SUDDIKSHANA KANNADA NEWS/ DAVANAGERE/ DATE:04-02-2025
ದಾವಣಗೆರೆ: ಹರಿಹರ ಶಾಸಕ ಬಿ. ಪಿ. ಹರೀಶ್ ಏನಪ್ಪಾ ದೊಡ್ಡ ಮನುಷ್ಯ. ನೀನೇನೂ ಬಿಜೆಪಿ ರಾಷ್ಟ್ರಾಧ್ಯಕ್ಷರಾ, ರಾಷ್ಟ್ರ ಸಂಘಟನಾ ಕಾರ್ಯದರ್ಶಿಯಾ? ಯಾರು ನೀನು? ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ದಾವಣಗೆರೆದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ. ಪಿ. ಹರೀಶ್ ಲೋಕಸಭೆ ಚುನಾವಣೆಯಲ್ಲಿ ಯಾಕೆ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಕೊಡಿಸಲಿಲ್ಲಾ? ಕಾಂಗ್ರೆಸ್ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದರಾ? ಮೊದಲು ಲೀಡ್ ಕೊಡಿಸು. ಆಮೇಲೆ ಬೇರೆ ಕ್ಷೇತ್ರದ ಬಗ್ಗೆ ಮಾತನಾಡು. ಇಲ್ಲದಿದ್ದರೆ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದರು.
ಹರಿಹರದಲ್ಲಿ ಎಷ್ಟು ಬಿಜೆಪಿ ಸದಸ್ಯ ಅಭಿಯಾನ ನಡೆಸಿಲ್ಲ, ಸದಸ್ಯರನ್ನು ಸೇರಿಸಿಲ್ಲ. ಹೊನ್ನಾಳಿ ಮಂಡಲ ಅಧ್ಯಕ್ಷರ ಪ್ರಶ್ನೆ ಮಾಡಿರುವ ಬಿ. ಪಿ. ಹರೀಶ್ ಇದುವರೆಗೆ ಯಾಕೆ ಹರಿಹರ ಮಂಡಲ ಅಧ್ಯಕ್ಷರ ನೇಮಕ ಮಾಡಿಲ್ಲ ಎಂದು ಪ್ರಶ್ನಿಸಿದರು.
ಪಕ್ಷದ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಪ್ರವಾಸ ಮಾಡಿ ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಮಂಡಲ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ವಿನಾಕಾರಣ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ವಿರುದ್ಧ ಆರೋಪ ಮಾಡುವುದನ್ನು ಬಿಡಬೇಕು. ಹರಿಹರದಲ್ಲಿ ಭೂ ಸಮಿತಿ ಮಾಡಲು ಆಗಿಲ್ಲ. ಸಕ್ರಿಯ ಸದಸ್ಯರನ್ನೂ ಸೇರಿಸಿಲ್ಲ. ಮಂಡಲ ಅಧ್ಯಕ್ಷರನ್ನು ಮಾಡಲು ಯೋಗ್ಯತೆ ಇಲ್ಲದ ನೀನು ಯಾರು? ಎಂದು ಪ್ರಶ್ನಿಸಿದರು.
ನೀನೇನೂ ರಾಷ್ಟ್ರೀಯ ನಾಯಕನಾ? 23 ಜಿಲ್ಲೆಗಳಲ್ಲಿ ಅಧ್ಯಕ್ಷರನ್ನು ಏಕಪಕ್ಷೀಯವಾಗಿ ಮಾಡಿಲ್ಲ. ಇದರಲ್ಲಿ ವಿಜಯೇಂದ್ರರ ಪಾತ್ರವೇನೂ ಇಲ್ಲ. ಚುನಾವಣಾಧಿಕಾರಿಗಳು, ವೀಕ್ಷಕರು ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಿ, ಅಭಿಪ್ರಾಯ ಪಡೆದು ಘೋಷಣೆ ಮಾಡಲಾಗಿದೆ. ಈ ಪಟ್ಟಿಯನ್ನು ರಾಷ್ಟ್ರೀಯ ನಾಯಕರಿಗೆ ಕಳುಹಿಸಿ ಕೊಡಲಾಗಿದೆ. ಆದರೂ ವಿಜಯೇಂದ್ರ ಏಕಪಕ್ಷೀಯವಾಗಿ ಆಯ್ಕೆ ಮಾಡಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಕಿಡಿಕಾರಿದರು.