Home ದಾವಣಗೆರೆ ನೂತನ ಸಚಿವರಿಗೆ ಶ್ರೀ ತರಳಬಾಳು ಶ್ರೀಗಳ ಪಾರದರ್ಶಕ ಆಡಳಿತದ ಪಾಠ: ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಪೂರ್ಣಕ್ಕೆ ಕರೆ
ದಾವಣಗೆರೆಬೆಂಗಳೂರು

ನೂತನ ಸಚಿವರಿಗೆ ಶ್ರೀ ತರಳಬಾಳು ಶ್ರೀಗಳ ಪಾರದರ್ಶಕ ಆಡಳಿತದ ಪಾಠ: ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಪೂರ್ಣಕ್ಕೆ ಕರೆ

Share
ತರಳಬಾಳು
Share

ಬೆಂಗಳೂರು: ಕರ್ನಾಟಕ ಸರ್ಕಾರದ ನೂತನ ಸಮಾಜ ಕಲ್ಯಾಣ ಇಲಾಖೆ ಸಚಿವರಾದ  ಮುನಿಯಪ್ಪ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಟಿ. ರಘುಮೂರ್ತಿ, ಮೀನುಗಾರಿಕೆ, ಬಂದರು ಮತ್ತು ಮುಜುರಾಯಿ ಇಲಾಖೆಯ ಸಚಿವ ಕೆ.ಎಸ್. ಬಸವಂತಪ್ಪ, ಮಾಜಿ ಸಚಿವ ಹೆಚ್. ಆಂಜನೇಯ ಹಾಗೂ ಮಾಜಿ ಲೋಕಸಭಾ ಸದಸ್ಯ ಚಂದ್ರಪ್ಪನವರು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ನೂತನ ಸಚಿವರುಗಳು ಫಲ–ಪುಷ್ಪಗಳೊಂದಿಗೆ ಭಕ್ತಿ ಸಮರ್ಪಿಸಿ, ತಮ್ಮ ಮುಂದಿನ ಸಾರ್ವಜನಿಕ ಜೀವನಕ್ಕೆ ಅಗತ್ಯ ಮಾರ್ಗದರ್ಶನ ನೀಡುವಂತೆ ಶ್ರೀ ಜಗದ್ಗುರುಗಳವರಲ್ಲಿ ವಿನಂತಿಸಿಕೊಂಡರು. ಶ್ರೀ ಜಗದ್ಗುರುಗಳವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಏತ ನೀರಾವರಿ ಯೋಜನೆಗಳ ಕುರಿತು ವಿಶೇಷ ಆಸಕ್ತಿ ವ್ಯಕ್ತಪಡಿಸಿದ ಸಚಿವರುಗಳು, ಭದ್ರಾ ಮೇಲ್ದಂಡೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಸಿದ್ಧವೀರಪ್ಪನವರೊಂದಿಗೆ ಗುರು–ಶಿಷ್ಯ ಬಾಂಧವ್ಯದ ಅಪೂರ್ವ ಪ್ರಸಂಗ

ಈ ಸಂದರ್ಭದಲ್ಲಿ ಶ್ರೀ ಜಗದ್ಗುರುಗಳವರು ತಮ್ಮ ಗುರುವರ್ಯರಾದ ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಪ್ರಮುಖ ಶಿಷ್ಯರಾಗಿದ್ದ ಕರ್ನಾಟಕದ ಮೊದಲ ಗೃಹಸಚಿವ ಎಚ್. ಸಿದ್ಧವೀರಪ್ಪನವರ ಕುರಿತ ಅಪೂರ್ವ ಪ್ರಸಂಗವನ್ನು ವಿವರಿಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲರಂತೆ ಉಕ್ಕಿನ ಎದೆಗಾರಿಕೆಯ ಧೀರೋದಾತ್ತ ನಾಯಕರೆಂದು ಗುರುತಿಸಿಕೊಂಡಿದ್ದ ಸಿದ್ಧವೀರಪ್ಪನವರು, ರಾಜಕೀಯ ಜೀವನದಿಂದ ನಿವೃತ್ತರಾದ ನಂತರವೂ ಗುರುವರ್ಯರೊಂದಿಗೆ ಹಿಂದೆ ಉಂಟಾಗಿದ್ದ ಮನಸ್ತಾಪವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರು.

1979ರಲ್ಲಿ ಶ್ರೀ ಜಗದ್ಗುರುಗಳವರು ಪಟ್ಟಕ್ಕೇರಿದ ಸಂದರ್ಭದಲ್ಲಿ ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಟೌನ್‌ಹಾಲ್‌ನಲ್ಲಿ ಪುರಪ್ರವೇಶ ಸಮಾರಂಭ ನಡೆದಿತ್ತು. ಆ ಸಂದರ್ಭದಲ್ಲಿ ಸಿದ್ಧವೀರಪ್ಪನವರಿಂದ ಇದ್ದಕ್ಕಿದ್ದಂತೆ ದೂರವಾಣಿ ಕರೆ ಬಂದು, ತಮ್ಮ ಮನೆಗೆ ಪೂಜೆಗೆ ದಯಮಾಡಿಸಬೇಕೆಂದು ಭಕ್ತಿಯಿಂದ ವಿನಂತಿಸಿಕೊಂಡರು.

ಗುರುವರ್ಯರೊಂದಿಗೆ ಹಿಂದೆ ವಿರಸವಿದ್ದ ಹಿನ್ನೆಲೆಯಲ್ಲಿ ಆಹ್ವಾನ ಸ್ವೀಕರಿಸುವುದೇ ಎಂಬ ಸಂದಿಗ್ಧತೆ ಎದುರಾದರೂ, ಶ್ರೀ ಜಗದ್ಗುರುಗಳವರು ಸ್ವತಂತ್ರವಾಗಿ ನಿರ್ಣಯ ಕೈಗೊಂಡು ಷರತ್ತಿನೊಂದಿಗೆ ಒಪ್ಪಿಗೆ ನೀಡಿದರು.

“ನಮ್ಮ ಗುರುವರ್ಯರು ನಿಮಗೂ ಆದರಣೀಯರಾದ ಗುರುಗಳಾಗಿದ್ದರು. ಮುಂದೊಂದು ದಿನ ಬೆಂಗಳೂರಿನಿಂದ ದಾವಣಗೆರೆಗೆ ಬರುವಾಗ ನಮ್ಮೊಂದಿಗೆ ಮುತ್ತುಗದೂರಿಗೆ ತೆರಳಿ ಗುರುವರ್ಯರ ದರ್ಶನ ಪಡೆದು ಮುಕ್ತಮನಸ್ಸಿನಿಂದ ಮಾತನಾಡಬೇಕು” ಎಂಬ ಷರತ್ತನ್ನು ಮುಂದಿಟ್ಟರು. ಸಿದ್ಧವೀರಪ್ಪನವರು ಸಮ್ಮತಿಸಿದರು ಮತ್ತು ಅವರ ಮನೆಯಲ್ಲಿ ಪೂಜೆಯೂ ನೆರವೇರಿತು.

ಆದರೆ ವಿಧಿಯ ನಿರ್ಣಯ ಬೇರೆಯಾಗಿತ್ತು. ಗುರುವರ್ಯರ ದರ್ಶನ ಪಡೆಯುವ ಅವಕಾಶ ಸಿದ್ಧವೀರಪ್ಪನವರಿಗೆ ದೊರೆಯಲಿಲ್ಲ. ಬೆಂಗಳೂರಿನಿಂದ ಹೊರಡುವ ವೇಳೆಗೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಸಿದ್ಧವೀರಪ್ಪನವರ ಪಾರ್ಥಿವ ಶರೀರವನ್ನು ದಾವಣಗೆರೆಯ ಮಠದ ವಿದ್ಯಾರ್ಥಿನಿಲಯದಲ್ಲಿ ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಸಮಾಧಿ ಸ್ಥಳದ ವಿಚಾರದಲ್ಲಿ ಹನಗವಾಡಿ ಮತ್ತು ದೊಡ್ಡಬಾತಿ ಪರವಾಗಿದ್ದ ಎರಡು ಗುಂಪುಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಹನಗವಾಡಿಯಿಂದ ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಜನರು ಆಗಮಿಸಿದ್ದರಿಂದ ಘರ್ಷಣೆಯ ಭೀತಿಯೂ ಎದುರಾಗಿತ್ತು.

ಅಂತಹ ಸಂದರ್ಭದಲ್ಲಿ ಗುರುವರ್ಯರು ಆಗಮಿಸಿದರು. ಎಲ್ಲಿ ಸಮಾಧಿ ಮಾಡಬೇಕು ಎಂಬ ನಿರ್ಣಯದ ಹೊಣೆ ಅವರ ಮೇಲೆ ಬಂತು. ಎರಡೂ ಗುಂಪುಗಳ ಅಭಿಪ್ರಾಯಗಳನ್ನು ಆಲಿಸಿದ ಬಳಿಕ, “ಗಂಡನ ಇಚ್ಚೆ–ಅನಿಚ್ಛೆ ಹೆಂಡತಿಗೆ ಗೊತ್ತಿರುತ್ತದೆ” ಎಂದು ಹೇಳಿ ಸಿದ್ಧವೀರಪ್ಪನವರ ಪತ್ನಿ ಮಹದೇವಮ್ಮನವರ ಅಭಿಪ್ರಾಯ ಕೇಳಿದರು. ಅವರ ಅಭಿಪ್ರಾಯದಂತೆ ದೊಡ್ಡಬಾತಿಯಲ್ಲಿ ಸಮಾಧಿ ಮಾಡುವಂತೆ ಗುರುವರ್ಯರು ಘೋಷಿಸಿದರು.

ಗುರುವರ್ಯರ ಆ ಒಂದು ನಿರ್ಣಯದಿಂದ ಸಂಭವಿಸಬಹುದಾಗಿದ್ದ ದೊಡ್ಡ ಗುಂಪುಘರ್ಷಣೆ ತಪ್ಪಿತು. ಶಿಷ್ಯನ ಮೇಲಿನ ಅಸಮಾಧಾನವನ್ನು ಮೀರಿಸಿ ಶಿಷ್ಯವಾತ್ಸಲ್ಯವನ್ನು ತೋರಿದ ಗುರುಹೃದಯ ಹಾಗೂ ಬಿಕ್ಕಟ್ಟಿನ ಸಂದರ್ಭದಲ್ಲಿ ಕ್ಷಣಮಾತ್ರದಲ್ಲಿ ವಿವೇಕಪೂರ್ಣ ನಿರ್ಣಯ ಕೈಗೊಂಡ ಗುರುವರ್ಯರ ಧೈರ್ಯಕ್ಕೆ ಇದು ಅಪೂರ್ವ ನಿದರ್ಶನ ಎಂದು ಶ್ರೀ ಜಗದ್ಗುರುಗಳವರು ಹೇಳಿದರು.

ಕೊಂಡಜ್ಜಿ ಬಸಪ್ಪನವರ ಬದುಕು: ಪರಿಶುದ್ಧ ರಾಜಕಾರಣಕ್ಕೆ ಮಾದರಿ

ನೂತನ ಸಚಿವರುಗಳು ಭ್ರಷ್ಟಾಚಾರರಹಿತ, ಪಾರದರ್ಶಕ ಮತ್ತು ಮೌಲ್ಯಾಧಾರಿತ ಆಡಳಿತ ನೀಡಬೇಕೆಂದು ಸಲಹೆ ನೀಡಿದ ಶ್ರೀ ಜಗದ್ಗುರುಗಳವರು, ಇದಕ್ಕೆ ಆದರ್ಶವಾಗಿ ಕೊಂಡಜ್ಜಿ ಬಸಪ್ಪನವರ ಸಾರ್ವಜನಿಕ ಜೀವನವನ್ನು ವಿವರಿಸಿದರು.

ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಧಾರವಾಡದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ದಾವಣಗೆರೆಗೆ ಬರುತ್ತಿದ್ದಾಗ ಪೊಲೀಸ್ ಶಿಷ್ಟಾಚಾರದಂತೆ ಅವರ ಕಾರಿನ ಹಿಂದೆ–ಮುಂದೆ ಹಲವು ಪೊಲೀಸ್ ಜೀಪುಗಳು ಸಾಗುತ್ತಿದ್ದವು. ಇದನ್ನು ಕಂಡ ಕೊಂಡಜ್ಜಿ ಬಸಪ್ಪನವರು ಕಾರು ನಿಲ್ಲಿಸಿ ಕೆಳಗಿಳಿದು, ವಿಚಾರಿಸಲು ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, “ನೀವು ನನ್ನ ಹಿಂದೆ ಬರುವುದು ಬೇಡ. ನನಗೆ ಯಾರ ಭಯವೂ ಇಲ್ಲ. ನಿಮ್ಮ ಠಾಣೆಗಳಿಗೆ ವಾಪಸು ಹೋಗಿ” ಎಂದು ನಗುಮುಖದಿಂದ ಹೇಳಿ, ಅವರೊಂದಿಗೆ ಕೈಕುಲುಕಿ ಕಾರು ಹತ್ತಿ ಮುಂದುವರಿದಿದ್ದರು.

ಮತ್ತೊಂದು ಸಂದರ್ಭದಲ್ಲಿ ಇಂಜಿನಿಯರ್ ಒಬ್ಬರಿಗೆ ಬೀದರ್‌ಗೆ ವರ್ಗಾವಣೆಯಾಗಿತ್ತು. ವರ್ಗಾವಣೆ ರದ್ದುಪಡಿಸುವಂತೆ ಆತ್ಮೀಯರ ಮೂಲಕ ಶಿಫಾರಸು ಬಂದರೂ ಕೊಂಡಜ್ಜಿ ಬಸಪ್ಪನವರು ಒತ್ತಡಕ್ಕೆ ಮಣಿಯಲಿಲ್ಲ. “ಬೀದರ್ ಇರುವುದು ನಮ್ಮ ಕರ್ನಾಟಕದಲ್ಲೇ. ಅಲ್ಲಿಯೂ ನಮ್ಮ ನಿಮ್ಮಂತಹ ಮನುಷ್ಯರಿದ್ದಾರೆ, ಮೃಗಗಳೇನೂ ಇಲ್ಲ. ಶ್ರೀಯುತರ ಸೇವೆ ಅಲ್ಲಿನ ಜನತೆಗೂ ಸಲ್ಲಲಿ” ಎಂದು ಉತ್ತರಿಸಿ, ವರ್ಗಾವಣೆಯಾದ ಸ್ಥಳಕ್ಕೆ ತೆರಳಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು.

ಕುಟುಂಬದಲ್ಲಿಯೂ ಅವರ ಮಾನವೀಯತೆ ಹೇಗಿತ್ತು ಎಂಬುದಕ್ಕೆ ಮತ್ತೊಂದು ಪ್ರಸಂಗವನ್ನು ಶ್ರೀ ಜಗದ್ಗುರುಗಳವರು ವಿವರಿಸಿದರು. ಸೊಸೆಯೊಬ್ಬಳು ಮಾಡಿದ ಅಡಿಗೆ ರುಚಿಯಾಗಿಲ್ಲವೆಂದು ಮಗನು ಕೋಪಗೊಂಡಾಗ, ಕೊಂಡಜ್ಜಿ ಬಸಪ್ಪನವರು ಮಗನನ್ನೇ ಸಮಾಧಾನಪಡಿಸಿ, “ಅಡಿಗೆ ಮನೆಗೆ ಹೊಸಬಳು; ಉಪ್ಪು ಹಾಕುವುದನ್ನು ಮರೆತಿರಬಹುದು. ಅದೇನು ದೊಡ್ಡ ಅಪರಾಧ?” ಎಂದು ಸೊಸೆಯ ಪರವಾಗಿ ನಿಂತಿದ್ದರು.

ಸರಳತೆ, ಪ್ರಾಮಾಣಿಕತೆ, ದೃಢತೆ ಮತ್ತು ಮಾನವೀಯತೆ ಹೊಂದಿದ ಇಂತಹ ನಾಯಕರ ಬದುಕು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಬೇಕು. ನಾಡಿನ ಪ್ರತಿಜಿಲ್ಲೆಯಲ್ಲಿಯೂ ಬದುಕಿ ಹೋದ ಇಂತಹ ಉದಾತ್ತ ಚೇತನರ ಪರಿಚಯವನ್ನು ಆಯಾ ಜಿಲ್ಲೆಯ ಮಕ್ಕಳಿಗೆ ಮಾಡಿಕೊಡುವ ಅಗತ್ಯವಿದೆ ಎಂದು ಶ್ರೀ ಜಗದ್ಗುರುಗಳವರು ಹೇಳಿದರು.

ಭದ್ರಾ ಮೇಲ್ದಂಡೆ: ರೈತರ ಕನಸು ನನಸಾಗುವ ಹಾದಿಯಲ್ಲಿ

ಭದ್ರಾ ಮೇಲ್ದಂಡೆ ಯೋಜನೆಯ ತಾಂತ್ರಿಕ ಹಾಗೂ ಆಡಳಿತಾತ್ಮಕ ಬೆಳವಣಿಗೆಗಳನ್ನೂ ಶ್ರೀ ಜಗದ್ಗುರುಗಳವರು ಸಚಿವರುಗಳಿಗೆ ವಿವರಿಸಿದರು.

ಯೋಜನೆಗಾಗಿ ರೈತರು ಹಲವು ಚಳುವಳಿಗಳನ್ನು ನಡೆಸಿ ನಿರಾಶರಾಗಿದ್ದ ಸಂದರ್ಭದಲ್ಲಿ, ಸಿರಿಗೆರೆಯಲ್ಲಿ ಬೃಹತ್ ಸಭೆ ನಡೆಸುವ ಬದಲು ಆಯ್ದ ರೈತ ಮುಖಂಡರು, ರೈತಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ರಾಜಕೀಯ ಮುಖಂಡರು ಹಾಗೂ ಮುಖ್ಯ ಇಂಜಿನಿಯರ್ ಎಫ್.ಎಚ್. ಲಮಾಣಿ ಅವರ ತಂಡದೊಂದಿಗೆ ಆಪ್ತ ಸಮಾಲೋಚನೆ ನಡೆಸಲು ನಿರ್ಧರಿಸಲಾಗಿತ್ತು.

ದೆಹಲಿಯಲ್ಲಿ ಕೇಂದ್ರದ ಮಟ್ಟದಲ್ಲಿ ನಡೆದ ಸತತ ಪ್ರಯತ್ನಗಳ ಬಳಿಕ, TAC ಸಭೆಯಲ್ಲಿ ಮುಖ್ಯ ಇಂಜಿನಿಯರ್ ಲಮಾಣಿಯವರು ಮಂಡಿಸಿದ ₹21,167.93 ಕೋಟಿಯ ಪರಿಷ್ಕೃತ ಯೋಜನಾ ವೆಚ್ಚಕ್ಕೆ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ಶ್ರೀ ಜಗದ್ಗುರುಗಳವರು ತಿಳಿಸಿದರು.

ಯೋಜನೆ ಪೂರ್ಣಗೊಂಡರೆ ಸುಮಾರು 2.25 ಲಕ್ಷ ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ಮುಂದಿನ ಹಂತಗಳಲ್ಲಿ PIB ಶಿಫಾರಸು ಮತ್ತು ಕೇಂದ್ರ ಸಚಿವ ಸಂಪುಟದ ಅನುಮೋದನೆ ದೊರೆತು ಅನುದಾನ ಬಿಡುಗಡೆಯಾದರೆ ಯೋಜನೆ ವೇಗವಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

“ಭದ್ರಾ ಮೇಲ್ದಂಡೆ ರೈತರ ಬದುಕಿಗೆ ಸಂಬಂಧಿಸಿದ ಯೋಜನೆ. ಇದನ್ನು ರಾಜಕೀಯ ತಿಕ್ಕಾಟದ ವಿಷಯವನ್ನಾಗಿಸದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಪೂರ್ಣಗೊಳಿಸಬೇಕು. ಯೋಜನೆ ಪೂರ್ಣಗೊಂಡಾಗ ರೈತರಿಗೆ ನಿಜವಾದ ‘ಪೂರ್ಣಚಂದ್ರ ದರ್ಶನ’ವಾಗಲಿದೆ” ಎಂದು ಶ್ರೀ ಜಗದ್ಗುರುಗಳವರು ಆಶಾಭಾವ ವ್ಯಕ್ತಪಡಿಸಿದರು.

ಶ್ರೀ ಜಗದ್ಗುರುಗಳವರ ಮಾರ್ಗದರ್ಶನವನ್ನು ಸಚಿವರುಗಳು ಗೌರವದಿಂದ ಆಲಿಸಿ, ಜನಪರ ಹಾಗೂ ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡುವುದರ ಜೊತೆಗೆ ರೈತರ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳ ಪೂರ್ಣತೆಗೆ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಸಾಧು ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಫ,ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಚಂದ್ರಪ್ಪನವರು, ಕಾರ್ಯದರ್ಶಿ ವಿಶ್ವನಾಥ ಬಾತಿ, ಸದಸ್ಯರಾದ ಗಂಗಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles