Home ಕ್ರೈಂ ನ್ಯೂಸ್ ಸನಾತನ ಧರ್ಮ ಸಾಂಕ್ರಾಮಿಕ ರೋಗ, ಶಶಿಕಲಾ, ತ್ರಿಶಾ, ಸಿಎಂ ವಿಜಯ್, “ಆ ನೀರು” ಬರಬೇಕು: ಸತತ ವಿವಾದಗಳ “ಉದಯ”ನಿಧಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಸನಾತನ ಧರ್ಮ ಸಾಂಕ್ರಾಮಿಕ ರೋಗ, ಶಶಿಕಲಾ, ತ್ರಿಶಾ, ಸಿಎಂ ವಿಜಯ್, “ಆ ನೀರು” ಬರಬೇಕು: ಸತತ ವಿವಾದಗಳ “ಉದಯ”ನಿಧಿ!

Share
ವಿವಾದ
Share

ಚೆನ್ನೈ: ತಮಿಳುನಾಡಿನ ಪ್ರತಿಪಕ್ಷ ನಾಯಕ ಹಾಗೂ ಡಿಎಂಕೆ (DMK) ಯುವ ಘಟಕದ ಪ್ರಮುಖ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಚೆನ್ನೈನ ಅವರ ನಿವಾಸದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಂಜಾವೂರಿನಲ್ಲಿ ನಡೆದ ಕಾವೇರಿ ನೀರು ವಿವಾದದ ಪ್ರತಿಭಟನಾ ಸಭೆಯಲ್ಲಿ ನಟಿ ತೃಷಾ ಕೃಷ್ಣನ್ ಅವರನ್ನು ಉದ್ದೇಶಿಸಿ ದ್ವಂದ್ವಾರ್ಥ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಏನಿದು ವಿವಾದ?

ತಂಜಾವೂರಿನಲ್ಲಿ ನಡೆದ ಕಾವೇರಿ ಹೋರಾಟದ ವೇಳೆ ಮುಖ್ಯಮಂತ್ರಿ ವಿಜಯ್ ಹಾಗೂ ಅವರ ಸರ್ಕಾರದ ವಿರುದ್ಧ ಉದಯನಿಧಿ ಸ್ಟಾಲಿನ್ ವಾಗ್ದಾಳಿ ನಡೆಸುತ್ತಿದ್ದರು. ಈ ವೇಳೆ ಸಭೆಯಲ್ಲಿದ್ದ ಕೆಲವರು ನಟಿ “ತ್ರಿಶಾ.. ತ್ರಿಶಾ” ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು. ಇದಕ್ಕೆ ಸ್ಪಂದಿಸಿದ ಉದಯನಿಧಿ, “ನೀರು ಬರುತ್ತೋ ಇಲ್ಲವೋ, ಆ ನೀರು ಬರಬೇಕು” ಎಂದು ನಗುತ್ತಾ ದ್ವಂದ್ವಾರ್ಥದಲ್ಲಿ ಹೇಳಿಕೆ ನೀಡಿ, ಬಳಿಕ “ನಾನು ಕಾವೇರಿ ನೀರಿನ ಬಗ್ಗೆ ಹೇಳಿದೆ” ಎಂದು ಸ್ಪಷ್ಟನೆ ನೀಡಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆಡಳಿತಾರೂಢ ಟಿವಿ ಕೆ (TVK) ಪಕ್ಷ ಹಾಗೂ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಉದಯನಿಧಿ ಅವರ ಮಾತುಗಳು ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಿವೆ ಎಂದು ಆರೋಪಿಸಿ ಟಿವಿ ಕೆ ನಾಯಕರು ಪೊಲೀಸರಿಗೆ ದೂರು ನೀಡಿದ್ದರು.

ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲು

ಟಿವಿ ಕೆ ನೀಡಿ ದೂರಿನನ್ವಯ ಪೊಲೀಸರು ಉದಯನಿಧಿ ಸ್ಟಾಲಿನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆ ಹಾಗೂ ಐಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ. ಬಂಧನದ ಬಳಿಕ ಮಾತನಾಡಿದ ಉದಯನಿಧಿ, “ನಾನು ಯಾವುದೇ ತಪ್ಪು ಮಾಡಿಲ್ಲ. ವಿಜಯ್ ಅವರನ್ನಷ್ಟೇ ಟೀಕಿಸಿದ್ದೇನೆ. ಈ ಪ್ರಕರಣವನ್ನು ನ್ಯಾಯಾಲಯದಲ್ಲಿ ಕಾನೂನುಬದ್ಧವಾಗಿ ಎದುರಿಸುತ್ತೇನೆ” ಎಂದಿದ್ದಾರೆ.

ಸತತ ವಿವಾದಗಳಲ್ಲಿ “ಉದಯ”ನಿಧಿ!

ಉದಯನಿಧಿ ಸ್ಟಾಲಿನ್ ಅವರ ರಾಜಕೀಯ ಜೀವನದಲ್ಲಿ ಹೇಳಿಕೆಗಳಿಂದ ವಿವಾದ ಸೃಷ್ಟಿಯಾಗುತ್ತಿರುವುದು ಇದೇ ಮೊದಲಲ್ಲ.

2021ರ ಶಶಿಕಲಾ ಹೇಳಿಕೆ: ಚುನಾವಣಾ ಪ್ರಚಾರದ ವೇಳೆ ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರು ವಿ.ಕೆ. ಶಶಿಕಲಾ ಕಾಲಿಗೆ ಬಿದ್ದಿದ್ದರು ಎಂಬ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು.

ಸನಾತನ ಧರ್ಮ ವಿವಾದ (2023): ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿ, ಅದನ್ನು ನಿರ್ಮೂಲನೆ ಮಾಡಬೇಕು ಎಂದಿದ್ದ ಹೇಳಿಕೆ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.

ಸಿಎಂ ವೈಯಕ್ತಿಕ ಜೀವನದ ಮೇಲಿನ ವಾಗ್ದಾಳಿ: ಸಿಎಂ ವಿಜಯ್ ಅವರ ವೈಯಕ್ತಿಕ ಜೀವನ ಹಾಗೂ ಕುಟುಂಬದ ವಿಚಾರಗಳನ್ನು ರಾಜಕೀಯಕ್ಕೆ ಎಳೆತಂದ ಆರೋಪವೂ ಇವರ ಮೇಲಿದೆ.

ಇದೀಗ ನಟಿ ತೃಷಾ ಕುರಿತ ಹೇಳಿಕೆ ಉದಯನಿಧಿ ಅವರ ರಾಜಕೀಯ ಜೀವನಕ್ಕೆ ಮತ್ತೊಂದು ಸವಾಲಾಗಿ ಪರಿಣಮಿಸಿದ್ದು, ತಮಿಳುನಾಡು ರಾಜಕಾರಣದಲ್ಲಿ ತೀವ್ರ ಗೊಂದಲ ಮತ್ತು ಪ್ರತಿಭಟನೆಗಳಿಗೆ ಕಾರಣವಾಗಿದೆ.

Share

Leave a comment

Leave a Reply

Your email address will not be published. Required fields are marked *