SUDDIKSHANA KANNADA NEWS/ DAVANAGERE/ DATE:23-01-2025
ದಾವಣಗೆರೆ: ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವು ಕೇವಲ ಭರವಸೆಯನ್ನು ಮಾತ್ರ ನೀಡುತ್ತಿದೆಯೇ ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ. ಚುನಾವಣೆ ವೇಳೆ ಘೋಷಿಸಿದ ಯಾವ ಯೋಜನೆಗಳೂ ಪರಿಣಾಮಕಾರಿಯಾಗಿ ಜಾರಿಯೇ ಆಗಿಲ್ಲ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ಗ್ಯಾರಂಟಿ ಜಾರಿ ಮಾಡುವ ಮೂಲಕ ಜನರ ಮನ ಗೆದ್ದಿದೆ. ಮತ್ತಷ್ಟು ಪಕ್ಷ ಸಂಘಟನೆಗೆ ಎಲ್ಲರೂ ಕಾರ್ಯೋನ್ಮುಖರಾಗಿ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಕರೆ ನೀಡಿದರು.
ಹೈದರಾಬಾದ್ನ ಇಂದಿರಾ ಭವನದಲ್ಲಿ ತೆಲಂಗಾಣ ಪ್ರದೇಶ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಶಿವರಚರಣ್ ಜಕ್ಕಿಡಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ
ಗ್ಯಾರಂಟಿಗಳು ಜನರಿಗೆ ತಲುಪುತ್ತಿವೆ. ಕೆಲವರಿಗೆ ಸೌಲಭ್ಯ ಸಿಗುತ್ತಿಲ್ಲ. ಈ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಿದರೆ ಮತ್ತಷ್ಟು ಜನಪ್ರಿಯತೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ದೇಶದ ಆಸ್ತಿ ಯುವಕರು. ಆದ್ರೆ, ಬಿಜೆಪಿಯು ಯುವಕರಲ್ಲಿ ಧರ್ಮ, ಜಾತಿಯ ವಿಷ ಬೀಜ ಬಿತ್ತುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಅವಶ್ಯಕತೆ ಇದೆ. ಬಿಜೆಪಿ ನಾಯಕರ ಪ್ರಚೋದನಕಾರಿ ಭಾಷಣ ಕೇಳಿ ಯುವಕರ ಮನಸ್ಸು ಕದಡುತ್ತಿದೆ.
ಯುವಕರಿಗೆ ಸತ್ಯ ತಿಳಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಗೃಹಲಕ್ಷ್ಮಿ, ಭಾಗ್ಯಲಕ್ಷ್ಮಿ, ಶಕ್ತಿ, ಯುವನಿಧಿ ಯೋಜನೆಗಳು ಜಾರಿಯಾಗಿವೆ. ಜನರೂ ಸಹ ಖುಷಿಗೊಂಡಿದ್ದಾರೆ. ತೆಲಂಗಾಣದಲ್ಲಿಯೂ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ಕೊಟ್ಟಿದ್ದ ಭರವಸೆಗಳು ಜಾರಿಯಾಗುತ್ತಿವೆ. ಆದ್ರೆ, ಕೇಂದ್ರ ಸರ್ಕಾರವು ನೀಡಿದ್ದ ಭರವಸೆಗಳಲ್ಲಿ ಯಾವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಕೇವಲ ಚುನಾವಣೆಯಲ್ಲಿ ಗೆಲ್ಲಬೇಕು, ಆಪರೇಷನ್ ಮಾಡಿ ಸರ್ಕಾರ ಉರುಳಿಸಬೇಕೆಂಬ ನಿಟ್ಟಿನಲ್ಲಿ ಯೋಚಿಸುತ್ತಾರೆ ಹೊರತು ದೇಶದ ಜನರ ಬಗ್ಗೆ ಕಾಳಜಿಯೇ ಇಲ್ಲ ಎಂದು ಟೀಕಿಸಿದರು.
ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಪಕ್ಷದ ನಾಯಕರು ಈಗಾಗಲೇ ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹೋರಾಟದ
ರಣಕಹಳೆ ಮೊಳಗಿಸಿದ್ದಾರೆ. ಸಂವಿಧಾನ ಶಿಲ್ಪಿ, ಭಾರತಕ್ಕೆ ಸಂವಿಧಾನ ನೀಡಿದ ಮಹಾನ್ ಚೇತನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅಮಿತ್ ಶಾ ವಿರುದ್ಧ ಹೋರಾಟ ಮತ್ತಷ್ಟು ತೀವ್ರವಾಗಬೇಕು. ಯುವಕರಲ್ಲಿ ಈ ಕುರಿತಂತೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಸೈಯದ್ ಖಾಲಿದ್ ಅಹ್ಮದ್ ಪ್ರತಿಪಾದಿಸಿದರು.
ಕಾರ್ಯಕಾರಿಣಿ ಸಭೆಯಲ್ಲಿ ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಕಾರ್ಯದರ್ಶಿ ಸುರಭಿ ದ್ವಿವೇದಿ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರು ಪಾಲ್ಗೊಂಡಿದ್ದರು.