SUDDIKSHANA KANNADA NEWS/ DAVANAGERE/ DATE:06-02-2025
ದಾವಣಗೆರೆ: ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದ ಇಬ್ಬರು ಸರಗಳ್ಳನ ಪೈಕಿ ಒಬ್ಬನನ್ನು ಮೂವರು ಮಹಿಳೆಯರು ಹಿಡಿದ ಘಟನೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಕಾಕನಗೂರು ಗ್ರಾಮದ ಬಳಿ ನಡೆದಿದೆ.
ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ನಲ್ಲಿ ಮಹಿಳೆಯೊಬ್ಬರನ್ನು ಕೂರಿಸಿಕೊಂಡು ಸ್ವಲ್ಪ ದೂರ ಹೋಗಿದ್ದಾನೆ. ಕೊರಳಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಇಬ್ಬರಲ್ಲಿ ಒಬ್ಬ ಪರಾರಿಯಾದರೆ, ಮತ್ತೊಬ್ಬನನ್ನು ದಿಟ್ಟತನದಿಂದ ಹೋರಾಡಿ ಹಿಡಿದಿದ್ದಾರೆ. ಕಲ್ಲಿನಿಂದ ಹಲ್ಲೆ ನಡೆಸಿದರೂ ಸರಗಳ್ಳನ ಸೆರೆಹಿಡಿಯುವಲ್ಲಿ ಮಹಿಳೆಯರು ಯಶಸ್ವಿಯಾಗಿದ್ದಾರೆ.
ಸಂತೇಬೆನ್ನೂರು ಸಮೀಪದ ಕಾಕನೂರು ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸಿ ಶಾಲೆ ಪಕ್ಕದಲ್ಲಿರುವ ಚಿಕ್ಕಬೆನ್ನೂರು ಗ್ರಾಮದ ಕಚ್ಚಾ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯರ ದಿಟ್ಟತನಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
2.50 ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಆತನೊಂದಿಗೆ ಇದ್ದ ಮತ್ತೊಬ್ಬನನ್ನು ಮಹಿಳೆಯರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಚಿಕ್ಕಬೆನ್ನೂರು ಗ್ರಾಮಕ್ಕೆ ನೇರ ಬಸ್ ಸಂಪರ್ಕ ಇಲ್ಲ. ಆದ್ದರಿಂದ ಕಾಕನೂರಿನಲ್ಲಿರುವ ಕಿತ್ತೂರು ಚೆನ್ನಮ್ಮ ವಸತಿ ಶಾಲೆ ಬಳಿ ಇಳಿದು ಊರ ಕಡೆಗೆ ಕಾಲ್ನಡಿಗೆಯಲ್ಲಿಯೇ ಹೋಗಬೇಕು. ಕೂಲಿ ಕೆಲಸ ಮುಗಿಸಿ ಶಾಲೆಯ ಬಳಿ ಬಸ್ ಇಳಿದಿರುವ ರತ್ನಮ್ಮ, ಗೌರಮ್ಮ ಹಾಗೂ ಶಾಂತಮ್ಮ ಕಡಲೆ ಹಾಗೂ ಈರುಳ್ಳಿ ಮೂಟೆ ಹೊತ್ತು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಅಪರಿಚಿತರು ಬಂದಿದ್ದಾರೆ. ಊರಿನವರೆಗೆ ಡ್ರಾಪ್ ಮಾಡುತ್ತೇವೆಂದು ಹೇಳಿದ್ದರಿಂದ ರತ್ನಮ್ಮ ಮಾತ್ರ ಬೈಕ್ ಹತ್ತಿದ್ದಾರೆ. ಸ್ವಲ್ಪ ದೂರ ಸಾಗಿದ ಅಪರಿಚಿತರು ರತ್ನಮ್ಮ ಅವರನ್ನು ಬೈಕ್ ನಿಂದ ಕೆಳಗಿಳಿಸಿ ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ.
ರತ್ನಮ್ಮ ಈ ವೇಳೆ ಜೋರಾಗಿ ಕೂಗಿಕೊಂಡಿದ್ದಾರೆ. ಹಿಂದೆ ಬರುತ್ತಿದ್ದ ಗೌರಮ್ಮ ಹಾಗೂ ಶಾಂತಮ್ಮ ರಕ್ಷಣೆಗೆ ಓಡೋಡಿ ಬಂದಿದ್ದಾರೆ. ಬೈಕ್ ನ ಹಿಂಬದಿ ಕುಳಿತಿದ್ದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾದನಾಯಕನಹಳ್ಳಿ ಗ್ರಾಮದ ಸುರೇಶ ಎಂಬಾತನನ್ನು ರತ್ನಮ್ಮ ಬೆನ್ನತ್ತಿ ಬೈಕ್ ನಿಂದ ಬೀಳಿಸಿ ಹಿಡಿದಿದ್ದಾರೆ. ಆಗ ಸುರೇಶ ರತ್ಮಮ್ಮರಿಗೆ ಕಲ್ಲಿನಿಂದ ಹೊಡೆದಿದ್ದಾನೆ. ಆದರೂ ದಿಟ್ಟತನ ತೋರಿದ ರತ್ನಮ್ಮ ರಕ್ತಸ್ರಾವದ ನಡುವೆಯೂ ಸುರೇಶ್ ನನ್ನು ನೆಲಕ್ಕುರುಳಿಸಿದ್ದಾರೆ. ಚಿಕ್ಕಬೆನ್ನೂರು ಕಡೆಯಿಂದ ಬಂದ ಕೆಲವರು ಈತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸರ ಕಿತ್ತುಕೊಂಡು ಪರಾರಿಯಾಗಿರುವ ವ್ಯಕ್ತಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕನ್ನಗುಂದಿ ಗ್ರಾಮದ ಸೋಮಶೇಖರ ಎಂದು ಬಂಧಿತ ಆರೋಪಿ ಮಾಹಿತಿ ನೀಡಿದ್ದು, ಆತನಿಗೆ ಶೋಧ ಮುಂದುವರಿದಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.