟ್ರಿಯಾದ ರಾಜಮನೆತನದ ವಂಶಸ್ಥೆಯಾದ ಗ್ಲೋರಿಯಾ ವಾನ್ ಹ್ಯಾಬ್ಸ್‌ಬರ್ಗ್ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಆದರೆ ಈ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪಕ್ಷದ ಮುಖಂಡರು ಅಧಿಕೃತವಾಗಿ ತಳ್ಳಿಹಾಕಿದ್ದಾರೆ. ಬಿಲಾವಲ್ ಕುಟುಂಬದಿಂದ ಅಥವಾ ಸ್ವತಃ ಅವರ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.
ವದಂತಿಗಳ ಹಿನ್ನೆಲೆ ಏನು?
ಯುರೋಪ್ ಪ್ರವಾಸ ಮತ್ತು ಲೈಖ್ಟೆನ್‌ಸ್ಟೈನ್ ನಂಟು: ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಖಾಸಗಿ ಭೇಟಿಗಾಗಿ ಯುರೋಪ್‌ಗೆ ತೆರಳಿದ್ದಾರೆ ಎಂದು ಆಗಸ್ಟ್ 27 ರಂದು ಪಾಕಿಸ್ತಾನದ ಪ್ರೆಸಿಡೆನ್ಸಿ ಅಧಿಕೃತವಾಗಿ ಎಕ್ಸ್ (X) ನಲ್ಲಿ ಮಾಹಿತಿ ನೀಡಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ, ಅಧ್ಯಕ್ಷ ಜರ್ದಾರಿ ಅವರು ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ನಡುವೆ ಇರುವ ‘ಲೈಖ್ಟೆನ್‌ಸ್ಟೈನ್’ (Liechtenstein) ದೇಶಕ್ಕೆ ತಮ್ಮ ಮಗನ ಮದುವೆ ದಿನಾಂಕ ಹಾಗೂ ಮಾತುಕತೆಗಾಗಿ ತೆರಳಿದ್ದಾರೆ ಎಂಬ ಸುದ್ದಿಗಳು ಹರಿದಾಡಿದವು.
ಆಸ್ಟ್ರಿಯನ್ ರಾಜಕುಮಾರಿ ಜೊತೆ ವಿವಾಹ?: ಬಿಲಾವಲ್ ಭುಟ್ಟೋ (38) ಅವರು ಆಸ್ಟ್ರಿಯಾದ ಕೊನೆಯ ಚಕ್ರವರ್ತಿ ಕಾರ್ಲ್ I ರ ವಂಶಸ್ಥೆಯಾದ, ಮಾಜಿ ಆಸ್ಟ್ರಿಯನ್ ಆರ್ಚ್‌ಡಚೆಸ್ ಗ್ಲೋರಿಯಾ ವಾನ್ ಹ್ಯಾಬ್ಸ್‌ಬರ್ಗ್ ಅವರನ್ನು ಮದುವೆಯಾಗಲಿದ್ದಾರೆ ಎಂದು ಕೆಲ ಮಾಧ್ಯಮಗಳು ಮತ್ತು ಸಾಮಾಜಿಕ ಖಾತೆಗಳು ವರದಿ ಮಾಡಿದ್ದವು. ಈ ವರ್ಷದ ಕೊನೆಯೊಳಗೆ ಮದುವೆ ನಡೆಯಲಿದೆ ಎಂದೂ ಪ್ರಚಾರ ಮಾಡಲಾಗಿತ್ತು. ಕೆಲವು ಪತ್ರಿಕೆಗಳು ಈ ಕುರಿತು ವರದಿ ಮಾಡಿ ಬಳಿಕ ಅದನ್ನು ಡಿಲೀಟ್ ಕೂಡ ಮಾಡಿದ್ದವು.
ಪಿಪಿಪಿ ನಾಯಕರ ಸ್ಪಷ್ಟನೆ
ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಕರಾಚಿ ಮೇಯರ್ ಹಾಗೂ ಹಿರಿಯ ಪಿಪಿಪಿ ನಾಯಕ ಮುರ್ತಜಾ ವಹಾಬ್, ಬಿಲಾವಲ್ ಭುಟ್ಟೋ ಅವರ ಮದುವೆ ಹಾಗೂ ನಿಶ್ಚಿತಾರ್ಥದ ಕುರಿತು ಹರಿದಾಡುತ್ತಿರುವ ವರದಿಗಳು ಸಂಪೂರ್ಣ “ಸುಳ್ಳು ಮತ್ತು ಆಧಾರರಹಿತ” ಎಂದು ಸ್ಪಷ್ಟಪಡಿಸಿದ್ದಾರೆ. ಬಿಲಾವಲ್ ಕುಟುಂಬದಿಂದಾಗಲಿ ಅಥವಾ ಸ್ವತಃ ಬಿಲಾವಲ್ ಅವರ ಕಡೆಯಿಂದಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
ಹಿಂದೆ ಮದುವೆ ಬಗ್ಗೆ ಬಿಲಾವಲ್ ಹೇಳಿದ್ದೇನು?
ಬಿಲಾವಲ್ ಭುಟ್ಟೋ ತಮ್ಮ ಮದುವೆ ವಿಷಯದ ಕುರಿತು ಈ ಹಿಂದೆ ತಮಾಷೆಯಾಗಿ ಹಾಗೂ ಮುಕ್ತವಾಗಿ ಮಾತನಾಡಿದ್ದರು. 2022 ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಮದುರೆಯ ಬಗ್ಗೆ ಕೇಳಿದಾಗ, “ಖಂಡಿತವಾಗಿಯೂ ನನಗೆ ಮದುವೆಯಾಗುವ ಯೋಚನೆಯಿದೆ” ಎಂದು ನಗುತ್ತಲೇ ಉತ್ತರಿಸಿದ್ದರು, ಆದರೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅಲ್ಲದೆ, 2016 ರಲ್ಲಿ ಮಾತನಾಡುವಾಗ, “ತಮ್ಮ ವಧು ಮೊದಲು ತಮ್ಮ ಸಹೋದರಿಯರ ಮನಸ್ಸನ್ನು ಗೆಲ್ಲಬೇಕು, ಅದು ಯಾವುದೇ ಹುಡುಗಿಗೆ ಬಹಳ ಕಷ್ಟದ ಕೆಲಸ” ಎಂದು ನಗುತ್ತಾ ಹೇಳಿದ್ದರು.





Leave a comment