ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ): ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ (ಔರಂಗಾಬಾದ್) ಖವಡ್ಯಾ ಬೆಟ್ಟದಿಂದ ಬಿದ್ದು ಒಂದೇ ಕುಟುಂಬದ ಮೂವರು ಪ್ರಾಣ ಕಳೆದುಕೊಂಡ ದುರಂತಕ್ಕೆ ಸಂಬಂಧಿಸಿದಂತೆ, ಐಫೋನ್ ಇಎಂಐ ಕಾರಣ ಎಂಬ ವರದಿಗಳನ್ನು ಮೃತ ಸಂಗೀತಾ ಅವರ ತಂಗಿ ಪಲ್ಲವಿ ಪಾಟೀಲ್ ಖಂಡಿಸಿದ್ದಾರೆ.
“ಜನರಿಗೆ ಸತ್ಯ ಏನೆಂದು ತಿಳಿಯದೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಕಥೆಗಳನ್ನು ಹೆಣೆಯುತ್ತಿದ್ದಾರೆ” ಎಂದು ಅವರು ಆಕ್ರೋಶ ಮತ್ತು ತೀವ್ರ ಕಣ್ಣೀರು ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 21 ರಂದು 18 ವರ್ಷದ ಕುನಾಲ್ ಛಂದಗುಡೆ ಖವಡ್ಯಾ ಬೆಟ್ಟದ ತುದಿಗೆ ತೆರಳಿ ಆತ್ಮಹತ್ಯೆ ಬೆದರಿಕೆಯೊಡ್ಡಿದ್ದಾಗ, ಆತನನ್ನು ಉಳಿಸಲು ಯತ್ನಿಸಿದ ತಂದೆ ಮುರಳೀಧರ್ ಹಾಗೂ ತಾಯಿ ಸಂಗೀತಾ ಮೂವರೂ 250 ಅಡಿ ಆಳದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದರು. ಕುನಾಲ್ ಐಫೋನ್ ಖರೀದಿಸಿ ಅದರ ಇಎಂಐ ಕಟ್ಟಲಾಗದೆ ತಂದೆ-ತಾಯಿಯೊಂದಿಗೆ ಜಗಳವಾಡಿ ಈ ಕೃತ್ಯಕ್ಕೆ ಮುಂದಾಗಿದ್ದ ಎಂದು ಆರಂಭಿಕ ವರದಿಗಳು ಬಂದಿದ್ದವು.
ಆದರೆ, ಚಿತಾಭಸ್ಮ ಸಂಗ್ರಹಿಸಿ ಹಿಂತಿರುಗುತ್ತಿದ್ದ ಪಲ್ಲವಿ ಪಾಟೀಲ್ ವೀಡಿಯೊ ಸಂದೇಶ ಬಿಡುಗಡೆ ಮಾಡಿ, “ನಮ್ಮ ಕುಟುಂಬ ಈಗಾಗಲೇ ಆಘಾತದಲ್ಲಿದೆ. 75 ವರ್ಷದ ನಮ್ಮ ಪೋಷಕರಿಗೆ ಈ ಸುಳ್ಳು ವೀಡಿಯೊಗಳು ಮತ್ತು ವದಂತಿಗಳು ತೀವ್ರ ನೋವನ್ನುಂಟುಮಾಡುತ್ತಿವೆ. ವಾಸ್ತವ ತಿಳಿಯದೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊಗಳನ್ನು ಮಾಡಬೇಡಿ” ಎಂದು ಮನವಿ ಮಾಡಿದ್ದಾರೆ.
ಪೋಲೀಸರ ಪ್ರಕಾರ, ಈ ದುರಂತಕ್ಕೆ ಬರಿ ಐಫೋನ್ ವಿಚಾರ ಒಂದೇ ಕಾರಣವಲ್ಲ. ಕುಟುಂಬದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಆಸ್ತಿ ಜಗಳಗಳು ನಡೆದಿದ್ದವು. ಸಂಗೀತಾ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದ ಹಳೆಯ ವೀಡಿಯೊಗಳು ಮತ್ತು ಭಾವನಾತ್ಮಕ ಸಂದೇಶಗಳನ್ನು ಆಧರಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.





Leave a comment