ಅಮರಾವತಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಚಿಖಲದಾರ ತಾಲೂಕಿನ ಡೋಮ ಗ್ರಾಮದಲ್ಲಿರುವ ಸರ್ಕಾರಿ ಬುಡಕಟ್ಟು ವಸತಿ ಶಾಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ‘ದೆವ್ವದ ಕಾಟ’ದ ಭಯದಿಂದ ಸುಮಾರು 600 ವಿದ್ಯಾರ್ಥಿನಿಯರು ಹಾಸ್ಟೆಲ್ ತೊರೆದು ಮನೆಗೆ ತೆರಳಿದ್ದಾರೆ.
ಜುಲೈ 22 ರಂದು ಶಾಲೆಯ ನಾಲ್ಕು ಹೆಣ್ಣುಮಕ್ಕಳು ಇದ್ದಕ್ಕಿದ್ದಂತೆ ಅನಿಯಂತ್ರಿತವಾಗಿ ನಗುವುದು, ಅಳುವುದು ಹಾಗೂ ಕಾಲಿನ ಗೆಜ್ಜೆಯ ಸದ್ದು ಕೇಳಿಸುತ್ತಿದೆ ಎಂದು ಹೇಳುವ ಮೂಲಕ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದರು. ಇದರಿಂದ ಹಾಸ್ಟೆಲ್ನಲ್ಲಿ ಭೂತಬಾಧೆಯಿದೆ ಎಂಬ ವದಂತಿ ಹಬ್ಬಿ, ಒಟ್ಟು 810 ವಿದ್ಯಾರ್ಥಿಗಳಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತಂಕಗೊಂಡು ಹಾಸ್ಟೆಲ್ ಖಾಲಿ ಮಾಡಿದ್ದಾರೆ.
ವೈಜ್ಞಾನಿಕ ವಿವರಣೆ ಹಾಗೂ ತನಿಖೆ:
ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ತಜ್ಞರ ತಂಡ ಮತ್ತು ವೈದ್ಯರು, ಇದು ಯಾವುದೇ ಭೂತಬಾಧೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ತೀವ್ರ ಮಾನಸಿಕ ಒತ್ತಡ ಮತ್ತು ಆತಂಕದಿಂದ ಉಂಟಾಗುವ “ಮಾಸ್ ಸೈಕೋಜೆನಿಕ್ ಇಲ್ನೆಸ್” (Mass Psychogenic Illness / Mass Hysteria) ಎಂಬ ಸೈಕೋ-ಮೆಡಿಕಲ್ ಸ್ಥಿತಿಯಾಗಿದೆ ಎಂದು ವೈದ್ಯರು ವರದಿ ನೀಡಿದ್ದಾರೆ.
ಸ್ಥಳೀಯ ಮೂಢನಂಬಿಕೆಗಳಾದ ಮರ ಕಡಿದಿದ್ದು, ದೇವಸ್ಥಾನದ ಬಳಿ ಚರಂಡಿ ನಿರ್ಮಿಸಿದ್ದು ಮತ್ತು ಸ್ಥಳೀಯ ಯುವಕನ ಸಾವಿನ ವದಂತಿಗಳು ಈ ಭಯವನ್ನು ಹೆಚ್ಚಿಸಿವೆ. ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ (MANS) ಸದಸ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಿ, ಶಾಲಾ ತರಗತಿಗಳಿಗೆ ಮರಳುವಂತೆ ಮನವಿ ಮಾಡಿದ್ದಾರೆ.





Leave a comment