ಮಂಡ್ಯ: ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ನೆಪದಲ್ಲಿ ದಾಖಲಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ತನ್ನ ಗೆಳತಿಯೊಂದಿಗೆ ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (KSLSA) ಮತ್ತು ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಅಧಿಕಾರಿಗಳು ಸೋಮವಾರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಜೈಲು ಮತ್ತು ಪೊಲೀಸ್ ಅಧಿಕಾರಿಗಳ ಈ ಭದ್ರತಾ ಲೋಪ ಬಯಲಾಗಿದೆ.
ಘಟನೆಯ ವಿವರ:
ಆರೋಪಿ ಮಹಮ್ಮದ್ ಹುಸೇನ್, ಎಡಿಎಲ್ಆರ್ (ADLR) ವಿಭಾಗದಲ್ಲಿ ಸರ್ವೆ ಸೂಪರ್ವೈಸರ್ ಆಗಿದ್ದು, ನಕಲಿ ಸರ್ಕಾರಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಜುಲೈ 2 ರಂದು ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದನು. ಆತನಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ, ನ್ಯಾಯಾಲಯದ ಅನುಮತಿಯಿಲ್ಲದೆ ಆಗಸ್ಟ್ 21 ರಿಂದ ಮಿಮ್ಸ್ ಆಸ್ಪತ್ರೆಯ ಪ್ರತ್ಯೇಕ ವಿಐಪಿ ಕೊಠಡಿಯಲ್ಲಿ ರಾಜಾತಿಥ್ಯ ಪಡೆಯುತ್ತಿದ್ದನು.
ನ್ಯಾಯಾಧೀಶರಾದ ಶಶಿಧರ ಶೆಟ್ಟಿ ಮತ್ತು ಚಂದ್ರಶೇಖರ ಸಿ. ಅವರ ನೇತೃತ್ವದ ತಂಡ ತಪಾಸಣೆ ನಡೆಸಿದಾಗ, ಆರೋಪಿಯ ಕೊಠಡಿಯಲ್ಲಿ ಮಹಿಳೆಯೊಬ್ಬಳು (ಗೆಳತಿ) ಪತ್ತೆಯಾಗಿದ್ದಾಳೆ. ಈ ಬಗ್ಗೆ ವಿಚಾರಿಸಿದಾಗ, ಮಿಮ್ಸ್ ಅಧೀಕ್ಷಕ ಡಾ. ಶಿವಕುಮಾರ್ ಅವರು “ಆರೋಪಿಗೆ ಯಾವುದೇ ಗಂಭೀರ ಕಾಯಿಲೆಯಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಜೈಲು ವೈದ್ಯಾಧಿಕಾರಿಗಳ ಶಿಫಾರಸಿನ ಮೇರೆಗಷ್ಟೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೈಲು ಅಧೀಕ್ಷಕರು ಹಾರಿಕೆಯ ಉತ್ತರ ನೀಡಿದ್ದಾರೆ.
ಮುಂದಿನ ಕ್ರಮ:
ಈ ಗಂಭೀರ ಭದ್ರತಾ ಲೋಪವನ್ನು ತರಾಟೆಗೆ ತೆಗೆದುಕೊಂಡಿರುವ ತಪಾಸಣಾ ತಂಡ, “ಇನ್ನು ಮುಂದೆ ಯಾವುದೇ ಕೈದಿಯನ್ನು ನ್ಯಾಯಾಲಯದ ಮುಸ್ತುರ್ವಜಿಯಿಲ್ಲದೆ ಆಸ್ಪತ್ರೆಗೆ ಸ್ಥಳಾಂತರಿಸುವಂತಿಲ್ಲ” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಪೊಲೀಸ್, ಜೈಲು ಮತ್ತು ಆಸ್ಪತ್ರೆ ಅಧಿಕಾರಿಗಳಿಂದ ವಿವರವಾದ ವರದಿ ಕೇಳಲಾಗಿದ್ದು, ಶೀಘ್ರದಲ್ಲೇ ಶಿಸ್ತುಕ್ರಮ ಜರುಗಿಸುವ ಸಾಧ್ಯತೆಯಿದೆ.





Leave a comment