ಢಾಕಾ/ರಂಗಪುರ: ಬಾಂಗ್ಲಾದೇಶದ ರಂಗಪುರ ನಗರದಲ್ಲಿ ಭೀಕರ ಹಾಗೂ ನಡುಕ ಹುಟ್ಟಿಸುವ ಘಟನೆಯೊಂದು ವರದಿಯಾಗಿದೆ. ನಿವೃತ್ತ ಶಿಕ್ಷಕ ಗಣಪತಿ ಚಕ್ರವರ್ತಿ (65), ಅವರ ಪತ್ನಿ ಪ್ರೀತಿಲತಾ (50), ಮಗಳು ಅಗಮಿ (23) ಹಾಗೂ 12 ವರ್ಷದ ಮಗ ಪ್ರಿಯಮ್ ಅವರನ್ನು ಅವರದೇ ಮನೆಯಲ್ಲಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ.
ಘಟನೆಯ ವಿವರ:
ಗುರುವಾರ ತಡರಾತ್ರಿ ನೆರೆಮನೆಯ ಸಿದ್ಧಾರ್ಥ್ ದಾಸ್ (19) ಮತ್ತು ಮುಗ್ದ ದಾಸ್ (23) ಎಂಬಿಬ್ಬರು ಗಣಪತಿ ಅವರ ಮನೆಯ ಟೆರೇಸ್ ಮೇಲೆ ಹತ್ತಿ ‘ಯಾಬಾ’ ಎಂಬ ಮಾದಕ ದ್ರವ್ಯ ಸೇವಿಸುತ್ತಿದ್ದರು. ಶಬ್ದ ಕೇಳಿ ಮೇಲೆ ಹೋದ ಗಣಪತಿ ಅವರನ್ನು ಆರೋಪಿಗಳು ಟವೆಲ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಮೇಲಕ್ಕೆ ಬಂದ ಪತ್ನಿ, ಮಗಳು ಮತ್ತು 12 ವರ್ಷದ ಬಾಲಕನನ್ನು ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಒಬ್ಬೊಬ್ಬರನ್ನಾಗಿ ಹತ್ಯೆ ಮಾಡಿದ್ದಾರೆ. ಕೊಲೆಯ ನಂತರ ಮುಖಗಳನ್ನು ಸುಡಲು ಯತ್ನಿಸಲಾಗಿದೆ.
ರಾತ್ರಿ ಪೂರ್ತಿ ಶವದ ಪಕ್ಕದಲ್ಲೇ ತಂಗಿದ್ದ ಕೊಲೆಗಾರರು:
ಕೊಲೆ ಮಾಡಿದ ನಂತರ ಆರೋಪಿಗಳು ಅಲ್ಲಿಂದ ಕಾಲ್ಕಿಳಿಯದೆ ರಾತ್ರಿ ಪೂರ್ತಿ ಅದೇ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಫ್ರಿಡ್ಜ್‌ನಲ್ಲಿದ್ದ ಸೌತೆಕಾಯಿ ಮತ್ತು ಖರ್ಜೂರವನ್ನು ತಿಂದಿದ್ದಾರೆ. ಮನೆಯಲ್ಲೇ ಸ್ನಾನ ಮಾಡಿ, ಮತ್ತಷ್ಟು ಡ್ರಗ್ಸ್ ಸೇವಿಸಿದ್ದಾರೆ. ಮನೆಯಲ್ಲಿದ್ದ ಚಿನ್ನದ ಆಭರಣಗಳನ್ನು ದೋಚಿ, ಪೊಲೀಸರನ್ನು ದಾರಿತಪ್ಪಿಸಲು ದರೋಡೆ ನಡೆದಂತೆ ಬಿಂಬಿಸಲು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಶುಕ್ರವಾರದ ಪ್ರಾರ್ಥನೆ ವೇಳೆ ರಸ್ತೆಗಳು ಖಾಲಿಯಿದ್ದಾಗ ಅಲ್ಲಿಂದ ಪರಾರಿಯಾಗಿದ್ದರು.
ಪೊಲೀಸರು ಪ್ರಮುಖ ಸುಳಿವುಗಳ ಆಧಾರದ ಮೇಲೆ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.





Leave a comment