ದಾವಣಗೆರೆ: ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕಿರುಹಣಕಾಸು ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಾಲ ವಿತರಣೆ ಮತ್ತು ಮರುಪಾವತಿ ಪ್ರಕ್ರಿಯೆಗಳಲ್ಲಿ ಕೈಗೊಳ್ಳುವ ಕ್ರಮಗಳ ಕುರಿತು ಸಲಹೆ ಮತ್ತು ಸೂಚನೆಗಳ ಕುರಿತು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ಮೈಕ್ರೋ ಫೈನಾನ್ಸ್ ಕಂಪನಿಗಳು ನ್ಯಾಯಬದ್ಧವಾಗಿ ವ್ಯವಹರಿಸಲಿ, ಆದರೆ ಕಿರುಕುಳ ಮರುಕಳಿಸಿದರೆ ಸ್ವಯಂ ಹಿತಾಸಕ್ತಿಯಿಂದ ಎಫ್‌ಐಆರ್ ದಾಖಲಿಸುವಂತೆ ತಿಳಿಸಿದರು.
ಸಾಲವನ್ನು ನೀಡುವಾಗ ಸಾಲ ಪಡೆಯುವ ವ್ಯಕ್ತಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯವನ್ನು ಪರಿಗಣಿಸಬೇಕು. ಮಾಸಿಕ ಒಟ್ಟು ಆದಾಯದ ಶೇ 50 ರಷ್ಟು ಮೊತ್ತವನ್ನು ಮಾತ್ರ ಸಾಲ ಮರುಪಾವತಿ ಸಾಮರ್ಥ್ಯ ಎಂದು ಪರಿಗಣಿಸಬೇಕು. ವ್ಯಕ್ತಿಯು ಬೇರೆಯ ಮೂಲಗಳಿಂದ ಈಗಾಗಲೇ ಪಡೆದಿರುವ ಸಾಲದ ಮರುಪಾವತಿ ಕಂತಿನ ಮೊತ್ತವು. ಆದಾಯದ ಮೂಲಕ್ಕಿಂತ ಶೇ. 50 ರಷ್ಟು ಮೀರುತ್ತಿದ್ದರೆ, ಅಂತಹ ವ್ಯಕ್ತಿಗೆ ಸಾಲ ನೀಡುವಂತಿಲ್ಲ. ಒಂದೊಮ್ಮೆ ನೀಡದರೆ, ಅದು ಮೈಕ್ರೋ ಪೈನಾನ್ಸ್ ಕಂಪನಿ ಕಡೆಯಿಂದ ಆದ ಲೋಪ ಎಂದು ಹೇಳಲಾಗುವುದು. ಜನರಿಗೆ ಅವರ ಅಗತ್ಯಕ್ಕಿಂತ ಹೆಚ್ಚಾಗಿ ಸಾಲವನ್ನು ನೀಡುತ್ತಿದ್ದಾರೆ. ಸಾಲ ಮರುಪಾವತಿಲು ನಿಮ್ಮ ಚೌಕಟ್ಟುನ್ನು ಮೀರಿ ಅವರಿಗೆ ತೊಂದರೆ ನೀಡುತ್ತಿದ್ದಿರಿ. ಇದರ ಬಗ್ಗೆ ಪ್ರಕರಣ ದಾಖಲು ಮಾಡಲಾಗುವುದು. ಗ್ರಾಮೀಣ ಭಾಗದ ಜನರಿಗೆ ಸಾಲದ ಅವಶ್ಯಕತೆ ತುಂಬಾ ಇರುವುದರಿಂದ ಆರ್.ಬಿ.ಐ ನಿಯಮಾನುಸಾರ ಸಾಲ ನೀಡಿ, ಅವರ ಅಗತ್ಯಕ್ಕೆ ತಕ್ಕಂತೆ ಸಾಲ ನೀಡಬೇಕು ಎಂದರು.
ಸಾರ್ವಜನಿಕರಿಗೆ ನಿಮ್ಮ ಪೈನಾನ್ಸ್ ಕಂಪನಿಯ ಬಡ್ಡಿ ಎಷ್ಟು ಅಂತ ತಿಳಿಸಿ, ಮೈಕ್ರೋ ಫೈನಾನ್ಸ್ 2 ಲಕ್ಷ ರೂ ವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಸಾಲ ನೀಡುವ ಸಂಧರ್ಭದಲ್ಲಿ ಅರ್ಜಿ ಹಾಗೂ ಷರತ್ತುಗಳು ಕನ್ನಡದಲ್ಲಿರಬೇಕು. ಸಾಲ ಮತ್ತು ಬಾಕಿ ವಸೂಲಾತಿ ಸಂದರ್ಭದಲ್ಲಿ ಸಾಲ ಪಡೆದ ವ್ಯಕ್ತಿಯ ಕುಟುಂಬದ ಯಾವ ವ್ಯಕ್ತಿಗಳನ್ನು ಕೆವೈಸಿ ಕೇಳುವಂತಿಲ್ಲ. ಬಾಕಿ ಪಾವತಿ ಮಾಡಿ ಎಂದು ಒತ್ತಾಯಿಸುವಂತಿಲ್ಲ. ಅತ್ಯಂತ ಕಡಿಮೆ ಮೊತ್ತದ ಸಾಲವಾದರೂ ವಿಮೆ ಮಾಡಿಸಬೇಕು. ಸಾಲ ಪಡೆದ ವ್ಯಕ್ತಿಯು ಮೃತಪಟ್ಟಲ್ಲಿ ವಿಮೆಯ ಮೂಲಕ ಸಾಲದ ಮೊತ್ತವನ್ನು ಪಡೆಯಬೇಕು. ಬಡ್ಡಿ ದರ ಗರಿಷ್ಠ ಶೇ. 18 ರಷ್ಟು ಮಾತ್ರ, ಇದಕ್ಕಿಂತ ಹೆಚ್ಚಿನ ಬಡ್ಡಿದರ ವಸೂಲಿ ಮಾಡುವಂತಿಲ್ಲ.
ವಸೂಲಿ ಸಿಬ್ಬಂದಿ ಬೆದರಿಕೆ ಹಾಕಬಾರದು, ಬೈಗುಳ-ಅವಾಚ್ಯ ಶಬ್ದಗಳ ಬಳಕೆ ಮಾಡಬಾರದು. ಸಾಲ ಪಡೆದವರಿಗೆ ಪದೇ ಪದೇ ಕರೆ ಮಾಡಬಾರದು. ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ಒಳಗೆ ಮಾತ್ರ ಕರೆ ಮಾಡಬೇಕು. ಸಾಲ ಪಡೆದ ವ್ಯಕ್ತಿಯ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಮತ್ತು ಸಹದ್ಯೋಗಿಗಳಿಗೆ ಕರೆ ಮಾಡುವಂತಿಲ್ಲ. ಸಾಲ ಪಡೆದವರ ಹೆಸರು ಮತ್ತು ವಿವರಗಳನ್ನು ಯಾವುದೇ ಕಾರಣಕ್ಕೂ ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ. ಸಾಲ ಪಡೆದ ಕುಟುಂಬದವರ ಮೇಲೆ ಹಲ್ಲೆ ನಡೆಸುವಂತಿಲ್ಲ. ಯಾವುದೇ ರೀತಿಯ ಕಿರುಕುಳ ನೀಡುವಂತಿಲ್ಲ. ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕೃತ್ಯವನ್ನು ಎಸಗುವಂತಿಲ್ಲ. ಸಾಲ ಪಡೆದವರ ಆಸ್ತಿ-ಸ್ವತ್ತುಗಳಿಗೆ ಹಾನಿ ಮಾಡುವಂತಿಲ್ಲ. ಬಾಕಿ ಪಾವತಿ ಮಾಡದೇ ಇದ್ದಾಗ ಎದುರಾಗಬಹುದಾದ ಪರಿಸ್ಥಿತಿಯ ಬಗ್ಗೆ ಸುಳ್ಳು ಮಾಹಿತಿ ನೀಡಬಾರದು. ತಡವಾಗಿ ಕಂತು ಪಾವತಿಸಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಬಡ್ಡಿ ಹಾಕುವಂತಿಲ್ಲ. ಸಾಲ ವಸೂಲಿಗೆ ರೌಡಿಗಳನ್ನು ಬಿಟ್ಟು ದಬ್ಬಾಳಿಕೆ ಮಾಡುವಂತಿಲ್ಲ. ಆರ್.ಬಿ.ಐ ನಿಯಾಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಫೆನಾನ್ಸ್ ಕಂಪನಿಯವರು ಯಾವುದೇ ಕಾರಣಕ್ಕೂ ಆಧಾರ್ ಕಾರ್ಡ್ ತೆಗೆದುಕೊಳ್ಳಬಾರದು. ಪಾನ್ ಬ್ರೋಕರ್ಸ್ ತಮ್ಮ ಅಂಗಡಿಗಳ ಮುಂದೆ ಸಿಸಿಟಿವಿ ಹಾಕಿಸಿ ನಿಮ್ಮಿಂದಲೂ ಜನರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜಗಳೂರು, ಮಾಯಕೊಂಡ, ಹೊನ್ನಾಳಿಯಿಂದ ಸಾಕಷ್ಟು ದೂರುಗಳು ಬಂದಿರುತ್ತವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿರುತ್ತದೆ ಎಂದರು.
ಸಭೆಯಲ್ಲಿ ಎಸ್ಪಿ ಉಮಾ ಪ್ರಶಾಂತ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ಆಚಾರ್ಯ, ಡಿವೈಎಸ್‌ಪಿ ಬಸವರಾಜ, ಚನ್ನಗಿರಿ ಉಪವಿಭಾಗದ ಎಎಸ್ಪಿ ಶ್ಯಾಮ್ ವರ್ಗೀಸ್ ಉಪಸ್ಥಿತರಿದ್ದರು.