ಮಂಡ್ಯ: ಅಣೆಕಟ್ಟು ನಿರ್ಮಾಣದ ಬಳಿಕ ಇದೇ ಮೊದಲ ಬಾರಿಗೆ ಕೃಷ್ಣರಾಜ ಸಾಗರ (ಕೆಆರ್ಎಸ್) ಹೊಸ ದಾಖಲೆ ಬರೆದಿದ್ದು ಇದು ರೈತರಿಗೆ ಸಂತಸ ತಂದಿದೆ.
ಇದೇ ಮೊದಲ ಬಾರಿಗೆ ಕೆಆರ್ಎಸ್ ಡ್ಯಾಮ್ ಸುದೀರ್ಘ 156 ದಿನಗಳ ಕಾಲ ಗರಿಷ್ಠ ನೀರಿನ ಮಟ್ಟ ಅಂದರೆ 124 ಅಡಿ ನೀರು ಕಾಯ್ದುಕೊಂಡಿದೆ. ಈ ಅಣೆಕಟ್ಟಿನ ಇತಿಹಾಸದಲ್ಲೇ ಇಷ್ಟೊಂದು ದಿನಗಳ ಕಾಲ ಈ ಪ್ರಮಾಣದಲ್ಲಿ ನೀರು ಕಾಯ್ದುಕೊಂಡಿರುವ ದಾಖಲೆ ಇಲ್ಲ. ಆದರೆ ಈ ಸಲ ನೀರು ಕಾಯ್ದುಕೊಂಡಿರುವುದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಡ್ಯಾಮ್ ನಿರ್ಮಾಣದ ನಂತರ ಅಂದರೆ 92 ವರ್ಷಗಳ ಬಳಿಕ ಸುದೀರ್ಘ 156 ದಿನಗಳ ಕಾಲ 124 ಅಡಿ ನೀರು ಶೇಖರಿಸಿ ಇಟ್ಟುಕೊಂಡಿದೆ.
ತಿಂಗಳಲ್ಲೂ 124 ಅಡಿ ನೀರು ಸಂಗ್ರಹಣೆ ಹಾಗೆ ಇದ್ದು, 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 124.30 ಅಡಿ ಭರ್ತಿಯಾಗಿದೆ. 49.452 ಟಿಎಂಸಿ ಗರಿಷ್ಠ ಸಾಂದ್ರತೆ ಸದ್ಯ 48.754 ಟಿಎಂಸಿ ನೀರು ಇದೆ. ಈ ಬಾರಿನೂ ಬೇಸಿಗೆ ಬೆಳೆಗಳಿಗೆ ಯಾವುದೇ ಆತಂಕವಿಲ್ಲ. ಪೂರ್ಣ ಪ್ರಮಾಣದಲ್ಲಿ ನೀರು ಬಿಡುವುದು ನಿಶ್ಚಯವಾದ್ದರಿಂದ ಅನ್ನದಾತರು ಆನಂದಪಟ್ಟಿದ್ದಾರೆ.
ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರಿಯಾಗಿ ಮಳೆ ಬರಲ್ಲ ಅನ್ನೋರಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಕೆಆರ್ಎಸ್ ಡ್ಯಾಂ ನಿರ್ಮಾಣದಿಂದ ಇಷ್ಟು ವರ್ಷದಲ್ಲಿ ಆಗಲಾರದ್ದು ಈ ವರ್ಷ ಆಗಿದೆ. ಸತತ 156 ದಿನ ಯಾವ ವರ್ಷವೂ ಗರಿಷ್ಠ ಮಟ್ಟ ನೀರು ಇರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಇಷ್ಟು ದಿನ ಡ್ಯಾಂ ಗರಿಷ್ಠ ಮಟ್ಟದಲ್ಲಿ ನೀರು ಕಾಯ್ದುಕೊಂಡಿದೆ. ನಿಮ್ಮೆಲ್ಲರ ಟೀಕೆಗಳಿಗೆ ಕೆಆರ್ಎಸ್ ನೀರು ಸಂಗ್ರಹವೇ ಉತ್ತರ ಎಂದು ಸಚಿವ ಚಲುವರಾಯಸ್ವಾಮಿ ಅವರು ಟಾಂಗ್ ಕೊಟ್ಟಿದ್ದಾರೆ.