ಬೆಂಗಳೂರು: ಮಹಿಳೆಯರ ಮಧ್ಯವಯಸ್ಸಿನ ಆರೋಗ್ಯ ಮತ್ತು ಋತುಬಂಧ (ಮೆನೋಪಾಸ್) ಸಂಬಂಧಿತ ಸಮಸ್ಯೆಗಳಿಗೆ ಸೂಕ್ತ ವೈದ್ಯಕೀಯ ಪರಿಹಾರ ಹಾಗೂ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ದೇಶಕ್ಕೇ ಮಾದರಿಯಾಗುವಂತಹ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದೆ. ವೈದ್ಯಕೀಯ, ನರ್ಸಿಂಗ್ ಹಾಗೂ ಅನುಬಂಧಿತ ಆರೋಗ್ಯ ವಿಜ್ಞಾನ (Allied Health) ಶಿಕ್ಷಣ ಪಠ್ಯಕ್ರಮದಲ್ಲಿ ಮೆನೋಪಾಸ್ ವಿಷಯವನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸಮ್ಮತಿ ಸೂಚಿಸಿದ್ದಾರೆ ಎಂದು ನಟಿ ರಮ್ಯಾ ತಿಳಿಸಿದ್ದಾರೆ.
ರಾಯಭಾರಿಯೂ ಆದ ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ ಅವರ ನೇತೃತ್ವದ ಮಹಿಳೆಯರ ಆರೋಗ್ಯ ಕ್ಷೇತ್ರದ ನಿಯೋಗವು ಸಚಿವರನ್ನು ಭೇಟಿ ಮಾಡಿ ಸಲ್ಲಿಸಿದ ಪ್ರಮುಖ ಶಿಫಾರಸುಗಳನ್ನು ಆಲಿಸಿದ ಸಚಿವರು, ಸ್ವತಃ ವೈದ್ಯರಾಗಿರುವುದರಿಂದ ಈ ವಿಷಯದ ಪ್ರಾಮುಖ್ಯತೆ ಹಾಗೂ ತುರ್ತು ಅಗತ್ಯವನ್ನು ಮನಗಂಡು ತಕ್ಷಣವೇ ಎಲ್ಲಾ ಪ್ರಸ್ತಾಪಗಳಿಗೆ ಒಪ್ಪಿಗೆ ನೀಡಿದ್ದಾರೆ.
ಶಿಫಾರಸಿನ ಪ್ರಮುಖ ಅಂಶಗಳು
ಪಠ್ಯಕ್ರಮದಲ್ಲಿ ಸೇರ್ಪಡೆ:
ಎಂ.ಬಿ.ಬಿ.ಎಸ್ (MBBS) ಹಾಗೂ ನರ್ಸಿಂಗ್ ಶಿಕ್ಷಣದ ಪಠ್ಯಕ್ರಮದಲ್ಲಿ ಪೆರಿಮೆನೋಪಾಸ್ ಮತ್ತು ಮೆನೋಪಾಸ್ ಕುರಿತು ಪ್ರತ್ಯೇಕ ಅಧ್ಯಾಯವನ್ನು ಸೇರಿಸುವುದು.
ಮೆನೋಪಾಸ್ ಫೆಲೋಷಿಪ್ ಆರಂಭ:
ಭಾರತದಲ್ಲಿ ಪ್ರಸ್ತುತ ಮೆನೋಪಾಸ್ ಚಿಕಿತ್ಸೆಗೆ ಯಾವುದೇ ಅಧಿಕೃತ ವೈದ್ಯಕೀಯ ತರಬೇತಿ ಅಥವಾ ಕೋರ್ಸ್ ಇಲ್ಲ. ಕರ್ನಾಟಕ ಸರ್ಕಾರವು ದೇಶದಲ್ಲೇ ಮೊದಲ ‘ಮೆನೋಪಾಸ್ ಫೆಲೋಷಿಪ್’ ಕೋರ್ಸ್ ಅನ್ನು ಆರಂಭಿಸಲಿದೆ.
ವೈದ್ಯರಿಗೆ ವಿಶೇಷ ತರಬೇತಿ:
ಸಾರ್ವಜನಿಕರು ನೇರವಾಗಿ ಸಂಪರ್ಕಿಸುವ ತಾಲೂಕು ಮತ್ತು ಜಿಲ್ಲಾ ಮಟ್ಟದ ಸರ್ಕಾರಿ ವೈದ್ಯಕೀಯ ಅಧಿಕಾರಿಗಳಿಗೆ (Medical Officers) ಸರ್ಟಿಫೈಡ್ ತರಬೇತಿ ಮಾಡ್ಯೂಲ್ ಜಾರಿಗೊಳಿಸುವುದು.
ರೂಪರೇಷೆ ಸಿದ್ಧಪಡಿಸಲು ಸಮಿತಿ ರಚನೆ:
ಈ ನೂತನ ಪಠ್ಯಕ್ರಮ ಮತ್ತು ಚೌಕಟ್ಟನ್ನು ವಿನ್ಯಾಸಗೊಳಿಸಲು ಶೀಘ್ರದಲ್ಲೇ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಶೀಘ್ರದಲ್ಲೇ ಅಧಿಕೃತ ಮಾರ್ಗಸೂಚಿಗಳು ಹೊರಬೀಳಲಿವೆ.
ಏಕೆ ಈ ನಿರ್ಧಾರ ಪ್ರಮುಖವಾದದ್ದು?
ಕಳೆದ ವಾರವಷ್ಟೇ ರಾಜ್ಯ ಸರ್ಕಾರವು ‘ಗೃಹ ಆರೋಗ್ಯ’ ಯೋಜನೆಯಡಿ ಮಹಿಳೆಯರನ್ನು ಮೆನೋಪಾಸ್ ತಪಾಸಣೆಗೆ ಒಳಪಡಿಸಲು ಒಪ್ಪಿಗೆ ನೀಡಿತ್ತು. ಆದರೆ, ಕೇವಲ ರೋಗಲಕ್ಷಣಗಳನ್ನು ಗುರುತಿಸುವುದಷ್ಟೇ ಸಾಲದು, ಅವರಿಗೆ ಸೂಕ್ತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ನೀಡಲು ಪರಿಣಿತ ವೈದ್ಯರ ತರಬೇತಿ ಅತ್ಯಗತ್ಯ. ಈ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ತರಬೇತಿ ನೀಡುವುದು ಯೋಜನೆಯ ಪೂರ್ಣಫಲ ನೀಡಲಿದೆ. ಇದಲ್ಲದೆ, ಭಾರತದಲ್ಲಿ ಪ್ರಸ್ತುತ ಅಧಿಕೃತ ಮೆನೋಪಾಸ್ ತಜ್ಞರಿಲ್ಲದಿರುವುದರಿಂದ, ಈ ಕೋರ್ಸ್ ಮುಗಿಸಿದ ವೈದ್ಯರಿಗೆ ತಾಲೂಕು, ಜಿಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಖಾಸಗಿ ವಲಯದಲ್ಲಿ ಬೃಹತ್ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ರಮ್ಯಾ ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಉಪಸ್ಥಿತರಿದ್ದ ಪ್ರಮುಖರು:
ಕರ್ನಾಟಕ ಅಲೈಡ್ ಮತ್ತು ಹೆಲ್ತ್‌ಕೇರ್ ಪ್ರೊಫೆಷನಲ್ಸ್ ಚೇರ್ಮನ್ ಹಾಗೂ RGUHS ಸಿಂಡಿಕೇಟ್ ಸದಸ್ಯ ಯು.ಟಿ. ಇಫ್ತಿ, ಮೆನೋಪಾಸ್ ಮತ್ತು ಮಹಿಳಾ ಆರೋಗ್ಯ ತಜ್ಞೆ ಡಾ. ಜ್ಯೋತ್ಸ್ನಾ ಮಿರ್ಲೆ ಹಾಗೂ ಡಾ. ವಿಕ್ರಮ್ ಅವರು ಈ ನಿಯೋಗದಲ್ಲಿದ್ದರು.
- Dr Jyotsna Mirlay
- Dr Sharanaprakash Patil
- Gruha Arogya Menopause Screening
- Karnataka Medical Education Reform
- Medical Officer Training Menopause
- Menopause Fellowship Program India
- Menopause Medical Education India
- Nursing Curriculum Menopause
- Perimenopause MBBS Syllabus
- RGUHS Menopause Course
- ಆರ್ಜಿಯುಹೆಚ್ಎಸ್
- ಎಂ ಬಿ ಬಿ ಎಸ್ ಪಠ್ಯಕ್ರಮ
- ಗೃಹ ಆರೋಗ್ಯ ಯೋಜನೆ
- ಡಾ ಜ್ಯೋತ್ಸ್ನಾ ಮಿರ್ಲೆ
- ಡಾ ಶರಣಪ್ರಕಾಶ್ ಪಾಟೀಲ್
- ನರ್ಸಿಂಗ್ ಶಿಕ್ಷಣ
- ಮಹಿಳೆಯರ ಆರೋಗ್ಯ ನೀತಿ
- ಮೆನೋಪಾಸ್ ಪಠ್ಯಕ್ರಮ
- ಮೆನೋಪಾಸ್ ಫೆಲೋಷಿಪ್
- ಯುಟಿ ಇಫ್ತಿ
- ವೈದ್ಯಕೀಯ ಶಿಕ್ಷಣ ಕರ್ನಾಟಕ





Leave a comment