ಹೈದರಾಬಾದ್: ವೈರಲ್ ವಿಡಿಯೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ತೆಲಂಗಾಣ ವಿಧಾನ ಪರಿಷತ್ ಸದಸ್ಯ ಮಿರ್ಜಾ ರಹಮತ್ ಬೇಗ್ ಅವರನ್ನು ಅಸಾದುದ್ದೀನ್ ಒವೈಸಿ ನೇತೃತ್ವದ AIMIM ಪಕ್ಷದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟಿಸಲಾಗಿದೆ. ಪಕ್ಷದ ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ.
ಬ್ಲ್ಯಾಕ್‌ಮೇಲ್ ಆರೋಪ – ಸೈಬರ್ ಕ್ರೈಮ್‌ಗೆ ದೂರು:
ಈ ಬೆಳವಣಿಗೆಯ ಬೆನ್ನಲ್ಲೇ, ತಮ್ಮ ವಿರುದ್ಧ ಹರಿದಾಡುತ್ತಿರುವ ವಿಡಿಯೋ ಎಡಿಟ್ ಮಾಡಿದ್ದಾಗಿದೆ ಹಾಗೂ ಕೆಲ ಅಪರಿಚಿತ ವ್ಯಕ್ತಿಗಳು ಇದನ್ನು ಇಟ್ಟುಕೊಂಡು ಹಣ ವಸೂಲಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಹಮತ್ ಬೇಗ್ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ಪಕ್ಷದಿಂದ ಉಚ್ಚಾಟನೆ ಶಿಕ್ಷೆಯಲ್ಲ, ಸಿಬಿಐ ತನಿಖೆಯಾಗಲಿ – ಬಿಜೆಪಿ:
AIMIM ಕ್ರಮವನ್ನು ಕಟುವಾಗಿ ಟೀಕಿಸಿರುವ ತೆಲಂಗಾಣ ಬಿಜೆಪಿ, ಪಕ್ಷದಿಂದ ಅಮಾನತು ಮಾಡುವುದಷ್ಟೇ ನ್ಯಾಯವಲ್ಲ ಎಂದು ಹೇಳಿದೆ. ಬಿಜೆಪಿ ವಕ್ತಾರ ಎನ್.ವಿ. ಸುಭಾಷ್ ಮಾತನಾಡಿ, “ಮಹಿಳೆಯರು ಮತ್ತು ಅಪ್ರಾಪ್ತರ ಮೇಲಿನ ಅಪರಾಧ ಆರೋಪಗಳು ಕೇಳಿಬಂದಾಗ ಪಕ್ಷದಿಂದ ಹೊರಹಾಕುವುದು ಪರಿಹಾರವಾಗುವುದಿಲ್ಲ. ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕಿದ್ದು, ಹೈಕೋರ್ಟ್ ಉಸ್ತುವಾರಿಯ ತನಿಖೆ ಅಥವಾ ಸಿಬಿಐ (CBI) ತನಿಖೆಗೆ ವಹಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಗೋಶಾಮಹಲ್ ಶಾಸಕ ಟಿ. ರಾಜಾ ಸಿಂಗ್ ಮಾತನಾಡಿ, “ಸೌದಿ ಅರೇಬಿಯಾದಲ್ಲಿ ಉಮ್ರಾ ಯಾತ್ರೆಯಲ್ಲಿದ್ದ ಎಂಎಲ್‌ಸಿಯನ್ನು ಮಧ್ಯರಾತ್ರಿ ಹೈದರಾಬಾದ್‌ಗೆ ಕರೆಸಿಕೊಂಡು ರಾಜೀನಾಮೆ ಪಡೆದಿದ್ದೇಕೆ? ಇದರ ಹಿಂದಿನ ನೈಜ ಕಾರಣವನ್ನು ಅಸಾದುದ್ದೀನ್ ಒವೈಸಿ ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಚಾಲಕನಿಂದ ಎಂಎಲ್‌ಸಿವರೆಗೆ ಬೆಳೆದಿದ್ದ ಬೇಗ್:
ಆರಂಭದಲ್ಲಿ AIMIM ಶಾಸಕರೊಬ್ಬರ ಕಾರು ಚಾಲಕರಾಗಿ ವೃತ್ತಿಜೀವನ ಆರಂಭಿಸಿದ್ದ ಮಿರ್ಜಾ ರಹಮತ್ ಬೇಗ್, ಬಳಿಕ ಪಕ್ಷದಲ್ಲಿ ಸಕ್ರಿಯವಾಗಿ ಬೆಳೆದಿದ್ದರು. ಫೆಬ್ರವರಿ 2023 ರಲ್ಲಿ ಹೈದರಾಬಾದ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ AIMIM ಅಭ್ಯರ್ಥಿಯಾಗಿ ಸ್ಪರ್ಧಿಸಿ ಅವಿರೋಧವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.





Leave a comment