Home ದಾವಣಗೆರೆ ಭದ್ರಾ ಮೇಲ್ದಂಡೆಗೆ ದಿಕ್ಸೂಚಿಯಾದ ಶ್ರೀ ತರಳಬಾಳು ಜಗದ್ಗುರುಗಳವರು; ಮಧ್ಯ ಕರ್ನಾಟಕದ ರೈತರ ಬಾಳಿಗೆ ಬೆಳಕಾಗಲು ಸಚಿವ ಚೆಲುವರಾಯಸ್ವಾಮಿಗೆ ಮಾರ್ಗದರ್ಶನ
ದಾವಣಗೆರೆನವದೆಹಲಿಬೆಂಗಳೂರು

ಭದ್ರಾ ಮೇಲ್ದಂಡೆಗೆ ದಿಕ್ಸೂಚಿಯಾದ ಶ್ರೀ ತರಳಬಾಳು ಜಗದ್ಗುರುಗಳವರು; ಮಧ್ಯ ಕರ್ನಾಟಕದ ರೈತರ ಬಾಳಿಗೆ ಬೆಳಕಾಗಲು ಸಚಿವ ಚೆಲುವರಾಯಸ್ವಾಮಿಗೆ ಮಾರ್ಗದರ್ಶನ

Share
ಶ್ರೀ ತರಳಬಾಳು
Share

ಬೆಂಗಳೂರು, ಆರ್.ಟಿ.ನಗರ: ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಕರ್ನಾಟಕ ಸರ್ಕಾರದ ನೂತನ ಜಲ ಸಂಪನ್ಮೂಲ ಸಚಿವರಾದ ಶ್ರೀ ಚೆಲುವರಾಯಸ್ವಾಮಿ ಅವರು ಸರ್ವತ್ರ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಭೇಟಿ ಮಾಡಿ, ಫಲಪುಷ್ಪ ಸಮರ್ಪಿಸಿ ಭಕ್ತಿಪೂರ್ವಕವಾಗಿ ಪ್ರಣಾಮ ಸಲ್ಲಿಸಿ ಆಶೀರ್ವಾದ ಪಡೆದರು.

ಜಲ ಸಂಪನ್ಮೂಲ ಖಾತೆ ನಿಮ್ಮ ಕೈಯಲ್ಲಿರುವುದು ಸಂತೋಷ ತಂದಿದೆ

ಸಚಿವರಿಗೆ ಆಶೀರ್ವದಿಸಿದ ಶ್ರೀ ಜಗದ್ಗುರುಗಳವರು, “ನಮಗೆ ಹೆಚ್ಚು ಆಪ್ತವಾದ ಎರಡು ಇಲಾಖೆಗಳೆಂದರೆ ಜಲ ಸಂಪನ್ಮೂಲ ಇಲಾಖೆ ಮತ್ತು ಕೃಷಿ ಇಲಾಖೆ. ಅಂತಹ ಮಹತ್ವದ ಜಲ ಸಂಪನ್ಮೂಲ ಇಲಾಖೆಯ ಜವಾಬ್ದಾರಿ ತಮಗೆ ದೊರೆತಿರುವುದು ಹೆಚ್ಚು ಸಂತೋಷ ತಂದಿದೆ. ರೈತರ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಿ” ಎಂದು ಹಿತವಚನ ನುಡಿದರು.

ಶ್ರೀ ಜಗದ್ಗುರುಗಳವರ ಮಾರ್ಗದರ್ಶನದಲ್ಲಿ ಸಾಸ್ವೇಹಳ್ಳಿ, ಭರಮಸಾಗರ, ಜಗಳೂರು, ಹಳೇಬೀಡು, ಆಣೂರು, ಬುಡಪನಹಳ್ಳಿ ಸೇರಿದಂತೆ ವಿವಿಧ ಏತ ನೀರಾವರಿ ಯೋಜನೆಗಳ ಮೂಲಕ ನೂರಾರು ಕೆರೆಗಳಿಗೆ ನೀರು ಹರಿದಿರುವುದರ ಆಡಳಿತಾತ್ಮಕ ಹಾಗೂ ತಾಂತ್ರಿಕ ಯಶಸ್ಸಿನ ಹಿಂದೆ ಶ್ರೀ ಜಗದ್ಗುರುಗಳವರ ಮಾರ್ಗದರ್ಶನವಿರುವ ವಿಚಾರವನ್ನು ಇತ್ತೀಚೆಗೆ ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿಯೂ ಚರ್ಚಿಸಲಾಗಿತ್ತು ಎಂದು ಸಚಿವ ಶ್ರೀ ಚೆಲುವರಾಯಸ್ವಾಮಿ ತಿಳಿಸಿದರು.

ಶ್ರೀ ಜಗದ್ಗುರುಗಳವರ ತಾಂತ್ರಿಕ ಜ್ಞಾನಕ್ಕೆ ಸಚಿವರ ಮೆಚ್ಚುಗೆ

ಶ್ರೀ ಜಗದ್ಗುರುಗಳವರ ತಾಂತ್ರಿಕ ಜ್ಞಾನ, ಜಲ ನಿರ್ವಹಣೆಯ ಮೇಲಿನ ಆಳವಾದ ಅರಿವು ಹಾಗೂ ಕೆರೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ಎದುರಾಗುವ ತಾಂತ್ರಿಕ ತೊಂದರೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯದ ಕುರಿತು ಸಚಿವರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಧ ನೀರಾವರಿ ಯೋಜನೆಗಳ ಕುರಿತು ಇಂಜಿನಿಯರ್‌ಗಳೊಂದಿಗೆ ಶ್ರೀ ಜಗದ್ಗುರುಗಳವರು ನಡೆಸುವ ನೇರ ಸಂವಾದ, ಕಾಮಗಾರಿಗಳ ಪ್ರಗತಿ, ನೀರು ಹರಿಯುವ ಮಾರ್ಗದಲ್ಲಿನ ತಾಂತ್ರಿಕ ಅಡಚಣೆಗಳು ಹಾಗೂ ಅವುಗಳ ಪರಿಹಾರೋಪಾಯಗಳ ಕುರಿತು ನೀಡುವ ಸಲಹೆಗಳನ್ನು ಸಚಿವರು ಸ್ಮರಿಸಿದರು. ವಾಟ್ಸಾಪ್ ಗ್ರೂಪ್‌ಗಳಲ್ಲಿಯೂ ಯೋಜನೆಗಳ ಪ್ರಗತಿ ಹಾಗೂ ತಾಂತ್ರಿಕ ಸಮಸ್ಯೆಗಳ ಕುರಿತು ಶ್ರೀ ಜಗದ್ಗುರುಗಳವರು ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳೊಂದಿಗೆ ನಡೆಸುತ್ತಿದ್ದ ಸಂವಾದ ಗಮನಾರ್ಹವಾಗಿದೆ ಎಂದು ಹೇಳಿದರು.

ಶ್ರೀ ಜಗದ್ಗುರುಗಳವರಿಗೆ ಇರುವ ಬಹುಭಾಷಾ ಪಾಂಡಿತ್ಯದ ಜೊತೆಗೆ ತಾಂತ್ರಿಕ ವಿಷಯಗಳನ್ನು ಆಳವಾಗಿ ಗ್ರಹಿಸಿ, ಅವುಗಳನ್ನು ಇಂಜಿನಿಯರ್‌ಗಳೊಂದಿಗೆ ಸಮರ್ಥವಾಗಿ ಚರ್ಚಿಸುವ ವಿಶಿಷ್ಟ ಸಾಮರ್ಥ್ಯಕ್ಕೆ ಸಚಿವ ಶ್ರೀ ಚೆಲುವರಾಯಸ್ವಾಮಿ ಅವರು ತಮ್ಮ ಗಾಢ ಗೌರವ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು.

“ರೈತನಿಗೆ ನೀರು, ವಿದ್ಯುತ್ ಕೊಟ್ಟರೆ ಆತನೇ ಸರ್ಕಾರದ ಸಾಲ ತೀರಿಸುತ್ತಾನೆ”

ರೈತರ ಬದುಕಿನ ಕುರಿತು ಮಾತನಾಡಿದ ಶ್ರೀ ಜಗದ್ಗುರುಗಳವರು, “ರೈತನಿಗೆ ನೀರು ಮತ್ತು ವಿದ್ಯುತ್ ಅನ್ನು ಸರ್ಕಾರಗಳು ಸಮರ್ಪಕವಾಗಿ ನೀಡಿದರೆ, ರಾಜ್ಯದ ರೈತನೇ ಸರ್ಕಾರ ಮಾಡಿರುವ ಸಾಲವನ್ನು ತೀರಿಸುವ ಶಕ್ತಿ ಹೊಂದಿದ್ದಾನೆ” ಎಂದು ನುಡಿದರು.

ರೈತನ ಕೈಗೆ ನೀರು ತಲುಪಿದರೆ ಕೃಷಿ ಉತ್ಪಾದನೆ ಹೆಚ್ಚುವುದರ ಜೊತೆಗೆ ಗ್ರಾಮೀಣ ಆರ್ಥಿಕತೆ ಬಲಗೊಳ್ಳುತ್ತದೆ. ರೈತ ಸಮೃದ್ಧನಾದರೆ ರಾಜ್ಯದ ಆರ್ಥಿಕ ವ್ಯವಸ್ಥೆಯೂ ಬಲಿಷ್ಠವಾಗುತ್ತದೆ ಎಂಬ ದೂರದೃಷ್ಟಿಯನ್ನು ಶ್ರೀ ಜಗದ್ಗುರುಗಳವರು ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ: ಮಧ್ಯ ಕರ್ನಾಟಕದ ರೈತರ ನಿರೀಕ್ಷೆಯ ಜೀವಜಲ ಯೋಜನೆ

ಭೇಟಿಯ ಸಂದರ್ಭದಲ್ಲಿ ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಜೀವಜಲ ಒದಗಿಸುವ ಮಹತ್ವಾಕಾಂಕ್ಷಿ ಭದ್ರಾ ಮೇಲ್ದಂಡೆ ಯೋಜನೆಯ ಕುರಿತು ಶ್ರೀ ಜಗದ್ಗುರುಗಳವರು ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.

ಮಧ್ಯ ಕರ್ನಾಟಕದ ಹನ್ನೆರಡು ಬರಪೀಡಿತ ತಾಲ್ಲೂಕುಗಳ ಸುಮಾರು 2.25 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಈ ಯೋಜನೆ, ಲಕ್ಷಾಂತರ ರೈತ ಕುಟುಂಬಗಳ ಬದುಕಿಗೆ ಭದ್ರತೆ ನೀಡಬಲ್ಲ ಮಹತ್ವದ ಯೋಜನೆಯಾಗಿದೆ.

ಕೇಂದ್ರ ಸರ್ಕಾರದ ನೆರವು ಪಡೆಯಲು ತಾಂತ್ರಿಕ ಸಲಹಾ ಸಮಿತಿ (TAC) ಒಪ್ಪಿಗೆ, ಸಾರ್ವಜನಿಕ ಹೂಡಿಕೆ ಮಂಡಳಿ (PIB) ಶಿಫಾರಸು, ಕೇಂದ್ರ ಸಚಿವ ಸಂಪುಟದ ಅನುಮೋದನೆ, ಕೇಂದ್ರ ಸರ್ಕಾರದ ಆದೇಶ ಹಾಗೂ ಕೇಂದ್ರ–ರಾಜ್ಯ ಸರ್ಕಾರಗಳ ನಡುವಿನ ಒಡಂಬಡಿಕೆ (MOU) ಎಂಬ ಐದು ಹಂತಗಳನ್ನು ದಾಟಬೇಕಾಗಿದೆ.

ಈ ಹಿಂದೆ ಮೊದಲ ಎರಡು ಹಂತಗಳನ್ನು ದಾಟಿ 2023–24ರ ಕೇಂದ್ರ ಬಜೆಟ್‌ನಲ್ಲಿ ₹5,300 ಕೋಟಿ ಅನುದಾನಕ್ಕೂ ಅವಕಾಶ ದೊರೆತಿತ್ತು. ಆದರೆ ರಾಷ್ಟ್ರೀಯ ಯೋಜನೆಯ ನೀತಿ ಸ್ಥಗಿತಗೊಂಡು PMKSY ಜಾರಿಗೆ ಬಂದ ಹಿನ್ನೆಲೆಯಲ್ಲಿ, ಹಾವು–ಏಣಿ ಆಟದಲ್ಲಿ ಎರಡು ಏಣಿಗಳನ್ನು ಹತ್ತಿದ ಬಳಿಕ ಹಾವು ಕಚ್ಚಿ ಮತ್ತೆ ಕೆಳಗೆ ಬಿದ್ದಂತಾಗಿ, ಯೋಜನೆಯು ಮತ್ತೆ ಮೊದಲ ಹಂತದಿಂದಲೇ ಪ್ರಾರಂಭಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ದೆಹಲಿ ಪ್ರಯತ್ನಕ್ಕೆ ಫಲ ನೀಡಿದ TAC ಒಪ್ಪಿಗೆ

ಈ ಹಿನ್ನೆಲೆಯಲ್ಲಿ ಮಾರ್ಚ್ 20ರಂದು ದೆಹಲಿಯಲ್ಲಿ TAC ಸಭೆ ನಡೆಯಲಿದೆ ಎಂಬ ಮಾಹಿತಿ ದೊರೆತಾಗ, ಸಿರಿಗೆರೆಯಲ್ಲಿ ಯುಗಾದಿ ಆಚರಣೆಯನ್ನು ಬದಿಗೊತ್ತಿ ಎರಡು ದಿನ ಮುಂಚಿತವಾಗಿ ದೆಹಲಿಗೆ ತೆರಳಲಾಯಿತು. ಸಂಸದ ಬಸವರಾಜ ಬೊಮ್ಮಾಯಿಯವರ ನಿವಾಸದಲ್ಲಿ ವಾಸ್ತವ್ಯ ಹೂಡಿ, ಯೋಜನೆಯ ಅನುಮೋದನೆಗಾಗಿ ಸಂಬಂಧಪಟ್ಟ ಪ್ರಮುಖರೊಂದಿಗೆ ನಿರಂತರ ಸಂಪರ್ಕ ಸಾಧಿಸಲಾಯಿತು.

ಮಾರ್ಚ್ 18ರಂದು ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ದರ್ಶನಕ್ಕಾಗಿ ಆಗಮಿಸಿದರು. ಬಳಿಕ ಕೇಂದ್ರ ಸಚಿವ ವಿ. ಸೋಮಣ್ಣ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದರಾದ ಗೋವಿಂದ ಕಾರಜೋಳ, ಬಿ.ವೈ. ರಾಘವೇಂದ್ರ ಸೇರಿದಂತೆ ಹಲವು ಪ್ರಮುಖ ರಾಜಕೀಯ ಧುರೀಣರು ಆಗಮಿಸಿ ಯೋಜನೆಯ ಕುರಿತು ಚರ್ಚಿಸಿದರು.

ನೀರಾವರಿ ಯೋಜನೆಗಳ ಕುರಿತು ಅಪಾರ ಅನುಭವ ಹೊಂದಿರುವ ಬಸವರಾಜ ಬೊಮ್ಮಾಯಿಯವರು TAC ಸಮಿತಿಯ ಕಾರ್ಯದರ್ಶಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಕೇಂದ್ರ ಸಚಿವ ವಿ. ಸೋಮಣ್ಣ ಅವರೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿದರು.

ಮಾರ್ಚ್ 19ರಂದು ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಎಫ್.ಹೆಚ್. ಲಮಾಣಿ ಹಾಗೂ ಅವರ ತಂಡದ ಎಂ.ಎಸ್. ಹರ್ಷ ಮತ್ತು ಸಂದೀಪ್ ನಾಡಿಗೇರ್ ಅವರೊಂದಿಗೆ ಇಡೀ ದಿನ ಸುದೀರ್ಘ ಸಮಾಲೋಚನೆ ನಡೆಯಿತು.

ಮರುದಿನ ಆಗಸ್ಟ್ 20ರಂದು ಮಧ್ಯಾಹ್ನ 3 ಗಂಟೆಗೆ TAC ಸಭೆ ಆರಂಭವಾಯಿತು. ಸಂಜೆ 5 ಗಂಟೆಯ ಸುಮಾರಿಗೆ ಭದ್ರಾ ಮೇಲ್ದಂಡೆ ಯೋಜನೆ ಚರ್ಚೆಗೆ ಬಂದಿತು. ಮುಖ್ಯ ಇಂಜಿನಿಯರ್ ಎಫ್.ಹೆಚ್. ಲಮಾಣಿ ಅವರು ₹21,167.93 ಕೋಟಿ ಪರಿಷ್ಕೃತ ಯೋಜನಾ ವೆಚ್ಚವನ್ನು ಸಮರ್ಥವಾಗಿ ಮಂಡಿಸಿದರು. ಸುಮಾರು 20 ನಿಮಿಷಗಳ ಚರ್ಚೆಯ ಬಳಿಕ ತಾಂತ್ರಿಕ ಸಲಹಾ ಸಮಿತಿಯು ಯೋಜನೆಗೆ ಒಪ್ಪಿಗೆ ನೀಡಿತು.

ದೆಹಲಿಯ ಬೊಮ್ಮಾಯಿಯವರ ನಿವಾಸದಲ್ಲಿ ಕೈಯಲ್ಲಿ ಮೊಬೈಲ್ ಹಿಡಿದು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದ ನಮಗೆ, ಇಂಜಿನಿಯರ್ ಲಮಾಣಿಯವರಿಂದ “TAC ಒಪ್ಪಿಗೆ ದೊರೆತಿದೆ” ಎಂಬ ಸುದ್ದಿ ಬಂದ ಕ್ಷಣ, ಬಹುಕಾಲದ ನಿರೀಕ್ಷೆಯ ನಂತರ ಕಂಡ ಬಿದಿಗೆಯ ಚಂದ್ರದರ್ಶನದಂತಿತ್ತು.

ಪೂರ್ಣಚಂದ್ರ ದರ್ಶನದತ್ತ ಮುಂದಿನ ಹೆಜ್ಜೆ

TAC ಒಪ್ಪಿಗೆ ಮಹತ್ವದ ಮುನ್ನಡೆಯಾದರೂ, ಇನ್ನೂ PIB ಶಿಫಾರಸು, ಕೇಂದ್ರ ಸಚಿವ ಸಂಪುಟದ ಅನುಮೋದನೆ, ಕೇಂದ್ರ ಸರ್ಕಾರದ ಆದೇಶ ಹಾಗೂ MOU ಹಂತಗಳು ಬಾಕಿಯಿವೆ. ಇವು ಪೂರ್ಣಗೊಂಡು ಕೇಂದ್ರದ ನೆರವು ದೊರೆತರೆ ₹6,646.96 ಕೋಟಿ ಅನುದಾನ ಸಿಗುವ ನಿರೀಕ್ಷೆಯಿದೆ.

ತಜ್ಞ ಇಂಜಿನಿಯರ್‌ಗಳ ಪ್ರಕಾರ ಅಗತ್ಯ ಹಣಕಾಸು ಶೀಘ್ರವಾಗಿ ದೊರೆತರೆ ಇನ್ನೆರಡು ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಸಾಧ್ಯತೆಯಿದೆ. ಆಗ ಭದ್ರೆಯ ನೀರು ಮಧ್ಯ ಕರ್ನಾಟಕದ ರೈತರ ಹೊಲಗಳಿಗೆ ಹರಿದು, ದಶಕಗಳ ನಿರೀಕ್ಷೆಯ ಕನಸು ನನಸಾಗಲಿದೆ.

22 ಕೆರೆಗಳ ಏತ ನೀರಾವರಿ ಯೋಜನೆಗೂ ಶ್ರೀ ಜಗದ್ಗುರುಗಳವರ ಕಾಳಜಿ

ದಾವಣಗೆರೆ ತಾಲ್ಲೂಕಿನ 22 ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯ ಬಗ್ಗೆಯೂ ಶ್ರೀ ಜಗದ್ಗುರುಗಳವರು ಸಚಿವ ಶ್ರೀ ಚೆಲುವರಾಯಸ್ವಾಮಿ ಅವರೊಂದಿಗೆ ವಿವರವಾಗಿ ಚರ್ಚಿಸಿದರು.

2012ರಲ್ಲಿ ದಾವಣಗೆರೆ ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರ ನೀರಾವರಿ ಹಾಗೂ ಕುಡಿಯುವ ನೀರಿನ ಬೇಡಿಕೆಯನ್ನು ನೀಗಿಸುವ ಉದ್ದೇಶದಿಂದ ಯೋಜನೆ ಜಾರಿಗೆ ಬಂದಿತ್ತು. ಆದರೆ ದಶಕ ಕಳೆದರೂ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳದೆ, ಬೆರಳೆಣಿಕೆಯ ಕೆರೆಗಳನ್ನು ಹೊರತುಪಡಿಸಿ ಬಹುತೇಕ ಕೆರೆಗಳು ನೀರಿಲ್ಲದೆ ಉಳಿದಿರುವ ಬಗ್ಗೆ ಶ್ರೀ ಜಗದ್ಗುರುಗಳವರು ಸಚಿವರ ಗಮನ ಸೆಳೆದರು.

ಈ ಹಿಂದೆ ನಡೆದ ಕಳಪೆ ಕಾಮಗಾರಿಯಿಂದ ಪೈಪ್‌ಲೈನ್ ಹಾಳಾಗಿ ಕೋಟ್ಯಂತರ ರೂಪಾಯಿ ವ್ಯರ್ಥವಾಗಿರುವುದು, ಪ್ರಸ್ತುತ ಹಲವು ಉಪಕರಣಗಳು ಹಳೆಯದಾಗಿರುವುದು ಹಾಗೂ ಹೊಸ ಪೈಪ್‌ಲೈನ್ ಮತ್ತು ಹೊಸ ಮೋಟಾರ್‌ಗಳನ್ನು ಅಳವಡಿಸುವ ಅಗತ್ಯವಿರುವುದನ್ನೂ ಚರ್ಚಿಸಲಾಯಿತು.

ಬಾಕಿ ಉಳಿದಿರುವ ಪೈಪ್‌ಲೈನ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಹೊಸ ಅನುದಾನದಡಿ ಟೆಂಡರ್ ಪ್ರಕ್ರಿಯೆಗಳನ್ನು ಚುರುಕುಗೊಳಿಸಿ, ಜಾಕ್‌ವೆಲ್‌ನಿಂದ ನೀರನ್ನು ಲಿಫ್ಟ್ ಮಾಡಿ ಕೆರೆಗಳಿಗೆ ಹರಿಸುವ ಮೂಲಕ ರೈತರಿಗೆ ಯೋಜನೆಯ ನೈಜ ಪ್ರಯೋಜನ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂಬ ವಿಚಾರವಾಗಿ ಶ್ರೀ ಜಗದ್ಗುರುಗಳವರು ಸಚಿವರಿಗೆ ಸಲಹೆ ನೀಡಿದರು.

ಭದ್ರಾ ಮೇಲ್ದಂಡೆ ಸೇರಿದಂತೆ ಮಧ್ಯ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಆಳವಾದ ಅರಿವು ಹೊಂದಿರುವ ಶ್ರೀ ಜಗದ್ಗುರುಗಳವರು, 22 ಕೆರೆಗಳ ಯೋಜನೆಯ ತಾಂತ್ರಿಕ ಸಮಸ್ಯೆಗಳು ಹಾಗೂ ನೀರು ಹರಿಸುವಲ್ಲಿನ ಅಡಚಣೆಗಳ ಬಗ್ಗೆಯೂ ಸಚಿವರೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರು.

ಶ್ರೀ ಜಗದ್ಗುರುಗಳವರ ಮಾರ್ಗದರ್ಶನಕ್ಕೆ ಸಚಿವ ಚೆಲುವರಾಯಸ್ವಾಮಿಯವರ ಸಮ್ಮತಿ

ಭದ್ರಾ ಮೇಲ್ದಂಡೆ ಹಾಗೂ ದಾವಣಗೆರೆ ತಾಲ್ಲೂಕು 22 ಕೆರೆಗಳಂತಹ ರೈತರ ಬದುಕಿಗೆ ನೇರವಾಗಿ ಸಂಬಂಧಿಸಿದ ನೀರಾವರಿ ಯೋಜನೆಗಳ ಕುರಿತು ಶ್ರೀ ಜಗದ್ಗುರುಗಳವರು ನೀಡಿದ ಸಲಹೆ ಮತ್ತು ಮಾರ್ಗದರ್ಶನವನ್ನು ಸಚಿವ ಶ್ರೀ ಚೆಲುವರಾಯಸ್ವಾಮಿ ಅವರು ಅತ್ಯಂತ ಗೌರವದಿಂದ ಆಲಿಸಿದರು.

“ಪೂಜ್ಯರ ಮಾರ್ಗದರ್ಶನವನ್ನು , ತಮ್ಮ ಆಶಯದಂತೆ ರೈತರ ಹಿತಕ್ಕೆ ಆದ್ಯತೆ ನೀಡಿ, ಜಲ ಸಂಪನ್ಮೂಲ ಇಲಾಖೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದಾಗಿ” ಸಚಿವ ಶ್ರೀ ಚೆಲುವರಾಯಸ್ವಾಮಿ ಅವರು ಶ್ರೀ ಜಗದ್ಗುರುಗಳವರಲ್ಲಿ ಅರಿಕೆ ಮಾಡಿಕೊಂಡರು.

ಇದಕ್ಕೆ ಪ್ರತಿಯಾಗಿ ಶ್ರೀ ಜಗದ್ಗುರುಗಳವರು, “ಕೇಂದ್ರ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಸೆದು, ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಬೇಕು. ಮಧ್ಯ ಕರ್ನಾಟಕದ ರೈತರ ಬಾಳಿಗೆ ಬೆಳಕು ನೀಡುವ ಮಹತ್ವದ ಜಲ ಸಂಪನ್ಮೂಲ ಖಾತೆ ನಿಮ್ಮ ಕೈಯಲ್ಲಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇವಲ ಇಲಾಖೆಯ ಯೋಜನೆಯಾಗಿ ನೋಡದೆ, ಬರಪೀಡಿತ ರೈತರ ಬದುಕಿನ ಆಶಾಕಿರಣವೆಂದು ಪರಿಗಣಿಸಿ ವೈಯಕ್ತಿಕ ಕಾಳಜಿಯಿಂದ ಮುನ್ನಡೆಸಬೇಕು. ಅಗತ್ಯ ಅನುಮೋದನೆಗಳು ಹಾಗೂ ಕೇಂದ್ರದ ಅನುದಾನ ತ್ವರಿತವಾಗಿ ದೊರಕುವಂತೆ ವಿಶೇಷ ಪ್ರಯತ್ನ ಮಾಡಬೇಕು” ಎಂದು ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಸಮರ್ಥ ಶಾಮನೂರು, ರಾಜ್ಯ ರೈತ ಸಂಘ ಹಾಗೂ ಸಾಧು ವೀರಶೈವ ಸಮಾಜದ ಅಧ್ಯಕ್ಷರಾದ ಶ್ರೀ ಹೆಚ್.ಆರ್. ಬಸವರಾಜಪ್ಪ, ತರಳಬಾಳು ಕೇಂದ್ರದ ಅಧ್ಯಕ್ಷರಾದ ಶ್ರೀ ಸಿ. ಚಂದ್ರಪ್ಪ, ಕಾರ್ಯದರ್ಶಿ ಶ್ರೀ ವಿಶ್ವನಾಥ್ ಬಾತಿ, ಜಾವಗಲ್ ಮಂಜುನಾಥ್, ಶ್ರೀ ನಂದಿ ಡೆವಲಪರ್ ಗಂಗಣ್ಣ, ಶ್ರೀ ತಿಪ್ಪೇಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles