SUDDIKSHANA KANNADA NEWS/ DAVANAGERE/ DATE:07-02-2025
ದಾವಣಗೆರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ನಮನ ಅಕಾಡೆಮಿ ಸಹಯೋಗದಲ್ಲಿ ಫೆ. 9 ರಂದು ದಾವಣಗೆರೆಯ ಬಾಪೂಜಿ ಸಭಾಂಗಣದಲ್ಲಿ ಪೂರ್ವ ರಂಗನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಮನ ಅಕಾಡೆಮಿ ಉಪಾಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಸಂಜೆ 6ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ನಾಟ್ಯ ನಿನಾದ ಅಕಾಡೆಮಿ ನಿರ್ದೇಶಕ ಧರಣಿ ಟಿ. ಕಶ್ಯಪ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಟಿ. ಗಾಯಿತ್ರಿ, ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್. ನಾಗಭೂಷಣ ಇತರರು ಭಾಗವಹಿಸುವರು. ಡಾ.ಎ.ಎಂ. ಶಿವಕುಮಾರ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ದಾವಣಗೆರೆಯ ಮಕ್ಕಳಿಗೆ ನೃತ್ಯ, ಸಂಗೀತ ಇತರೆ ಸಾಂಸ್ಕೃತಿಕ ಕಲೆಗಳ ಪರಿಚಯಿಸುವ ಜೊತೆಗೆ ಕಲಿಸಿಕೊಡುವ ನಿಟ್ಟಿನಲ್ಲಿ ನಮನ ಅಕಾಡೆಮಿ ಕಾರ್ಯ ನಿರ್ವಹಿಸುತ್ತದೆ ಎಂದರು.
ಅಕಾಡೆಮಿ ಕಾರ್ಯದರ್ಶಿ ಮಾಧವಿ ಡಿ. ಕೆ. ಮಾತನಾಡಿ, ಪೂರ್ವ ರಂಗನಮನ ವಿಶೇಷ ಕಾರ್ಯಕ್ರಮ. ಶಾಸ್ತ್ರೀಯ ನೃತ್ಯ ದ ಮುನ್ನವೇ ಮಕ್ಕಳು ಗೆಜ್ಜೆಪೂಜೆ ಕಟ್ಟಿಕೊಂಡು ರಂಗಪ್ರವೇಶ ಮಾಡುವರು. ಶನಿವಾರ ಬೆಳಗ್ಗೆ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಗೆಜ್ಜೆ ನೀಡಲಾಗುವುದು. ಮೊದಲ ಬಾರಿಗೆ ಶಾಸ್ತ್ರೋಕ್ತವಾಗಿ ನೃತ್ಯ ಕ್ಷೇತ್ರದಲ್ಲಿ ಪ್ರವೇಶಿಸುವ ಮುನ್ನ ನಡೆಯುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ವಿವಿಧ ಶಾಸ್ತ್ರೀಯ ನೃತ್ಯಗಳು ಮತ್ತು ನೃತ್ಯ ರೂಪಕ ಶ್ರೀ ಕೃಷ್ಣ ವಿಲಾಸಂ(ಕೃಷ್ಣನ ಲೀಲೆಗಳು) ಹಾಗೂ ಋತು ಹಿರೇಮಠ ಮತ್ತು ತಂಡದಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ನಮನ ಅಕಾಡೆಮಿ ಅಧ್ಯಕ್ಷ ಕೆ.ಎನ್. ಗೋಪಾಲ ಕೃಷ್ಣ, ಮಂಜುಳಾ, ಟಿ. ಯುವರಾಜ್ ಇದ್ದರು.