Home ದಾವಣಗೆರೆ ಕೈಯಲ್ಲಿ ಮೆಹೆಂದಿ ರಂಗು ಮಾಸುವ ಮುನ್ನವೇ ನವದಂಪತಿ ಜೀವನದಲ್ಲಿ ವಿಧಿಯ ಕ್ರೂರ ಆಟ: ಒಂದು ಹೆಲ್ಮೆಟ್ ಧರಿಸಿದ್ದರೆ ಉಳಿಯುತ್ತಿತ್ತು ಜೀವ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಕೈಯಲ್ಲಿ ಮೆಹೆಂದಿ ರಂಗು ಮಾಸುವ ಮುನ್ನವೇ ನವದಂಪತಿ ಜೀವನದಲ್ಲಿ ವಿಧಿಯ ಕ್ರೂರ ಆಟ: ಒಂದು ಹೆಲ್ಮೆಟ್ ಧರಿಸಿದ್ದರೆ ಉಳಿಯುತ್ತಿತ್ತು ಜೀವ!

Share
ನವದಂಪತಿ
Share

ಮೈಸೂರು: ಹದಿನೈದು ದಿನಗಳ ಹಿಂದೆಯಷ್ಟೇ ಹೊಸ ಜೀವನದ ನೂರಾರು ಕನಸುಗಳನ್ನು ಹೊತ್ತು ಹಸೆಮಣೆ ಏರಿದ್ದ ನವದಂಪತಿಗಳ ಬಾಳಲ್ಲಿ ವಿಧಿ ಹೆಣೆದಿದ್ದ ಆಟವೇ ಬೇರೆಯಾಗಿತ್ತು. ಮದುವೆಯಾಗಿ ಕೇವಲ 15 ದಿನ ಕಳೆಯುವಷ್ಟರಲ್ಲೇ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ನವವಧುವಿನ ಜೀವವನ್ನು ಬಲಿಪಡೆದಿದೆ. ಮೈಸೂರಿನ ಆರ್.ಟಿ.ನಗರದ ಸಮೀಪ ಈ ಧಾರುಣ ಘಟನೆ ನಡೆದಿದೆ.

ನಡೆದಿದ್ದೇನು?

ಮೈಸೂರು ತಾಲೂಕಿನ ಮಾಕನಹುಂಡಿ ಗ್ರಾಮದ ನಿವಾಸಿಯಾಗಿದ್ದ 20 ವರ್ಷದ ಮೇಘನಾ ಎಂಬಾಕೆಯನ್ನು, ಬಿದರಗೂಡು ಗ್ರಾಮದ ಪುನೀತ್ ಎಂಬುವವರಿಗೆ ಕೊಟ್ಟು ಕೇವಲ 15 ದಿನಗಳ ಹಿಂದಷ್ಟೇ ಸಡಗರದಿಂದ ವಿವಾಹ ಮಾಡಲಾಗಿತ್ತು. ಹೊಸ ಸಂಸಾರದ ನೂತನ ಕನಸುಗಳೊಂದಿಗೆ ಈ ದಂಪತಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ವಿಧಿಯ ರೂಪದಲ್ಲಿ ಬಂದ ಯಮ ಇವರ ಪಾಲಿಗೆ ಕಂಟಕನಾಗಿದ್ದಾನೆ.

ದಂಪತಿ ಪ್ರಯಾಣಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ದಿಢೀರ್ ಸ್ಕಿಡ್ ಆಗಿದೆ. ಬೈಕ್‌ನಿಂದ ಕೆಳಗೆ ಬಿದ್ದ ತೀವ್ರತೆಗೆ ಹಿಂಬದಿಯಲ್ಲಿ ಕುಳಿತಿದ್ದ ಮೇಘನಾ ಅವರ ತಲೆ ನೇರವಾಗಿ ರಸ್ತೆಗೆ ಅಪ್ಪಳಿಸಿದೆ. ದುರದೃಷ್ಟವಶಾತ್ ಅಪಘಾತದ ವೇಳೆ ಮೇಘನಾ ಅವರು ಹೆಲ್ಮೆಟ್ ಧರಿಸಿರಲಿಲ್ಲ. ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮೇಘನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಪತಿ ಪುನೀತ್ ಅವರಿಗೂ ತಲೆ, ಕೈ ಹಾಗೂ ಕಾಲುಗಳ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ:

ಹದಿನೈದು ದಿನಗಳ ಹಿಂದಷ್ಟೇ ಮಗಳ ಮದುವೆ ಮಾಡಿ ಸಡಗರಪಟ್ಟಿದ್ದ ಹೆತ್ತ ಕರಳು ಇವತ್ತು ಮಗಳ ಶವ ನೋಡಿ ಕಣ್ಣೀರಿನ ಕಡಲಲ್ಲಿ ಮುಳುಗಿದೆ. ಅತ್ತ ಪತಿಯ ಮನೆಯವರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಈ ದುರಂತಕ್ಕೆ ಕಣ್ಣೀರು ಹಾಕುತ್ತಿದೆ.

ಒಂದು ಹೆಲ್ಮೆಟ್ ಧರಿಸಿದ್ದರೆ ಉಳಿಯುತ್ತಿತ್ತು ಜೀವ!

ಈ ಭೀಕರ ದುರಂತಕ್ಕೆ ಹಿಂಬದಿ ಸವಾರರು ಹೆಲ್ಮೆಟ್ ಧರಿಸದೇ ಇದ್ದಿದ್ದೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಬೈಕ್ ಸ್ಕಿಡ್ ಆದಾಗ ಒಂದು ವೇಳೆ ಮೇಘನಾ ಅವರು ಹೆಲ್ಮೆಟ್ ಧರಿಸಿದ್ದರೆ, ಖಂಡಿತವಾಗಿಯೂ ತಲೆಗೆ ಇಷ್ಟು ಬಲವಾದ ಪೆಟ್ಟು ಬೀಳುತ್ತಿರಲಿಲ್ಲ ಮತ್ತು ಒಂದು ಅಮೂಲ್ಯ ಜೀವ ಉಳಿಯುತ್ತಿತ್ತು.

‘5 ನಿಮಿಷದ ಜರ್ನಿ ತಾನೇ’ ಎಂದು ಉದಾಸೀನ ಮಾಡಬೇಡಿ!

ವಾಹನ ಸವರರೇ ನೆನಪಿರಲಿ, ಪ್ರಾಣ ಅನ್ನೋದು ತುಂಬಾ ಅಮೂಲ್ಯವಾದದ್ದು. “ನಮ್ಮ ಮನೆ ಪಕ್ಕದಲ್ಲೇ ಇದೆ, ಜಸ್ಟ್ 5 ನಿಮಿಷದ ಜರ್ನಿ ಅಷ್ಟೇ, ಹೆಲ್ಮೆಟ್ ಯಾಕೆ ಬೇಕು?” ಎಂದು ಎಂದಿಗೂ ಉದಾಸೀನ ಮಾಡಬೇಡಿ. ನಿಮ್ಮ ಮನೆ ರಸ್ತೆಯ ಪಕ್ಕದಲ್ಲೇ ಇರಲಿ ಅಥವಾ ದೂರವಿರಲಿ, ದ್ವಿಚಕ್ರ ವಾಹನ ಹತ್ತುವ ಮುನ್ನ ಸವಾರರು ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಿಕೊಳ್ಳಿ. ನಿಮ್ಮನ್ನು ನಂಬಿ ಮನೆಯಲ್ಲಿ ಒಂದು ಕುಟುಂಬ ಕಾಯುತ್ತಿರುತ್ತದೆ ಎಂಬುದನ್ನು ಮರೆಯಬೇಡಿ.

ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಈ ಸುದ್ದಿಯನ್ನು ಗರಿಷ್ಠ ಮಟ್ಟದಲ್ಲಿ ಶೇರ್ ಮಾಡಿ ಮತ್ತೊಂದು ಜೀವ ಉಳಿಸಲು ನೆರವಾಗಿ.

Share

Leave a comment

Leave a Reply

Your email address will not be published. Required fields are marked *