SUDDIKSHANA KANNADA NEWS
DAVANAGERE
DATE:25-03-2023
ದಾವಣಗೆರೆ: ಬೆಣ್ಣೆನಗರಿಯಲ್ಲಿ ಮೋದಿ ಮೇನಿಯಾ… ರಾಜ್ಯದ ಮೂಲೆ ಮೂಲೆಗಳಿಂದ ಹರಿದು ಬಂದ ಜನಸಾಗರ.. ಎತ್ತ ಕಣ್ಣಾಯಿಸಿದರೂ ಕೇಸರಿಮಯ… ರಾರಾಜಿಸಿದ ಕೇಸರಿ, ಬಿಜೆಪಿ ಬಾವುಟಗಳು… ಮೋದಿ ಗುಂಗಲ್ಲಿ ತೇಲಿದ ಬೆಣ್ಣೆನಗರಿ… ಎದೆ ಮೇಲೆ ಮೋದಿ ಹಚ್ಚೆ ಹಾಕಿಸಿಕೊಂಡ ಯುವಕ… ಮಜ್ಜಿಗೆಗೆ ಮುಗಿಬಿದ್ದ ಸಾವಿರಾರು ಜನರು.. ಬೆಳಿಗ್ಗೆ ಉಪ್ಪಿಟ್ಟು, ಕೇಸರಿ ಬಾತ್, ಮಧ್ಯಾಹ್ನ ಗೋಧಿ ಪಾಯಸ, ಪಲಾವ್, ಮೊಸರನ್ನ ಸವಿದ ಲಕ್ಷಾಂತರ ಮಂದಿ..
ಇದು ನಗರದ ಜಿಎಂಐಟಿಯ 400 ಎಕರೆ ಜಮೀನಿನಲ್ಲಿ ಏರ್ಪಡಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪದ ಮಹಾಸಂಗಮದಲ್ಲಿ ಕಂಡು ಬಂದ ಕೆಲ ಚಿತ್ರಣ. ಮುಂಬರುವ ವಿಧಾನಸಭಾ ಚುನಾವಣೆಗೆ ದಾವಣಗೆರೆಯಿಂದ ರಣಕಹಳೆ ಊದಿದ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ವಿಶ್ವ ಮೆಚ್ಚಿದ ನಾಯಕನನ್ನು ನೋಡಲು ಬಂದಿದ್ದ ಜನರತ್ತ ಕೈಬೀಸಿ ಮೋದಿ ಧನ್ಯವಾದ ಸಲ್ಲಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್ ಗೆ ಸೇನಾ ಹೆಲಿಕಾಪ್ಟರ್ ಮೂಲಕ ನರೇಂದ್ರ ಮೋದಿ ಅವರು ಆಗಮಿಸಿದರು. ಈ ವೇಳೆ ಬಿಜೆಪಿ ಮುಖಂಡರು ಸೇರಿದಂತೆ ನೂರು ಕಾರ್ಯಕರ್ತರು ಸ್ವಾಗತ ಕೋರಿದರು. ಅಲ್ಲಿಂದ ಮಹಾಸಂಗಮ ನಡೆಯುವ ಸ್ಥಳಕ್ಕೆ ಬಿಗಿ ಭದ್ರತೆಯಲ್ಲಿ ಕಾರಿನಿಂದ ತೆರಳಿದ ಮೋದಿ ಅವರು, ಪೆಂಡಾಲ್ ಹಾಕಿದ್ದ ಸ್ಥಳದಿಂದ ವಿಶೇಷ ವಾಹನದಲ್ಲಿ ವೇದಿಕೆಯವರೆಗೆ ಜನರಿಗೆ ಕೈ ಬೀಸುತ್ತಾ ಆಗಮಿಸಿದರು. ಈ ವೇಳೆ ಹೂವಿನಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ಮೋದಿ ಅವರಿಗೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದರು.
ಮೋದಿ ಮೇನಿಯಾ:
ದಾವಣಗೆರೆಯ ಪಿ. ಬಿ. ರಸ್ತೆಯಿಂದ ಸುಮಾರು ಆರೇಳು ಕಿಲೋಮೀಟರ್ ವರೆಗೆ ಬಿಜೆಪಿ ಬಾವುಟಗಳು, ಫ್ಲೆಕ್ಸ್, ಬಂಟಿಂಗ್ಸ್, ಕೇಸರಿ ಧ್ವಜಗಳನ್ನು ಕಟ್ಟಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿಯೂ ಬಾವುಟಗಳನ್ನು ಕಟ್ಟಲಾಗಿತ್ತು. ನರೇಂದ್ರ ಮೋದಿ
ಅವರ ಭಾವಚಿತ್ರಗಳು ಕಣ್ಣಿಗೆ ರಾಚುತ್ತಿದ್ದವು.
ಬಂದ್ರು ಲಕ್ಷಾಂತರ ಜನ್ರು:
ಕಾರು, ಲಾರಿ, ಬಸ್ ಗಳ ಮೂಲಕ ಲಕ್ಷಾಂತರ ಜನರು ಆಗಮಿಸಿದರು. ದಾವಣಗೆರೆ ಜಿಲ್ಲೆ ಸೇರಿದಂತೆ ಶಿವಮೊಗ್ಗ, ಹಾವೇರಿ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ವಿಜಯನಗರ, ಗದಗ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಿಂದ ಜನರು ಆಗಮಿಸಿದರು. ಬಿಜೆಪಿ ಮುಖಂಡರು, ಶಾಸಕರು ಬಸ್ ಗಳ ವ್ಯವಸ್ಥೆ ಮಾಡಿದ್ದು, ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಮಹಾಸಂಗಮಕ್ಕೆ ಬಂದರು. ಸಾವಿರಾರು ಬಸ್ ಗಳಲ್ಲಿ ಜನರು ಆಗಮಿಸಿದ್ದು, ಐದು ಸಾವಿರ ಬಸ್ ಗಳ ಮೂಲಕ ಕರೆತರಲಾಯಿತು.
ಅಚ್ಚುಕಟ್ಟು ವ್ವವಸ್ಥೆ:
ಜಿಎಂಐಟಿಯ ಸಮೀಪದಲ್ಲಿ ಏರ್ಪಡಿಸಿದ್ದ ಮಹಾಸಂಗಮಕ್ಕೆ ಲಕ್ಷಾಂತರ ಜನರು ಬಂದರೂ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಲಕ್ಷಾಂತರ ಮಂದಿಗೆ ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನದ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ
ನೇಮಕವಾಗಿದ್ದ ಕೇಸರಿ ಕಲಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದರು. ಮಜ್ಜಿಗೆ ಹಾಗೂ ಕುಡಿಯುವ ನೀರು ವಿತರಣೆಗೂ ಕ್ರಮ ಕೈಗೊಳ್ಳಲಾಗಿತ್ತು.
ಶ್ರೀರಾಮನ ಬೆಳ್ಳಿ ಇಟ್ಟಿಗೆ ಮೋದಿಗೆ:
ಇನ್ನು ಶ್ರೀರಾಮ ಭಾವಚಿತ್ರವಿರುವ ರಾಮಮಂದಿರ ನಿರ್ಮಾಣದ ಜೈ ಶ್ರೀರಾಮ್ ಎಂದು ಬರೆದಿದ್ದ 15 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆಯ ಮಾದರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ
ಯಶವಂತರಾವ್ ಜಾಧವ್ ರೂಪಿಸಿದ್ದರು. ಇದನ್ನು ಮೋದಿ ಅವರಿಗೆ ವೇದಿಕೆಯಲ್ಲಿ ನೀಡಲಾಯಿತು.
ಸ್ಪಷ್ಟ ಬಹುಮತ ಬರುತ್ತೆ:
ಜಿಎಂಐಟಿಯಲ್ಲಿ ಮಾಧ್ಯಮದರ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 140 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಆಶೀರ್ವಾದದಿಂದ ಇದು ಸಾಧ್ಯವಾಗಲಿದೆ. ಕೆಲವರು ನಾವೇ ಮುಖ್ಯಮಂತ್ರಿ ಆಗುತ್ತೇವೆ ಎಂಬ ಭ್ರಮೆಯಲಿದ್ದಾರೆ. ಇದು ತಿರುಕನ ಕನಸು. ಅದು ನನಸಾಗುವುದಿಲ್ಲ ಎಂದು ಭವಿಷ್ಯ ನುಡಿದರು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ರಾಜ್ಯದೆಲ್ಲೆಡೆ ಸಂಚರಿಸಿದೆ. ಎಲ್ಲೆಡೆ ಬಿಜೆಪಿ ಪರ ಅಲೆ ಕಂಡು ಬಂದಿದೆ. ಉತ್ಸಾಹವೂ ಹೆಚ್ಚಾಗಿದೆ. ದಾವಣಗೆರೆಯಲ್ಲಿ ಮಹಾಸಂಗಮಕ್ಕೆ ಸೇರಿರುವ ಜನಸ್ತೋಮವೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಈ ಬಾರಿ ರಾಜ್ಯದಲ್ಲಿ ಬಿಜೆಪಿ ಏನಾದರೂ ಅಧಿಕಾರಕ್ಕೆ ಬಂದರೆ ಅದು ನರೇಂದ್ರ ಮೋದಿಜಿ ಮತ್ತು ಅಮಿತ್ ಶಾ ಇವರ ಶ್ರಮದಿಂದಲೇ ಮಾತ್ರ ಸಾಧ್ಯ ನಮ್ಮ ರಾಜ್ಯದ ಬಿಜೆಪಿ ಸರ್ಕಾರ ಆಡಳಿತದಲ್ಲಿ ಬಿಗಿ ಇರುವುದಿಲ್ಲ ಇವರ ಅಧಿಕಾರ ಬುದ್ಧಿವಂತ ಮತದಾರರಿಗೆ ಬಹಳ ಬೇಸರ ತಂದಿದೆ ಯಾವುದೇ ಇಲಾಖೆಗೆ ಹೋದರು ಹಣವಿಲ್ಲದೆ ಕೆಲಸವಾಗುತ್ತಿಲ್ಲ ಎಲ್ಲಿ ನೋಡಿದರೂ ಲಂಚ ಇದಕ್ಕೆ ಕಾರಣ ರಾಜ್ಯದ ರಾಜಕಾರಣಿಗಳೇ ಹೊರತು ಬೇರೆ ಯಾರು ಅಲ್ಲ ಅಧಿಕಾರಿಗಳು ಹುದ್ದೆಗೆ ಬಂದು ಕೆಲಸ ಮಾಡಲು ಲಂಚ ಕೊಡಬೇಕು ಯಾವುದೇ ಕಾರ್ಯಕ್ರಮಗಳು ನಡೆದರು ಹಣವನ್ನು ಕೊಡಬೇಕು ಈಗಾದಾಗ ಅಧಿಕಾರಿಗಳು ಹಣವಿಲ್ಲದೆ ಯಾರಿಗೂ ಕೆಲಸ ಮಾಡಿ ಕೊಡುವುದಿಲ್ಲ. ಹೇಳುತ್ತಾ ಹೋದರೆ ತುಂಬಾ ಇದೆ ಇದು ನನ್ನ ಅಲ್ಪ ಅಭಿಪ್ರಾಯ.
It is perfect time to make a few plans for the future and it is time to be happy.
I have learn this publish and if I could I desire to suggest you few interesting things or advice.
Perhaps you could write subsequent articles regarding this article.
I wish to learn more issues about it!