Home ಕ್ರೈಂ ನ್ಯೂಸ್ ಸ್ವಾತಂತ್ರ್ಯ ದಿನಾಚರಣೆಗೆ ಗೈರಾದ ವಿದ್ಯಾರ್ಥಿಗಳಿಗೆ ‘ಪಾಕಿಸ್ತಾನಕ್ಕೆ ಹೋಗಿ’ ಎಂದ ಶಾಲಾ ಮಾಲೀಕ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸ್ವಾತಂತ್ರ್ಯ ದಿನಾಚರಣೆಗೆ ಗೈರಾದ ವಿದ್ಯಾರ್ಥಿಗಳಿಗೆ ‘ಪಾಕಿಸ್ತಾನಕ್ಕೆ ಹೋಗಿ’ ಎಂದ ಶಾಲಾ ಮಾಲೀಕ!

Share
ಸ್ವಾತಂತ್ರ್ಯ
Share

ತೃಶ್ಶೂರ್: ಶಾಲೆಯಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ಗೈರುಹಾಜರಾದ ವಿದ್ಯಾರ್ಥಿಗಳಿಗೆ “ಪಾಕಿಸ್ತಾನಕ್ಕೆ ಹೋಗಿ” ಎಂದು ಹೇಳಿಕೆ ನೀಡುವ ಮೂಲಕ ಕೇರಳದ ತೃಶ್ಶೂರ್ ಜಿಲ್ಲೆಯ ಮಾಲಾ ಮೂಲದ ಶಾಲೆಯೊಂದರ ಮಾಲೀಕರು ಭಾರೀ ವಿವಾದ ಸೃಷ್ಟಿಸಿದ್ದಾರೆ. ವಿವಾದ ತೀವ್ರಗೊಳ್ಳುತ್ತಿದ್ದಂತೆ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಅಂತಿಮವಾಗಿ ಶಾಲಾ ಮಾಲೀಕ ಕ್ಷಮೆಯಾಚಿಸಿದ್ದಾರೆ.

ಘಟನೆಯ ವಿವರ:

ತೃಶ್ಶೂರ್‌ನ ಮಾಲಾದಲ್ಲಿರುವ ‘ಡಾ. ರಾಜು ಡೇವಿಸ್ ಇಂಟರ್‌ನ್ಯಾಶನಲ್ ಸ್ಕೂಲ್’ ಮಾಲೀಕ ಡಾ. ರಾಜು ಡೇವಿಸ್ ಅವರು ಶಾಲೆಯ ವಾಟ್ಸಾಪ್ ಗ್ರೂಪ್‌ನಲ್ಲಿ ಧ್ವನಿ ಸಂದೇಶ ಕಳುಹಿಸಿದ್ದರು. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ಶಾಲೆಯ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಪೋಷಕರು ಕಳುಹಿಸಿರಲಿಲ್ಲ. ಇದರಿಂದ ಕೆರಳಿದ ಡೇವಿಸ್, “ವಿದ್ಯಾರ್ಥಿಗಳನ್ನು ಕರೆತರಲು ನಾನು ಹೆಚ್ಚುವರಿಯಾಗಿ 1 ಲಕ್ಷ ರೂಪಾಯಿ ವೆಚ್ಚ ಮಾಡಿ ಬಸ್ ವ್ಯವಸ್ಥೆ ಮಾಡಿದ್ದೆ. ಆದರೆ ಅರ್ಧಕ್ಕಿಂತ ಹೆಚ್ಚು ಪೋಷಕರು ಮಕ್ಕಳನ್ನು ಕಳುಹಿಸಿಲ್ಲ. ಇಂತಹವರು ಭಾರತದಲ್ಲಿ ಇರಲು ಅರ್ಹರಲ್ಲ, ಅವರು ಪಾಕಿಸ್ತಾನಕ್ಕೆ ಹೋಗಬೇಕು” ಎಂದು ಸಂದೇಶ ರವಾನಿಸಿದ್ದರು. ಅಲ್ಲದೆ ಗೈರಾದ ವಿದ್ಯಾರ್ಥಿಗಳನ್ನು ತರಗತಿಗೆ ಸೇರಿಸಿಕೊಳ್ಳುವುದಿಲ್ಲ ಎಂದೂ ಎಚ್ಚರಿಸಿದ್ದರು.

ಸ್ಪಷ್ಟನೆ ಹಾಗೂ ಪ್ರತಿಭಟನೆ:

ಈ ಸಂದೇಶ ಹೊರಬೀಳುತ್ತಿದ್ದಂತೆ ಸಾರ್ವಜನಿಕರು ಹಾಗೂ ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಆ ಬಳಿಕ ಮತ್ತೊಂದು ಆಡಿಯೋ ಹಂಚಿಕೊಂಡ ರಾಜು ಡೇವಿಸ್, “ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. 1947ರಿಂದಲೂ ಪಾಕಿಸ್ತಾನ ನಮ್ಮ ಶತ್ರು ದೇಶ ಎಂಬ ಕಾರಣಕ್ಕೆ ಆ ಹೆಸರು ಬಳಸಿದೆನೇ ಹೊರತು ಯಾವುದೇ ಧರ್ಮ ಅಥವಾ ಇತರ ದೇಶಗಳನ್ನು ಉದ್ದೇಶಿಸಿ ಅಲ್ಲ” ಎಂದು ಸಮರ್ಥಿಸಿಕೊಂಡರು.

ಆದರೆ ಈ ಹೇಳಿಕೆಯನ್ನು ವಿರೋಧಿಸಿ ಕೇರಳದ ಪ್ರಮುಖ ವಿದ್ಯಾರ್ಥಿ ಸಂಘಟನೆಗಳಾದ ಎಸ್‌ಎಫ್‌ಐ (SFI) ಮತ್ತು ಕೆಎಸ್‌ಯು (KSU) ಕಾರ್ಯಕರ್ತರು ಶಾಲಾ ಮಾಲೀಕರ ನಿವಾಸದ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ತೆರವುಗೊಳಿಸಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಡಾ. ರಾಜು ಡೇವಿಸ್ ಮತ್ತೊಂದು ಧ್ವನಿ ಸಂದೇಶದ ಮೂಲಕ ತಮ್ಮ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles