ಮುಧೋಳ: ನಾವು ಯಾವುದೇ ರೀತಿಯ ಮದ್ಯದ ದರ ಹೆಚ್ಚಳ ಮಾಡುವುದಿಲ್ಲ. ಕೇವಲ ಬಿಯರ್ ಬೆಲೆ ಏರಿಕೆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಸ್ಪಷ್ಟನೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಯರ್ ನಲ್ಲಿ 25 ಶೇ. ರಷ್ಟು ಹಾಗೂ ಅದಕ್ಕಿಂತ ಹೆಚ್ಚಿನ ಸಕ್ಕರೆ ಅಂಶವಿದ್ದರೆ ಅದು ಹಾನಿಕಾರಕ. ಈ ಹಿನ್ನೆಲೆ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ದರ ಹೆಚ್ಚಳದ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.
ಅನ್ಯ ರಾಜ್ಯದಲ್ಲಿ ಬಿಯರ್ ದರದ ಬಗ್ಗೆ ಮಾಹಿತಿ ಪಡೆದು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತೇವೆ. ನಾವು ಕೇವಲ ದರ ಏರಿಕೆಯನ್ನಷ್ಟೇ ಮಾಡಿಲ್ಲ, ಪ್ರೀಮಿಯಂ ಬಿಯರ್ ದರವನ್ನು ಕಡಿಮೆ ಮಾಡಿದ್ದೇವೆ. ಇದರ ಬಗ್ಗೆ ಯಾರು ಮಾತನಾಡುವುದಿಲ್ಲ ಎಂದರು.