ದಾವಣಗೆರೆ: ಹಾಸ್ಟೆಲ್ ನಲ್ಲಿನ ವಿದ್ಯಾರ್ಥಿನಿಯರಿಗೆ ನೀಡುತ್ತಿರುವ ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಮತ್ತು ವಸತಿ ನಿಲಯಗಳಲ್ಲಿನ ಲೋಪ, ದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿಎಂ ತಾಕೀತು ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಹದಡಿ ರಸ್ತೆಯಲ್ಲಿರುವ ಡಾ. ಬಿ. ಆರ್ ಅಂಬೇಡ್ಕರ್ ಕಾಲೇಜು ವಿದ್ಯಾರ್ಥಿನಿ ನಿಲಯ ಮತ್ತು ಫೈನ್ ಆರ್ಟ್ ಕಾಲೇಜು ಮುಂಭಾಗ ಇರುವ ಕ್ರೀಡಾ ಹಾಸ್ಟೆಲ್ ಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಕಳೆದ ವಾರ ಜಿಲ್ಲೆಗೆ ಭೇಟಿ ನೀಡಿದ್ದು ಅವರ ಸೂಚನೆ ಮೇರೆಗೆ ಇಂದು ಬೇಟಿ ನೀಡಲಾಗಿದೆ ಎಂದು ತಿಳಿಸಿದರು.
ನಿಲಯದಲ್ಲಿನ ಮೆನು ಪ್ರಕಾರವೇ ಅಡುಗೆ ಸಿದ್ಧಪಡಿಸಲಾಗುತ್ತಿದ್ದರೂ, ಸಾಂಬಾರ್ ಪೌಡರ್, ತರಕಾರಿ ಹಾಗೂ ಬಳಸುತ್ತಿರುವ ಧಾನ್ಯಗಳ ಗುಣಮಟ್ಟ ಸುಧಾರಿಸಬೇಕಿದೆ. ಅಲ್ಲದೆ ಹಾಲು ಮತ್ತು ಮೊಸರಿನ ಪ್ರಮಾಣ ಕಡಿಮೆಯಿರುವುದು ಕಂಡುಬಂದಿದ್ದು, ಇವುಗಳ ಗುಣಮಟ್ಟ ಮತ್ತು ಪ್ರಮಾಣವನ್ನು ತಕ್ಷಣವೇ ಹೆಚ್ಚಿಸುವಂತೆ ಸೂಚನೆ ನೀಡಿದರು.
ಸ್ವಂತ ಕಟ್ಟಡಗಳ ಅಭಾವದಿಂದಾಗಿ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿನಿಲಯ ನಡೆಸಲಾಗುತ್ತಿದ್ದು, ಮೇಲ್ಛಾವಣಿಯು ಶೀಟ್ನಿಂದ ಕೂಡಿರುವುದರಿಂದ ಬೇಸಿಗೆಯಲ್ಲಿ ಮಕ್ಕಳಿಗೆ ಶಾಖದ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿನಿಯರನ್ನು ತಕ್ಷಣವೇ ಬೇರೆ ಸುಸಜ್ಜಿತ ಕಟ್ಟಡ/ವಸತಿ ನಿಲಯಕ್ಕೆ ಸ್ಥಳಾಂತರಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಸ್ಪಷ್ಟ ಸೂಚನೆ ನೀಡಿದರು.
ಬಿಸಿ ನೀರಿನ ಪೂರೈಕೆಯಲ್ಲಿ ಯಾವುದೇ ಅಭಾವವಿಲ್ಲದಿದ್ದರೂ, ಆಹಾರ ಮತ್ತು ಇತರ ಸೌಲಭ್ಯಗಳ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಬಾರದು. ಯಾವುದೇ ಮುನ್ಸೂಚನೆ ನೀಡದೆ ತಾವು ಮತ್ತೆ ಹಠಾತ್ ತಪಾಸಣೆಗೆ ಬರುವುದಾಗಿ ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಕ್ರೀಡಾ ಹಾಸ್ಟೆಲ್ ನಲ್ಲಿ ನಂಬರ್ ಪ್ಲೇಟ್ ಇಲ್ಲದ ವಾಹನವನ್ನು ಜಪ್ತಿ ಮಾಡುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಕ್ರೀಡಾ ವಸತಿ ನಿಲಯದಲ್ಲಿ ಜ್ಯೂಸ್ ನೀಡುತ್ತಿಲ್ಲವೆಂದು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಹಿಂದೆ ಈ ಕ್ರೀಡಾ ವಸತಿ ನಿಲಯದಲ್ಲಿ ಅನರ್ಧಿಕೃತ ಕ್ರೀಡಾಪಟುಗಳು ಇದ್ದರು, ಈಗ ಅವರನ್ನೆಲ್ಲರನ್ನು ಓಡಿಸಲಾಗಿದೆ. ಈ ವಸತಿ ನಿಲಯಕ್ಕೆ ಐದಾರು ಬಾರಿ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾ ಉಪಸ್ಥಿತರಿದ್ದರು,





Leave a comment