ಮಾಲ್ಡಾ / ಹೌರಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಒಂದೇ ದಿನ 10 ನವಜಾತ ಶಿಶುಗಳು ಮೃತಪಟ್ಟಿರುವ ದುರಂತ ಘಟನೆ ವರದಿಯಾಗಿದೆ. ಈ ಘಟನೆಯಿಂದಾಗಿ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯ ಆರೋಗ್ಯ ಇಲಾಖೆ (ಸ್ವಾಸ್ಥ್ಯ ಭವನ), ಆಸ್ಪತ್ರೆ ಆಡಳಿತ ಮಂಡಳಿಯಿಂದ ಸಮಗ್ರ ವರದಿ ಕೋರಿದೆ.
ಆಸ್ಪತ್ರೆಯ ಮೂಲಗಳ ಪ್ರಕಾರ, ಮೃತಪಟ್ಟ 10 ಶಿಶುಗಳಲ್ಲಿ 8 ಶಿಶುಗಳನ್ನು ಇತರ ಸರ್ಕಾರಿ ಆಸ್ಪತ್ರೆಗಳು ಹಾಗೂ ಖಾಸಗಿ ನರ್ಸಿಂಗ್ ಹೋಮ್‌ಗಳಿಂದ ಅತ್ಯಂತ ಗಂಭೀರ ಸ್ಥಿತಿಯಲ್ಲಿ ಮಾಲ್ಡಾ ಆಸ್ಪತ್ರೆಗೆ ಉಲ್ಲೇಖ (Referred) ಮಾಡಲಾಗಿತ್ತು. ಶ್ವಾಸಕೋಶದ ತೊಂದರೆ, ಜಾಂಡೀಸ್ ಹಾಗೂ ಹೃದಯ ಸಂಬಂಧಿ ಗಂಭೀರ ಸಮಸ್ಯೆಗಳಿಂದ ಶಿಶುಗಳು ಸಾವನ್ನಪ್ಪಿವೆ ಎಂದು ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಪ್ರಸೆಂಜಿತ್ ಬಾರ್ ತಿಳಿಸಿದ್ದಾರೆ. ಘಟನೆ ಕುರಿತು ಪ್ರಾಥಮಿಕ ವರದಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಪೂರ್ಣ ಪ್ರಮಾಣದ ವರದಿ ರವಾನಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೌರಾದಲ್ಲಿ ಅಗ್ನಿ ಅವಘಡ: ವೃದ್ಧೆ ಸಜೀವ ದಹನ
ಮತ್ತೊಂದೆಡೆ, ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಅಂಕೂರ್‌ಹಾಟಿ ಪ್ರದೇಶದ ಐದು ಮಹಡಿಗಳ ವಸತಿ ಕಟ್ಟಡವೊಂದರಲ್ಲಿ ಬುಧವಾರ ಮಧ್ಯಾಹ್ನ ದಿಢೀರ್ ಬೆಂಕಿ ಕಾಣಿಸಿಕೊಂಡು 65 ವರ್ಷದ ರೂಪಾ ಮುಖರ್ಜಿ (ಗೋಪಾ ಮುಖರ್ಜಿ) ಎಂಬ ವೃದ್ಧೆ ಸಜೀವ ದಹನಗೊಂಡಿದ್ದಾರೆ. ಕಟ್ಟಡದಲ್ಲಿದ್ದ 12 ಜನರನ್ನು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸ್ಥಳೀಯ ಪ್ರದೇಶದಲ್ಲಿ ನೀರಿನ ಅಭಾವವಿದ್ದಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ ತೊಡಕುಂಟಾಗಿತ್ತು ಎಂದು ತಿಳಿದುಬಂದಿದೆ.





Leave a comment