SUDDIKSHANA KANNADA NEWS/ DAVANAGERE/ DATE:04-02-2025
ದಾವಣಗೆರೆ (Davanagere) : ಸಾವಿರಾರು ವಿದ್ಯಾರ್ಥಿಗಳು ತದೇಕಚಿತ್ತದಿಂದ ಆಲಿಸಿದರು. ನಗರ, ಗ್ರಾಮೀಣ ಪ್ರದೇಶಗಳಿಂದಲೂ ಬಂದಿದ್ದರು. ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ಅವರ ಸ್ಫೂರ್ತಿದಾಯಕ ಮಾತುಗಳಿಗೆ ಫಿದಾ ಆದರು.
ಸ್ವಾವಲಂಬನೆ, ಶೈಕ್ಷಣಿಕ ಅಸಮಾನತೆ, ರಾಜಕೀಯ ಪ್ರಜ್ಞೆ, ಸ್ವಾಭಿಮಾನ, ಭವಿಷ್ಯ ರೂಪಿಸಿಕೊಳ್ಳಲು ಪಾಲಿಸಬೇಕಾದ ನಿಯಮಗಳು, ಗುರಿ ತಲುಪುವುದು ಹೇಗೆ ಎಂಬುದೂ ಸೇರಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ವಿನಯ್ ಕುಮಾರ್
ಭಾಷಣ ಬೆಳಕು ಚೆಲ್ಲುತ್ತಿದ್ದಂತೆ ವಿದ್ಯಾರ್ಥಿ ಸಮೂಹ ಥ್ರಿಲ್ ಆಯಿತು. ಖುಷಿ ಪಟ್ಟಿತು. ವಿನಯ್ ಕುಮಾರ್ ರ ಬದುಕಿನ ಹಾದಿ, ಸವೆಸಿದ ದಾರಿ, ಎದುರಿಸಿದ ಸಂಕಷ್ಟಗಳು, ಸಾಧಿಸಿದ ಬಗೆ ಸೇರಿದಂತೆ ವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸುದ್ದಿಯನ್ನೂ ಓದಿ:
ಉತ್ತಮ ಗುಣ ಬೆಳೆಸಿಕೊಂಡು “ಸ್ವಾಭಿಮಾನಿಗಳಾಗಿ” ಬದುಕುತ್ತೇವೆಂಬ ಗಟ್ಟಿ ನಿರ್ಧಾರದ ಕ್ರಾಂತಿ ಆಗಬೇಕು: ಜಿ. ಬಿ. ವಿನಯ್ ಕುಮಾರ್
ಇಂಥ ವಿಭಿನ್ನ, ವಿಶಿಷ್ಟ ಕಾರ್ಯಕ್ರಮ ನಡೆದಿದ್ದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ. ಸ್ವಾಭಿಮಾನಿ ಬಳಗವು ಶ್ರೀ ಚನ್ನಪ್ಪ ಸ್ವಾಮಿ ಜನಕಲ್ಯಾಣ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಪಿಯುಸಿ,
ಡಿಗ್ರಿ, ಐಟಿಐ ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ದಿಕ್ಸೂಚಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು, ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎದುರಿಸಬೇಕಾದ ಬಗೆ, ಸ್ವಾಭಿಮಾನದ ಬದುಕು, ಶೈಕ್ಷಣಿಕ ಪ್ರಗತಿ, ಶಿಕ್ಷಣ ಕ್ಷೇತ್ರದಲ್ಲಿನ ಸವಾಲುಗಳು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದರೂ ಅವಕಾಶಗಳು ಹೇಗೆ ಸಿಗುತ್ತಿಲ್ಲ ಎಂಬ ಕುರಿತಂತೆ ಸಮಗ್ರವಾಗಿ, ಮಾಹಿತಿಪೂರ್ಣವಾಗಿ ವಿದ್ಯಾರ್ಥಿಗಳಿಗೆ ಅರ್ಥಮಾಡಿಸುವಲ್ಲಿ ವಿನಯ್ ಕುಮಾರ್ ಅವರು ಯಶಸ್ವಿ ಆದರು.
ಸಾವಿರಾರು ವಿದ್ಯಾರ್ಥಿಗಳೊಂದಿಗೆ ಸಂವಾದ:
ಸಭಾಂಗಣದಲ್ಲಿ ನೆರೆದಿದ್ದ ಸಾವಿರಾರು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ವಿನಯ್ ಕುಮಾರ್ ಅವರ ಮಾತುಗಳನ್ನು ಆಲಿಸಿದರು. ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಶಿಕ್ಷಣ ಕ್ಷೇತ್ರದಲ್ಲಿನ ಸವಾಲುಗಳ ಕುರಿತಂತೆ ಪ್ರಶ್ನೆಗಳನ್ನೂ ಕೇಳಿದರು. ಇದಕ್ಕೆ
ವಿನಯ್ ಕುಮಾರ್ ಅವರೂ ಅಷ್ಟೇ ತಾಳ್ಮೆಯಿಂದ ಸಮಗ್ರವಾಗಿ ಉತ್ತರಿಸಿದರು.
ಪಿಯುಸಿ, ಡಿಗ್ರಿ, ಐಟಿಐ ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಬಂದಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಭಾಷಣಕ್ಕೆ ಹೆಚ್ಚಿನ ಸಮಯ ಇರಲಿಲ್ಲ. ವಿದ್ಯಾರ್ಥಿಗಳೊಂದಿಗಿನ ಚರ್ಚೆ, ಸಂವಾದಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಬಂದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಸ್ವಾಭಿಮಾನದ ಕಿಚ್ಚು ಹಚ್ಚುವ ಕೆಲಸವನ್ನು ಜಿ. ಬಿ. ವಿನಯ್ ಕುಮಾರ್ ಮಾಡಿದರು.
ಭಾರತಕ್ಕೆ ಸಂವಿಧಾನ ಕೊಟ್ಟ ಡಾ. ಬಿ. ಆರ್. ಅಂಬೇಡ್ಕರ್ ಅವರ ಬದುಕಿನ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡರು. ಅಂಬೇಡ್ಕರ್ ಅವರ ಅಪಾರ ಜ್ಞಾನ ಭಂಡಾರ, ಎದುರಿಸಿದ ಸವಾಲುಗಳು, ಅಪಮಾನಗಳು, ಎಲ್ಲವನ್ನೂ ಮೆಟ್ಟಿ ನಿಂತಿದ್ದು ಹೇಗೆ ಎಂಬ ಕುರಿತಂತೆಯೂ ಎಲ್ಲೂ ಸಿಗದ ಮಾಹಿತಿ ಹಂಚಿಕೊಂಡರು. ಸ್ವಾಮಿ ವಿವೇಕಾನಂದರ ಬಗ್ಗೆಯೂ ಮಾತನಾಡಿದರು. ಇದು ವಿದ್ಯಾರ್ಥಿಗಳಲ್ಲಿ ಸಂಚಲನ ಸೃಷ್ಟಿಸಿತು.
ಇದು ಕೇವಲ ಭಾಷಣದ ಕಾರ್ಯಕ್ರಮವಾಗಿರಲಿಲ್ಲ. ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನದ ಕಿಚ್ಚು ಮೂಡಿಸುವಂಥ ವೇದಿಕೆಯಾಗಿತ್ತು. ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಯಾವುದರಲ್ಲಿಯೂ ಕಡಿಮೆ ಏನಿಲ್ಲ. ಪ್ರತಿಭಾವಂತರು, ಸಾಧಿಸುವ ಛಲ ಹೊಂದಿರುವವರು ಇದ್ದಾರೆ. ಆದ್ರೆ, ಅವಕಾಶ ಸಿಗಬೇಕು, ಪ್ರೋತ್ಸಾಹ ಬೇಕು, ಅವರನ್ನು ಗುರುತಿಸಿ ತರಬೇತಿ ನೀಡಿದರೆ ಯಾವ ಸಾಧನೆ ಬೇಕಾದರೂ ಮಾಡುವ ಛಾತಿ ಉಳ್ಳವರು ಎಂಬ ಸ್ಫೂರ್ತಿದಾಯಕ ಮಾತುಗಳನ್ನು ಕೇಳುತ್ತಿದ್ದಂತೆ ವಿದ್ಯಾರ್ಥಿಗಳು ಪುಳಕಿತರಾದರು.
ಇನ್ ಸೈಟ್ಸ್ ಐಎಎಸ್ ಸಂಸ್ಥೆಯು ಆರಂಭವಾಗಿದ್ದೇಗೆ? ಬೆಳೆದಿದ್ದು ಹೇಗೆ? ಎಂಬ ಕುತೂಹಲ ವಿದ್ಯಾರ್ಥಿಗಳಲ್ಲಿ ಇತ್ತು. ವಿದ್ಯಾರ್ಥಿಗಳ ಮನದಲ್ಲಿದ್ದ ಪ್ರಶ್ನೆಗೆ ಸಮರ್ಪಕ ಉತ್ತರವೂ ಸಿಕ್ಕಿತು. ದಿಕ್ಸೂಚಿ ಕಾರ್ಯಾಗಾರವು ವಿದ್ಯಾರ್ಥಿಗಳ ಭವಿಷ್ಯದ ದಿಕ್ಸೂಚಿಯಾಗಿ ಮಾರ್ಪಟ್ಟಿದ್ದಂತೂ ನಿಜ.
ಹಿರೇಕಲ್ಮಠದ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸ್ವಾಭಿಮಾನಿ ಬಳಗದ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಶೆಟ್ಟರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಮೌರ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿರೂಪಾಕ್ಷಪ್ಪ ಪಂಡಿತ್, ರಾಜಣ್ಣ ಕನಗಣ್ಣನವರ್, ಹಿರಿಯರಾದ ಶಿವಕುಮಾರ್ ಸಂಬಳಿ, ರಾಜ್ಯ ಸಂಚಾಲಕ ಅಯ್ಯಣ್ಣ ಹುಲ್ಕಲ್, ಸ್ವಾಭಿಮಾನಿ ಬಳಗದ ಸದಸ್ಯರು, ಪದಾಧಿಕಾರಿಗಳಾದ ರಮೇಶ್ ಮೈಸೂರು, ಧನುಷ್ ಕತ್ತಲಗೆರೆ, ನಾಗರಾಜ್ ಹಲವರು ಉಪಸ್ಥಿತರಿದ್ದರು.