SUDDIKSHANA KANNADA NEWS/ DAVANAGERE/ DATE:04-09-2023
ದಾವಣಗೆರೆ: ಸನಾತನ ಧರ್ಮವು ಸಮಾನತೆ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ಇದು ಕೊರೊನಾ, ಡೆಂಗ್ಯೂ ಹಾಗೂ ಮಲೇರಿಯಾಕ್ಕೆ ಸಮಾನವಾದುದು ಎಂಬ ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಪುತ್ರ, ಸಚಿವ ಉದಯನಿಧಿ ಹೇಳಿಕೆಯನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹಾದೇವಪ್ಪ (H. C. Mahadevappa) ಸಮರ್ಥಿಸಿಕೊಂಡಿದ್ದು, ಸನಾತನ ಧರ್ಮ ಶುದ್ಧೀಕರಣವಾಗಬೇಕು ಎಂದು ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಂಬೇಡ್ಕರ್ ಧರ್ಮ ಬೇಡ ಎಂದು ಹೇಳಿಲ್ಲ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಬೇಕು. ಮನುಷ್ಯನಿಗೆ ಮಾನವೀಯತೆ ಮುಖ್ಯ. ಯಾವ ಧರ್ಮವೂ ಮೇಲಲ್ಲ. ಕೆಳಗಲ್ಲ.
ಸಂವಿಧಾನದ ಪ್ರಕಾರವೇ ಧರ್ಮ ಇರಬೇಕು. ಯಾವ ಧರ್ಮ ನ್ಯಾಯ, ಸಮಾನತೆ ಬೋಧಿಸುವುದಿಲ್ಲವೋ ಅದನ್ನು ಧರ್ಮ ಎಂದು ಕರೆಯಿಸಿಕೊಳ್ಳುವ ಯೋಗ್ಯತೆ ಇರುವುದಿಲ್ಲ. ಅದು ಯಾವ ಧರ್ಮವಾದರೂ ಸರಿ ಎಂದು H. C. Mahadevappa ಹೇಳಿದರು.
ಸಂವಿಧಾನ ಪೀಠಿಕೆಯಲ್ಲಿ ಸಮಾನತೆ, ಸ್ವಾತಂತ್ರ್ಯ ನ್ಯಾಯ, ಎಲ್ಲರೂ ಒಂದೇ ಎಂದಿದೆ. ಎಲ್ಲರೂ ಮುಕ್ತವಾಗುವಿರುವುದು. ಇನ್ನೊಬ್ಬರಿಗೆ ಧಕ್ಕೆ ಆಗಬಾರದು. ಅಮವಾಸ್ಯೆಗೆ ಮಹಾದೇಶ್ವರ ದೇವರು ಸೇರಿದಂತೆ ಇತರೆ ದೇವಸ್ಥಾನಗಳ ಕೆರೆಗೆ
ಹೋಗುತ್ತಾರೆ. ಅಲ್ಲಿ ದೇವರು ಇರುವುದಿಲ್ಲ, ಕಲ್ಲು ತೆಗೆದು ನೀರಿನಲ್ಲಿ ತೊಳೆದು ವಿಭೂತಿ, ಬಿಲ್ವಾ ಪತ್ರೆ ಹಾಕಿ ಪೂಜೆ ಮಾಡಿದರೆ ಕಲುಷಿತವಾಗಿರುವ ನೀರು ಶುದ್ಧೀಕರಣವಾಗುತ್ತದೆಯಾ? ಎಲ್ಲವೂ ಸರಿ ಹೋಗುತ್ತದೆಯೋ ಎಂದು ಪ್ರಶ್ನಿಸಿದರು.
ಲಾರ್ಡ್ ಮೆಕಾಲಿಯಾ ವಿದ್ಯೆ ಕಲಿಸಿದರು. ಸಾವಿರಾರು ಮಂದಿ ವಿದ್ಯಾವಂತರಾದರು. ಡಾ. ಬಿ. ಆರ್. ಅಂಬೇಡ್ಕರ್ ಅವರು ಓದಲು ಸಾಧ್ಯವಾಗುತ್ತಿತ್ತಾ? ಇಂಗ್ಲೀಷ್ ಕಲಿಯಲು ಆಗುತಿತ್ತಾ? ಸಂವಿಧಾನ ಬರೆಯಲು ಆಗುತಿತ್ತಾ? ಆಗಿನ ಕಾಲದಲ್ಲಿ
ಓದಲು ಹೋದರೆ ಕಾಯಿಸಿದ ಎಣ್ಣೆ ಹಾಕುತ್ತಿದ್ದರು. ಮನುಷ್ಯ ಹುಟ್ಟಿದ ಮೇಲೆ ಧರ್ಮ ಹುಟ್ಟಿದೆಯೇ ಹೊರೆತು ಧರ್ಮ ಹುಟ್ಟಿದ ಮೇಲೆ ಮನುಷ್ಯ ಹುಟ್ಟಿದ್ದಲ್ಲ ಎಂದು H. C. Mahadevappa ಹೇಳಿದರು.
ಈ ಸುದ್ದಿಯನ್ನೂ ಓದಿ:
Sirigere Shree: ಕೈಗಾರಿಕಾ ಕಾರಿಡಾರ್ ಗೆ ದಾವಣಗೆರೆಯಲ್ಲಿನ 1,156 ಎಕರೆ ಭೂ ಸ್ವಾಧೀನ ಬೇಡ: ಸಚಿವ ಎಂ. ಬಿ. ಪಾಟೀಲ್ ರಿಗೆ ಸಿರಿಗೆರೆ ಶ್ರೀಗಳ ಸೂಚನೆ
ಸನಾತನದಲ್ಲಿ ಶೂದ್ರರಿಗೆ ಓದು ಕಲಿಸುತ್ತಿರಲಿಲ್ಲ. ಅಂಬೇಡ್ಕರ್ ಅವರು ಮನುವಾದವನ್ನು ಸುಟ್ಟು ಹಾಕಿದ್ದರು. ಯಾವ ಧರ್ಮವೂ ದೊಡ್ಡದಲ್ಲ, ಯಾವ ಧರ್ಮವೂ ಸಣ್ಣದ್ದಲ್ಲ. ಮಾನವೀಯತೆ, ಸಮಾನತೆ, ಸಾಮಾಜಿಕ ನ್ಯಾಯ ಅಗತ್ಯ ಎಂದು
ಪ್ರತಿಪಾದಿಸಿದರು.
ಅದಾನಿ, ಅಂಬಾನಿ ಸೇರಿದಂತೆ ಹಲವರ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರಕ್ಕೆ ಬಡವರು, ಮಧ್ಯಮ ವರ್ಗದವರ ಬಗ್ಗೆ ಕಾಳಜಿ ಇಲ್ಲ. ನಾವು 5 ಗ್ಯಾರಂಟಿಗಳ ಜಾರಿ ಮೂಲಕ ಕುಟುಂಬದ ಸ್ವಾವಲಂಬೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇವೆ. ಪ್ರತಿ ಕುಟುಂಬವು ತಿಂಗಳಿಗೆ ನಾಲ್ಕರಿಂದ 5 ಸಾವಿರ ರೂಪಾಯಿ ಪಡೆಯುತ್ತದೆ. ವರ್ಷಕ್ಕೆ 60 ಸಾವಿರ ರೂಪಾಯಿ ಸಿಗುತ್ತದೆ. ಬೇರೆಯವರ ಮನೆಗೆ ಹೋಗಿ ಅನ್ನ, ಸಾಂಬಾರು, ಈರುಳ್ಳಿ, ಬೆಳ್ಳುಳ್ಳಿ ಕೊಡಿ ಎಂದು ಕೇಳುವುದು ನಿಲ್ಲುತ್ತದೆ. ಸ್ವಾವಲಂಬನೆಯೂ ಆಗಬೇಕಲ್ವಾ ಎಂದು H. C. Mahadevappa ಹೇಳಿದರು.
ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರೇನೂ ದನ, ಎಮ್ಮೆ ಮೇಯಿಸಿದ್ದಾರಾ? ಸಗಣಿ, ಗಂಜಲ ತೆಗೆದಿದ್ದಾರಾ? ಉಳುಮೆ ಮಾಡಿದ್ದಾರಾ? ಈ ಕೆಲಸಗಳನ್ನು ನಾವು ಮಾಡಿದ್ದೇವೆ. ಭಾವಾನಾತ್ಮಕ ಮಾತು ಬೇರೆ. ಆರ್ಥಿಕತೆಗೆ ಬುನಾದಿ ಹಾಕುವಂಥ ಕಾರ್ಯಕ್ರಮ ನಮ್ಮದು. ಬಿಜೆಪಿಯವರಿಗೆ ಬಡವರ ಪರ ಕೆಲಸ ಮಾಡಿ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ ಹತ್ತು ಸಾವಿರ ಕೋಟಿ ರೂಪಾಯಿಯನ್ನು ಬೇರೆ ಬೇರೆ ಯೋಜನೆಗಳಿಗೆ ಬಳಕೆ ಮಾಡಲಾಗಿದೆ. ಈ ಸಮುದಾಯಗಳಿಗೆ ನೀಡಿದ್ದ ಹಣ ಬೇರೆ ಕಾಮಗಾರಿಗಳು, ಯೋಜನೆಗಳಿಗೆ ನೀಡುವ ಅಗತ್ಯ ಇರಲಿಲ್ಲ. ಎಸ್ಸಿ, ಎಸ್ಟಿ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಬೇಕಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ನಾನೇ ದೆಹಲಿಗೆ ಹೋಗಿ ಈ ಬಗ್ಗೆ ಸಂಬಂಧಪಟ್ಟ ಕೇಂದ್ರ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ಎಸ್ಸಿ, ಎಸ್ಟಿ ಸಮುದಾಯಕ್ಕೆ ನೀಡುತ್ತಿದ್ದ ಅನುದಾನ ಕಡಿತಗೊಳಿಸಲಾಗಿದೆ ಎಂಬ ಆರೋಪದಲ್ಲಿ ಸತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.