Home ದಾವಣಗೆರೆ ಮೊದಲು ಆರೆಸ್ಸೆಸ್ ಕಚೇರಿಯಲ್ಲಿ ‘ವಂದೇ ಮಾತರಂ’ ಹಾಡಲಿ: ಬಿಜೆಪಿಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ!
ದಾವಣಗೆರೆನವದೆಹಲಿಬೆಂಗಳೂರು

ಮೊದಲು ಆರೆಸ್ಸೆಸ್ ಕಚೇರಿಯಲ್ಲಿ ‘ವಂದೇ ಮಾತರಂ’ ಹಾಡಲಿ: ಬಿಜೆಪಿಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ!

Share
ಪ್ರಿಯಾಂಕ್ ಖರ್ಗೆ
Share

ಬೆಂಗಳೂರು: ಎಂದೂ ಇಲ್ಲದ ದೇಶಪ್ರೇಮ ಬಿಜೆಪಿಯವರಲ್ಲಿ ಏಕಾಏಕಿ ಉಕ್ಕಿ ಹರಿದು ಬರುತ್ತಿರುವುದು ಏಕೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

1937 ರಲ್ಲಿ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ರವೀಂದ್ರನಾಥ್ ಟ್ಯಾಗೂರ್ ಎಲ್ಲರೂ ಸೇರಿ ವಂದೇ ಮಾತರಂ ಗೀತೆಯ ಎಷ್ಟು ಚರಣಗಳನ್ನು ಹಾಡಬೇಕು ಎಂದು ತೀರ್ಮಾನಿಸಿದ್ದಾರೆಯೋ ಅದನ್ನು ನಾವು ಪಾಲಿಸುತ್ತಾ ಬಂದಿದ್ದೇವೆ. ಬಿಜೆಪಿಯವರಲ್ಲಿ ಇಷ್ಟೊಂದು ದೇಶಭಕ್ತಿ ಉಕ್ಕಿ ಹರಿಯುತ್ತಿದ್ದರೆ, ಮೊದಲು ಆರೆಸ್ಸೆಸ್ ಕಚೇರಿಯಲ್ಲಿ ‘ನಮಸ್ತೆ ಸದಾ ವತ್ಸಲೆ’ಯನ್ನು ಬಿಟ್ಟು ‘ವಂದೇಮಾತರಂ’ ಹಾಡಲಿ, ಎರಡೂ ಕೈಗಳನ್ನು ಮುಗಿದು ನಮ್ಮ ರಾಷ್ಟ್ರ ಧ್ವಜಕ್ಕೆ ನಮನ ಸಲ್ಲಿಸಲಿ ಎಂದು ಸವಾಲು ಹಾಕಿದ್ದಾರೆ.

ಮೋದಿ ಮತ್ತು ಅಮಿತ್‌ ಶಾ ಅವರು ಟೆಲಿಪ್ರಾಂಪ್ಟರ್ ಇಲ್ಲದೆ ಪೂರ್ತಿಯಾಗಿ ವಂದೇ ಮಾತರಂ ಹಾಡಲಿ ನೋಡೋಣ. ಹಾಗೆ ಹಾಡಿದರೆ ನಾನೇ ರಾಜೀನಾಮೆ ಕೊಡುತ್ತೇನೆ ಎಂದು ಖರ್ಗೆ ಸವಾಲೆಸೆದರು. ಪ್ರಧಾನಿ ಮೋದಿಯವರ ವರ್ಚಸ್ಸು ಕಡಿಮೆ ಆಗಿದೆ. ಜೆನ್‌ಜಿ ಪ್ರತಿಭಟನೆಗಳಿಗೆ ಅವರ ಬಳಿ ಉತ್ತರ ಇಲ್ಲ. ಪಿಎಂ ಕೇರ್ಸ್, ರಾಮಮಂದಿರ ಹಗರಣಗಳು, ವಿದೇಶಾಂಗ ನೀತಿಯ ವೈಫಲ್ಯ ಇವೆಲ್ಲವನ್ನೂ ಮುಚ್ಚಿಹಾಕಲು ಈ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಸರ್ಕಾರವು ನಾಗೇಂದ್ರ ಅವರ ವಿಚಾರ, ಸಿಬಿಐ ಚಾರ್ಜ್‌ಶೀಟ್, ಸಿಐಡಿ, ಎಸ್‌ಐಟಿ ಎಲ್ಲದರ ಬಗ್ಗೆಯೂ ಚರ್ಚಿಸಲು ಸಿದ್ಧವಿದೆ. ಆದರೆ ಬಿಜೆಪಿಯವರು ಚರ್ಚೆಗೆ ಬಾರದೆ ಗದ್ದಲ ನಡೆಸುವ ಮೂಲಕ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದು ನಾಚಿಕೆಗೇಡು. ಸದನದ ನಿಯಮದ ಪ್ರಕಾರ ಪ್ರತಿಭಟನೆ ಮಾಡಬೇಕು ಎಂದರೆ ಬಾವಿಗೆ ಇಳಿದು ಪ್ರತಿಭಟನೆ ಮಾಡಬೇಕು, ಇದ್ದಲ್ಲಿಯೇ ಕೂಗಾಟ ಮಾಡುವುದಲ್ಲ ಎಂದರು.

ಅವರು ಚರ್ಚೆಗೂ ಸಿದ್ಧರಿಲ್ಲ, ನಾವು ನೀಡುವ ಹೇಳಿಕೆಗಳನ್ನೂ ಸ್ವೀಕರಿಸುವುದಿಲ್ಲ. ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿವೆ, ಬರದ ಛಾಯೆ ಇದೆ, ಖಾಸಗಿ ಕಂಪೆನಿಗಳಿಂದ ರೈತರಿಗೆ ವಿಮೆ ಹಣ ತಲುಪಿಲ್ಲ, ಕೆಪಿಎಸ್‌ಸಿ ಹಗರಣ ನಡೆದಿದೆ, ಆದರೆ ಇದಾವುದೂ ಬಿಜೆಪಿಯವರಿಗೆ ಮುಖ್ಯ ಎನಿಸಿಲ್ಲ. ಕೆಪಿಎಸ್‌ಸಿ ಹಗರಣ, ವಿಧಾನಪರಿಷತ್ ಚುನಾವಣೆಯಲ್ಲಿ 11 ಶಾಸಕರು ಅಡ್ಡಮತದಾನ ಮಾಡುವ ಮೂಲಕ ತಮ್ಮ ನಾಯಕತ್ವವನ್ನು ತಿರಸ್ಕರಿಸಿರುವುದನ್ನು, ಪಿಎಂ ಕೇರ್ಸ್ ಭ್ರಷ್ಟಾಚಾರ, ರಾಮಮಂದಿರದ ಚಂದಾ ಹಣ ಕದ್ದ ಪ್ರಕರಣಗಳನ್ನು ಮುಚ್ಚಿಡುವುದಕ್ಕೆ ಬಿಜೆಪಿಯವರು ಈ ನಾಟಕ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿಪಕ್ಷಗಳ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕೆ ಸರ್ಕಾರ ಸಿದ್ಧವಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಎಷ್ಟೊಂದು ನಾಯಕರು ಕಳಂಕ ಹೊತ್ತಿದ್ದಾರೆ? ಬಿಜೆಪಿಯವರು ನೈತಿಕತೆ ಇಟ್ಟುಕೊಂಡು ರಾಜೀನಾಮೆ ಕೇಳಬೇಕು. ಅವರಿಗೆ ರಾಜ್ಯದ ಜನರು, ರೈತರು, ಯುವಕರ ಬಗ್ಗೆ ಕಾಳಜಿ ಇಲ್ಲ. ಕೇವಲ ಆರೆಸ್ಸೆಸ್‌ ಅನ್ನು ಮೆಚ್ಚಿಸುವುದಷ್ಟೇ ಅವರ ಗುರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles