SUDDIKSHANA KANNADA NEWS/ DAVANAGERE/ DATE:12-01-2025
ಶಿವಮೊಗ್ಗ: ಒಂದೇ ದಿನದ ಅಂತರದಲ್ಲಿ ಶಿವಮೊಗ್ಗದಲ್ಲಿ ಇಬ್ಬರು ಪತ್ರಿಕಾ ಮಿತ್ರರು ಕೊನೆಯುಸಿರೆಳೆದಿದ್ದಾರೆ. ನಿನ್ನೆಯಷ್ಟೇ ಪಬ್ಲಿಕ್ ಟಿವಿ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್ ವಿಧಿವಶರಾಗಿದ್ದಾರೆ. ಆದ್ರೆ, ಇಂದು ತಡರಾತ್ರಿ ಇಂಡಿಯನ್ ಎಕ್ಸ್ ಪ್ರೆಸ್ ಶಿವಮೊಗ್ಗ ಜಿಲ್ಲಾ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್ ಹೃದಯಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ.
ಶಿವಮೊಗ್ಗ ನಂದನ್ ಅವರಿಗೆ 57 ವರ್ಷ ವಯಸ್ಸಾಗಿತ್ತು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ರೈಲ್ವೆ ನಿಲ್ದಾಣ ಸಮೀಪದ ಎ ಎ ಕಾಲೋನಿಯಲ್ಲಿರುವ ನಿವಾಸದಲ್ಲಿ, ನಂದನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ತಡರಾತ್ರಿ 1. 30 ಸುಮಾರಿಗೆ ನಂದನ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಕುಟುಂಬ ಸದಸ್ಯರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆೇ ಮೃತಪಟ್ಟಿದ್ದಾರೆ.
ಶಿವಮೊಗ್ಗ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶಿವಮೊಗ್ಗ ನಂದನ್ ಅಚ್ಚಳಿಯದ ಹೆಸರು. ಜನವಾಹಿನಿಯಲ್ಲಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದ ಅವರು, ಕನ್ನಡಪ್ರಭ ಹಾಗೂ ಇಂಡಿಯನ್ ಎಕ್ಸ್ ಪ್ರೆಸ್ ಛಾಯಾಚಿತ್ರರಾಗಿ
ಹಲವು ದಶಕಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕಾ ಛಾಯಾಗ್ರಾಹಕಾರಿ ಕಾರ್ಯ ನಿರ್ವಹಿಸುತ್ತಿದ್ದರು. ಶಿವಮೊಗ್ಗ ನಂದನ್ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲ, ಬೇರೆ ಬೇರೆ ಜಿಲ್ಲೆಗಳು, ರಾಜ್ಯಗಳಲ್ಲಿಯೂ ಅಚ್ಚಳಿಯದ ಹೆಸರು.
ಅವರ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದ ಫೋಟೋಗಳು ಒಂದಕ್ಕಿಂತ ಮತ್ತೊಂದು ಚೆಂದ.ರಾಜ್ಯ, ರಾಷ್ಟ್ರ ಮಟ್ಟದಲ್ಲಿಯೂ ಛಾಯಾಗ್ರಾಹಕರ ಮನ ಗೆದ್ದಿದ್ದವು. ನಂದನ್ ಅಗಲಿಕೆಗೆ ಪತ್ರಕರ್ತರು, ಸ್ನೇಹಿತರು, ಪತ್ರಿಕಾ ಸಂಘಟನೆಗಳು ಸಂತಾಪ ಸೂಚಿಸಿವೆ.