ದಾವಣಗೆರೆ/ ನವದೆಹಲಿ: ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಕೇಂದ್ರ ಸರ್ಕಾರದ PLISFPI ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಆದರೆ, ಎಪಿಇಡಿಎ (APEDA) ಯೋಜನೆಯಡಿ ದಾವಣಗೆರೆಯ M/s IAP Farm Services Pvt. Ltd. ಸಂಸ್ಥೆಗೆ ಸೌತೆಕಾಯಿ ಮತ್ತು ಘರ್ಕಿನ್ ಸಂಸ್ಕರಣೆಗೆ ಸಂಬಂಧಿಸಿದ ಮೂಲಸೌಕರ್ಯ ಬಲಪಡಿಸಲು ಹಣಕಾಸಿನ ನೆರವು ಮಂಜೂರಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆಹಾರ ಸಂಸ್ಕರಣಾ ಕೈಗಾರಿಕೆಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಕರ್ನಾಟಕ ಮತ್ತು ದಾವಣಗೆರೆ ಜಿಲ್ಲೆಗೆ ಕೇಂದ್ರದ ಯೋಜನೆಗಳಿಂದ ದೊರೆತ ಪ್ರಯೋಜನಗಳ ಕುರಿತು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದಿಂದ ಮಾಹಿತಿ ಕೋರಿದ್ದರು.
ಇದಕ್ಕೆ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾದ ಚಿರಾಗ್ ಪಾಸ್ವಾನ್ ಉತ್ತರಿಸಿದ್ದು ಕರ್ನಾಟಕದಿಂದ ಎಪಿಇಡಿಎ ಯೋಜನೆಯಡಿ ಹಣಕಾಸಿನ ನೆರವು ಕೋರಿ 11 ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಪೈಕಿ ಆರು ಯೋಜನೆಗಳಿಗೆ ನೆರವು ಮಂಜೂರಾಗಿದೆ. ಇದರಲ್ಲಿ ದಾವಣಗೆರೆಯ IAP Farm Services Pvt. Ltd. ಕೂಡ ಸೇರಿದೆ ಎಂದಿದ್ದಾರೆ.
ಆಹಾರ ಸಂಸ್ಕರಣಾ ವಲಯದಲ್ಲಿ ಆಧುನಿಕ ಮತ್ತು ಸ್ವಯಂಚಾಲಿತ ಯಂತ್ರೋಪಕರಣಗಳ ಕೊರತೆ, ಆಮದು ತಂತ್ರಜ್ಞಾನದ ಮೇಲಿನ ಅವಲಂಬನೆ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಂತ್ರಜ್ಞಾನ ಉನ್ನತೀಕರಣದ ಕೊರತೆ, ಸಮರ್ಪಕ ಶೀತ ಸರಪಳಿ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯದ ಅಭಾವ ಪ್ರಮುಖ ಸವಾಲುಗಳಾಗಿವೆ. MSMEಗಳಿಗೆ ಆಧುನಿಕ ಯಂತ್ರೋಪಕರಣ, ಹಣಕಾಸು ಮತ್ತು ಗುಣಮಟ್ಟದ ಮೂಲಸೌಕರ್ಯ ಸೀಮಿತವಾಗಿ ಲಭ್ಯವಾಗುತ್ತಿರುವುದೂ ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಗೆ ಅಡ್ಡಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಆಹಾರ ಸಂಸ್ಕರಣಾ ಉದ್ಯಮಗಳ ಆಧುನೀಕರಣ ಮತ್ತು ವಿಸ್ತರಣೆಗಾಗಿ ಪ್ರಧಾನಮಂತ್ರಿ ಕಿಸಾನ್ ಸಂಪದಾ ಯೋಜನೆ (PMKSY), PMFME ಹಾಗೂ PLISFPI ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. PMFMEಗೆ ₹10,000 ಕೋಟಿ ಹಾಗೂ PLISFPIಗೆ ₹10,900 ಕೋಟಿ ಅನುದಾನ ನಿಗದಿಪಡಿಸಲಾಗಿದೆ.
PLISFPI ಯೋಜನೆಯಡಿ ಕರ್ನಾಟಕದಲ್ಲಿ 21 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 19,707 ಉದ್ಯೋಗಗಳು ಸೃಷ್ಟಿಯಾಗಿವೆ. Category-I ಅಡಿಯಲ್ಲಿ ಅನುಮೋದನೆ ಪಡೆದಿರುವ 13 ಘಟಕಗಳಲ್ಲಿ ಒಟ್ಟು ₹312.87 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ರಫ್ತು ಪಾಲು ಶೇ 1.26ಕ್ಕೆ ಏರಿಕೆ
ಜಾಗತಿಕ ಸಂಸ್ಕರಿತ ಆಹಾರ ರಫ್ತಿನಲ್ಲಿ ಭಾರತದ ಪಾಲು 2016ರಲ್ಲಿ ಶೇ 0.97ರಷ್ಟಿದ್ದು, 2025ರಲ್ಲಿ ಶೇ 1.26ಕ್ಕೆ ಏರಿಕೆಯಾಗಿದೆ. ಮಾರುಕಟ್ಟೆ ವಿಸ್ತರಣೆ, ರಫ್ತು ವೈವಿಧ್ಯೀಕರಣ ಹಾಗೂ ಭಾರತೀಯ ಕೈಗಾರಿಕೆಗಳನ್ನು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಪರ್ಕಿಸುವ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ.
ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ರಫ್ತು ಹೆಚ್ಚಿಸಲು PLISFPI ಮೂಲಕ ಭಾರತೀಯ ಆಹಾರ ಬ್ರ್ಯಾಂಡ್‌ಗಳ ಅಂತಾರಾಷ್ಟ್ರೀಯ ಮಾರುಕಟ್ಟೆ ಮತ್ತು ಬ್ರ್ಯಾಂಡಿಂಗ್‌ಗೆ ನೆರವು ನೀಡಲಾಗುತ್ತಿದೆ. ‘ವರ್ಲ್ಡ್ ಫುಡ್ ಇಂಡಿಯಾ’ ಮೂಲಕ ಹೂಡಿಕೆ ಮತ್ತು ಜಾಗತಿಕ ಸಹಭಾಗಿತ್ವಕ್ಕೆ ಉತ್ತೇಜನ ನೀಡಲಾಗುತ್ತಿದ್ದು, ಎಪಿಇಡಿಎ ಮೂಲಕ ಮೂಲಸೌಕರ್ಯ ಅಭಿವೃದ್ಧಿ, ಗುಣಮಟ್ಟ ಸುಧಾರಣೆ ಮತ್ತು ಮಾರುಕಟ್ಟೆ ಉತ್ತೇಜನಕ್ಕೆ ಹಣಕಾಸಿನ ನೆರವು ಒದಗಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.





Leave a comment