SUDDIKSHANA KANNADA NEWS/ DAVANAGERE/ DATE:24-01-2025
ಬೆಂಗಳೂರು: ಸಚಿವ ದಿನೇಶ್ ಗುಂಡೂರಾವ್ ಅವರು ಮೈಮರೆತ ಪರಿಣಾಮ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಗಬ್ಬೆದ್ದು ನಾರುತ್ತಿದೆ. ಸ್ವಿಮ್ಮಿಂಗ್ ಫೂಲ್ನಲ್ಲಿ ಸ್ವಚ್ಛಂದವಾಗಿ ಈಜಾಡುವ ಆರೋಗ್ಯ ಸಚಿವರಿಗೆ ರಾಜ್ಯದ ಬಡ ರೋಗಿಗಳ ಸಂಕಷ್ಟ ಅರ್ಥವಾಗದ್ದು ವಿಷಾದನೀಯ. ಸಿದ್ದರಾಮಯ್ಯ ಅವರೇ, ಸರ್ಕಾರಿ ಆಸ್ಪತ್ರೆಗಳಿಗೂ ತಮಗೂ, ಇಲಾಖೆಗೂ ಸಂಬಂಧವಿಲ್ಲದಂತಿರುವ ಆರೋಗ್ಯ ಸಚಿವರಿಗೆ ಜವಾಬ್ದಾರಿ, ಕರ್ತವ್ಯದ ಪಾಠ ಮಾಡಿ ಎಂದು ರಾಜ್ಯ ಬಿಜೆಪಿ ಘಟಕವು ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ ಸಾಕು ಸಮಾಜಘಾತುಕರು, ಕಳ್ಳರು, ದರೋಡೆಕೋರರು, ಮೀಟರ್ ಬಡ್ಡಿ ದಂಧೆಕೋರರು ಬಾಲಬಿಚ್ಚುತ್ತಾರೆ. ಕರ್ನಾಟಕದ ಮೂಲೆ ಮೂಲೆಯಲ್ಲೂ ಈಗ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಮಿತಿ ಮೀರುತ್ತಿದೆ ಎಂದು ಕಿಡಿಕಾರಿದೆ.
ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿನಲ್ಲಿ ಬ್ಯುಸಿ ಆಗಿರುವುದರಿಂದ ದಂಧೆಕೋರರ ಆತ್ಮವಿಶ್ವಾಸ ಹೆಚ್ಚಿದೆ. ಸ್ವತಃ ಮುಖ್ಯಮಂತ್ರಿಗೆ ಮಾಂಗಲ್ಯ ಸರ ರವಾನಿಸುವ ಅಭಿಯಾನ ನಡೆಸುತ್ತಿದ್ದರೂ ಮುಖ್ಯಮಂತ್ರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಆರೋಪಿಸಿದೆ.
ಮುಖ್ಯಮಂತ್ರಿಗಳೇ ಗೃಹಲಕ್ಷ್ಮಿಯರು ಬೀದಿಗೆ ಬರುತ್ತಿದ್ದಾರೆ, ನೀವೇಕೆ ಮೌನವಾಗಿದ್ದೀರಿ? ಮೀಟರ್ ಬಡ್ಡಿ ದಂಧೆಕೋರರಿಂದ ನಿಮಗೂ ಪಾಲು ಬರುತ್ತಿದೆಯೇ? ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಕರ್ನಾಟಕಕ್ಕೆ ಬಹುದೊಡ್ಡ ಶಾಪವಾಗಿದೆ ಎಂದು ಹೇಳಿದೆ.
ದಾವೋಸ್ನಲ್ಲಿ ನಡೆಯುತ್ತಿರುವ 2025ರ ಜಾಗತಿಕ ಆರ್ಥಿಕ ಸಮಾವೇಶಕ್ಕೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹೋಗಿ ತಮ್ಮ ರಾಜ್ಯಕ್ಕೆ ಲಕ್ಷಾಂತರ ಕೋಟಿ ಬಂಡವಾಳ ತಂದಿದ್ದಾರೆ. ಆದರೆ, ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸಿ ನಿದ್ದೆಗೆ ಜಾರಿದ್ದಾರೆ ನೋಡಿ ಎಂದು ಬಿಜೆಪಿ ರಾಜ್ಯ ಘಟಕವು ಫೇಸ್ ಬುಕ್ ಪೋಸ್ಟ್ ನಲ್ಲಿ ಕಿಡಿಕಾರಿದೆ.