ಪ್ರಯಾಗ್‌ರಾಜ್: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಪ್ರಶ್ನೆಪತ್ರಿಕೆ ಸೋರಿಕೆ (ಪೇಪರ್ ಲೀಕ್) ಹಾಗೂ ವಿಳಂಬವಾಗುತ್ತಿರುವ ಸರ್ಕಾರಿ ನೇಮಕಾತಿ ಪ್ರಕ್ರಿಯೆಗಳನ್ನು ಖಂಡಿಸಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬೃಹತ್ ವಿದ್ಯಾರ್ಥಿ ಸಂವಾದ ಕಾರ್ಯಕ್ರಮ ‘ಛಾತ್ರೋನ್ ಕಿ ಗೂಂಜ್’ ನಡೆಸಿದರು.
ಕೆಪಿ ಗ್ರೌಂಡ್‌ನಲ್ಲಿ ನಡೆದ ಈ ಸಮಾವೇಶಕ್ಕೂ ಮುನ್ನ ಸುರಿದ ಭಾರಿ ಮಳೆಯಿಂದಾಗಿ ಮೈದಾನ ಜಲಾವೃತಗೊಂಡಿತ್ತಾದರೂ, ಜೆಸಿಬಿ ಹಾಗೂ ರೋಲರ್‌ಗಳ ಸಹಾಯದಿಂದ ಮೈದಾನವನ್ನು ಸರಿಪಡಿಸಿ ಕಾರ್ಯಕ್ರಮ ಆಯೋಜಿಸಲಾಯಿತು.
ಸಿಸ್ಟಮ್ ವಿರುದ್ಧ ರಾಹುಲ್ ವಾಗ್ದಾಳಿ:
ಕಾರ್ಯಕ್ರಮಕ್ಕೂ ಮುನ್ನ ಸಾಮಾಜಿಕ ಜಾಲತಾಣ ‘X’ನಲ್ಲಿ ಬರೆದುಕೊಂಡಿದ್ದ ರಾಹುಲ್ ಗಾಂಧಿ, “ದೇಶದ ಯುವಕರ ಕಠಿಣ ಪರಿಶ್ರಮದಲ್ಲಿ ಯಾವುದೇ ಕೊರತೆಯಿಲ್ಲ. ಆದರೆ ಪ್ರಸ್ತುತ ಇರುವ ಭ್ರಷ್ಟ ವ್ಯವಸ್ಥೆಯು ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುತ್ತಿಲ್ಲ. ಪೇಪರ್ ಲೀಕ್, ತಡೆಹಿಡಿಯಲಾದ ನೇಮಕಾತಿಗಳು ಹಾಗೂ ವರ್ಷಗಟ್ಟಲೆ ಕಾಯುವಿಕೆಯಿಂದಾಗಿ ಯುವಜನರ ಭವಿಷ್ಯ ಕತ್ತಲಿಗೆ ತಳ್ಳಲ್ಪಟ್ಟಿದೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಪೋಸ್ಟರ್ ಯುದ್ಧ:
ಕಾರ್ಯಕ್ರಮ ನಡೆದ ಮೈದಾನದ ಸುತ್ತಲೂ ರಾಹುಲ್ ಗಾಂಧಿಯವರನ್ನು ‘ಜನ್ ನಾಯಕ್’ ಎಂದು ಬಣ್ಣಿಸುವ ಪೋಸ್ಟರ್‌ಗಳು ರಾರಾಜಿಸಿದವು. “ನಮಗೆ ಉದ್ಯೋಗ ಬೇಕು, ಪೆಲೆಟ್ ಗನ್ ಅಲ್ಲ”, “ಮಂತ್ರಿಗೆ ದೊಡ್ಡ ಕಾರು, ದೇಶದ ಯುವಕ ನಿರುದ್ಯೋಗಿ” ಎಂಬ ಘೋಷಣೆಗಳು ಪೋಸ್ಟರ್‌ಗಳಲ್ಲಿದ್ದವು. ಇದೇ ವೇಳೆ ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಉಲ್ಲೇಖಿಸಿ, ರಾಹುಲ್ ಗಾಂಧಿಯವರನ್ನು ಪ್ರಶ್ನಿಸುವ ವಿರೋಧಿ ಪೋಸ್ಟರ್‌ಗಳೂ ಕೂಡ ಸ್ಥಳದಲ್ಲಿ ಪ್ರತ್ಯಕ್ಷವಾಗಿದ್ದವು.
ಪೊಲೀಸ್ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಷರತ್ತುಗಳೊಂದಿಗೆ ಈ ಸಂವಾದ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದು, ದೇಶಾದ್ಯಂತ 250ಕ್ಕೂ ಹೆಚ್ಚು ನಗರಗಳಲ್ಲಿ ಈ ಕಾರ್ಯಕ್ರಮವನ್ನು ಲೈವ್ ಸ್ಟ್ರೀಮಿಂಗ್ ಮೂಲಕ ಪ್ರಸಾರ ಮಾಡಲಾಯಿತು.





Leave a comment