ಚೆನ್ನೈ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದ ಮೇಲೆ ಚೆನ್ನೈ ಪೊಲೀಸರು ಖ್ಯಾತ ಉದ್ಯಮಿ ವೀರಮಣಿ ಹಾಗೂ ಆತನ ಆಪ್ತರಾದ ಶಾಂತಿ ಮತ್ತು ಆಕೆಯ ಪತಿ ಮಹೇಂದ್ರ ಚಿಕ್ಕನ್ ಅವರನ್ನು ಬಂಧಿಸಿದ್ದಾರೆ. ಪೆನ್‌ಡ್ರೈವ್‌ನಿಂದ ಕರಾಳ ಸತ್ಯ ಬಯಲಾಗಿದೆ.
ಅಕ್ಟೋಬರ್ 6, 2025 ರಂದು ಅಪರಿಚಿತ ವ್ಯಕ್ತಿಯೊಬ್ಬರು ಗ್ರೇಟರ್ ಚೆನ್ನೈ ಪೊಲೀಸರಿಗೆ ಪೆನ್‌ಡ್ರೈವ್ ಮತ್ತು ಲಿಖಿತ ದೂರು ನೀಡಿದಾಗ ಈ ಕರಾಳ ಪ್ರಕರಣ ಬೆಳಕಿಗೆ ಬಂದಿದೆ. ಪೆನ್‌ಡ್ರೈವ್‌ನಲ್ಲಿದ್ದ ವಿಡಿಯೋದಲ್ಲಿ, ವಯಸ್ಸಾದ ವ್ಯಕ್ತಿಯೊಬ್ಬ ಶಾಂತಿ ಎಂಬುವವರಿಗೆ ಸೇರಿದ ಮನೆಯ ಮಲಗುವ ಕೋಣೆಯಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದು ಸೆರೆಯಾಗಿತ್ತು. ಅಕ್ಟೋಬರ್ 7 ರಂದು ಪ್ರಕರಣ ದಾಖಲಿಸಿಕೊಂಡ ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು, ವಿಡಿಯೋದಲ್ಲಿರುವ ವ್ಯಕ್ತಿ ಉದ್ಯಮಿ ವೀರಮಣಿ ಎಂದು ದೃಢಪಡಿಸಿದ್ದಾರೆ.
ತೇನಾಂಪೇಟೆಯಲ್ಲಿ ಬಾಡಿಗೆ ಮನೆ ಪಡೆದಿದ್ದ ವೀರಮಣಿ, ಅದರ ಸಂಪೂರ್ಣ ನಿರ್ವಹಣೆಯನ್ನು ಶಾಂತಿ ಮತ್ತು ಮಹೇಂದ್ರ ದಂಪತಿಗೆ ವಹಿಸಿದ್ದರು.
ಈ ಮನೆಗೆ ಹಲವು ಅಪ್ರಾಪ್ತ ಬಾಲಕಿಯರನ್ನು ಕರೆತಂದು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಕಾರ್ಯಾಚರಣೆ ವೇಳೆ ಪೊಲೀಸರು ವಿಡಿಯೋ ಸಾಕ್ಷ್ಯಗಳು, ಮಹತ್ವದ ದಾಖಲೆಗಳು ಹಾಗೂ ಸಂತ್ರಸ್ತೆಯರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ವ್ಯಾಪಕತೆ ಮತ್ತು ಇತರರ ಭಾಗಿಯಾಗುವಿಕೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.





Leave a comment