ದಾವಣಗೆರೆ: ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳ ದಿಢೀರ್ ಬದಲಾವಣೆ ಪ್ರಕ್ರಿಯೆ ದಾವಣಗೆರೆ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಅಸಮಾಧಾನದ ಜ್ವಾಲೆಗೆ ಕಾರಣವಾಗಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಡಾ. ಜಿ. ಎಮ್. ಸಿದ್ದೇಶ್ವರ ತೀವ್ರವಾಗಿ ಗುಡುಗಿದ್ದು, “ಅವರಿಗೆ ಹಾರ್ಟ್ (ಹೃದಯ) ಇಲ್ಲ ಅನಿಸುತ್ತದೆ. ಎಲ್ಲವನ್ನೂ ತಿಳಿದು ಯೋಚನೆ ಮಾಡಿ ಮಾತನಾಡಬೇಕು,” ಎಂದು ಆಕ್ರೋಶ ಹೊರಹಾಕಿದ್ದಾರೆ.
ನಗರದ ಜಿಎಂಐಟಿ (GMIT) ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದೊಳಗಿನ ಆಂತರಿಕ ಬೇಗುದಿಯನ್ನು ಬಹಿರಂಗವಾಗಿಯೇ ಪ್ರಸ್ತಾಪಿಸಿದರು.
ರಾಜ್ಯಾಧ್ಯಕ್ಷರ ಸಹಿ ಇದೆ, ನಾವಂತೂ ಕೇಳುತ್ತೇವೆ!
“ಈ ಹೊಸ ಪದಾಧಿಕಾರಿಗಳ ನೇಮಕ ಮಾಡಿರುವುದು ಸ್ವತಃ ರಾಜ್ಯಾಧ್ಯಕ್ಷರೇ. ಪಟ್ಟಿಗೆ ಬಿ. ವೈ. ವಿಜಯೇಂದ್ರ ಅವರೇ ಸಹಿ ಹಾಕಿದ್ದಾರೆ. ಈ ಬಗ್ಗೆ ನಮ್ಮಲ್ಲಿ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲೇ ಈ ವಿಷಯವನ್ನು ವಿಜಯೇಂದ್ರ ಅವರ ಗಮನಕ್ಕೆ ತರುತ್ತೇವೆ. ಅವರು ಸರಿಪಡಿಸಿದರೆ ಒಳ್ಳೆಯದು, ಇಲ್ಲದಿದ್ದರೆ ಮುಂದೆ ಏನು ಮಾಡಬೇಕು ಎಂದು ನೋಡೋಣ. ಕೇವಲ ಮೂರು ತಿಂಗಳಿಗೆ ಪ್ರಧಾನ ಕಾರ್ಯದರ್ಶಿಗಳನ್ನು ಬದಲಾಯಿಸಿದರೆ ಸಾಮಾನ್ಯ ಕಾರ್ಯಕರ್ತರಿಗೆ ನಾವು ಏನೆಂದು ಉತ್ತರ ನೀಡಬೇಕು?” ಎಂದು ಪ್ರಶ್ನಿಸಿದರು.
ಅವರ ಪ್ರಕಾರ ನಾನು ಹಿರಿಯ ನಾಯಕನಲ್ಲ!
ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ ಸಿದ್ದೇಶ್ವರ, “ರಾಜ್ಯಾಧ್ಯಕ್ಷರ ದೃಷ್ಟಿಯಲ್ಲಿ ನಾನು ಹಿರಿಯ ನಾಯಕನೇ ಅಲ್ಲ ಅನಿಸುತ್ತದೆ. ಹಾಗಾಗಿ ಅವರೇ ಒಮ್ಮೆ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕು. ಅವರಿಗೆ ಮನಸ್ಸು ಎಂಬುದೇ ಇಲ್ಲ ಅನಿಸುತ್ತದೆ. ಎಲ್ಲವನ್ನೂ ಯೋಚಿಸಿ ತೀರ್ಮಾನ ಕೈಗೊಳ್ಳಲಿ. ಈ ಬಗ್ಗೆ ನಾವೇ ನೇರವಾಗಿ ರಾಜ್ಯಾಧ್ಯಕ್ಷರನ್ನು ಕೇಳುತ್ತೇವೆ,” ಎಂದರು.
ಫೋನ್ ಮಾಡಿಯೂ ಮಾತನಾಡಲಿಲ್ಲ:
“ಪದಾಧಿಕಾರಿಗಳನ್ನು ಬದಲಾವಣೆ ಮಾಡುವ ಮುನ್ನ ಕನಿಷ್ಠ ಪಕ್ಷ ನಮಗೆ ಒಂದು ಫೋನ್ ಮಾಡಿ ಕೇಳಬಹುದಿತ್ತು. ಈ ಕುರಿತು ಮಾತನಾಡಲು ನಾನು ಮೇಘರಾಜ್ ಅವರಿಗೆ ಫೋನ್ ಮಾಡಿದ್ದೆ. ರಾಜ್ಯಾಧ್ಯಕ್ಷರು ಮತ್ತೆ ಕರೆ ಮಾಡುತ್ತಾರೆ ಎಂದಿದ್ದರು, ಆದರೆ ಅವರ ಕಡೆಯಿಂದ ಯಾವುದೇ ಕರೆ ಬರಲಿಲ್ಲ. ಇನ್ನು, ರಾಜಶೇಖರ್ ಅವರನ್ನು ತೆಗೆಯಿರಿ ಎಂದು ನಾವು ಹೇಳಿರಲಿಲ್ಲ. ಮೊದಲು ಹೇಳಿದಾಗ ತೆಗೆಯುವುದಿಲ್ಲ ಎಂದು ಸರಿಪಡಿಸಿದ್ದರು. ಈಗ ಯಾರ ಮಾತು ಕೇಳಿ ಈ ನಿರ್ಧಾರ ತಗೆದುಕೊಂಡಿದ್ದಾರೋ ಅವರೇ ಹೇಳಬೇಕು,” ಎಂದು ಸಿದ್ದೇಶ್ವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
- BY Vijayendra
- Davanagere BJP rift
- Davanagere BJP updates
- Davanagere Politics News
- GM Siddeshwara
- GM Siddeshwara press meet
- GM Siddeshwara vs BY Vijayendra
- Karnataka BJP internal fight
- ಕರ್ನಾಟಕ ಬಿಜೆಪಿ ಭಿನ್ನಮತ
- ಜಿ. ಎಂ. ಸಿದ್ದೇಶ್ವರ
- ದಾವಣಗೆರೆ ಬಿಜೆಪಿ ಅಸಮಾಧಾನ
- ದಾವಣಗೆರೆ ರಾಜಕೀಯ ಸುದ್ದಿ
- ಬಿ. ವೈ. ವಿಜಯೇಂದ್ರ
- ಬಿಜೆಪಿ ಜಿಲ್ಲಾ ಘಟಕ ಬದಲಾವಣೆ
- ಸಿದ್ದೇಶ್ವರ ಜಿಎಂಐಟಿ





Leave a comment