Home ನದಿಯಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು: ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಹೈ ಅಲರ್ಟ್ ಎಚ್ಚರಿಕೆ!
Homeಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ನದಿಯಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು: ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಹೈ ಅಲರ್ಟ್ ಎಚ್ಚರಿಕೆ!

Share
ಸಿಲಿಂಡರ್‌
Share

ರಾಯಗಢ: ಮಹಾರಾಷ್ಟ್ರದಾದ್ಯಂತ ವಾರದಿಂದ ಸುರಿಯುತ್ತಿರುವ ಭೀಕರ ಮಳೆಗೆ ಇಡೀ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಾಯಗಢ ಜಿಲ್ಲೆಯಲ್ಲಿ ಶಾಕಿಂಗ್ ಘಟನೆಯೊಂದು ಜರುಗಿದೆ. ಭಾರಿ ಪ್ರವಾಹದ ಹಿನ್ನೆಲೆಯಲ್ಲಿ ಎಚ್‌ಪಿಸಿಎಲ್ (HPCL) ಗ್ಯಾಸ್ ಬಾಟ್ಲಿಂಗ್ ಪ್ಲಾಂಟ್‌ನ ರಕ್ಷಣಾ ಗೋಡೆ ಕುಸಿದಿದ್ದು, ಬರೋಬ್ಬರಿ 3,000 ಕ್ಕೂ ಹೆಚ್ಚು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ಸದ್ಯ ಪಾತಾಳಗಂಗಾ ನದಿ ಹಾಗೂ ಖಾರ್ಪಾಡಾ ಹಳ್ಳದಲ್ಲಿ ಸಾವಿರಾರು ಗ್ಯಾಸ್ ಸಿಲಿಂಡರ್‌ಗಳು ತೇಲುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ.

ಘಟನೆ ಹಿನ್ನೆಲೆ ಏನು?

ರಾಯಗಢ ಜಿಲ್ಲೆಯ ಖಾಲಾಪುರ ತಾಲೂಕಿನ ಪಾತಾಳಗಂಗಾ ಕೈಗಾರಿಕಾ ಪ್ರದೇಶದಲ್ಲಿರುವ ಎಚ್‌ಪಿಸಿಎಲ್ ಗ್ಯಾಸ್ ಪ್ಲಾಂಟ್‌ಗೆ ಪ್ರವಾಹದ ನೀರು ನುಗ್ಗಿದೆ. ಭಾರಿ ನೀರಿನ ಒತ್ತಡಕ್ಕೆ ಪ್ಲಾಂಟ್‌ನ ಕಾಂಪೌಂಡ್ ಗೋಡೆ ಕುಸಿದಿದ್ದರಿಂದ, ಅಲ್ಲಿ ಶೇಖರಿಸಿಡಲಾಗಿದ್ದ ಸಾವಿರಾರು ಸಿಲಿಂಡರ್‌ಗಳು ನದಿಯ ಪಾಲಾಗಿವೆ. ಸ್ಥಳೀಯರು ಸೇತುವೆಯ ಮೇಲಿಂದ ನದಿಯಲ್ಲಿ ಸಾಲು ಸಾಲಾಗಿ ತೇಲಿ ಹೋಗುತ್ತಿರುವ ಸಿಲಿಂಡರ್‌ಗಳ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಜಿಲ್ಲಾಧಿಕಾರಿಗಳಿಂದ ಕಟ್ಟುನಿಟ್ಟಿನ ಎಚ್ಚರಿಕೆ:

ಕೊಚ್ಚಿಹೋಗಿರುವ ಸಿಲಿಂಡರ್‌ಗಳಲ್ಲಿ ಹಲವು ಸಿಲಿಂಡರ್‌ಗಳು ಗ್ಯಾಸ್‌ನಿಂದ ಭರ್ತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಯಗಢ ಜಿಲ್ಲಾಧಿಕಾರಿ ಕಿಶನ್ ಜಾವ್ಲೆ ಅವರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. “ನದಿಯಲ್ಲಿ ತೇಲಿಬಂದ ಸಿಲಿಂಡರ್‌ಗಳನ್ನು ಯಾರೂ ಕೂಡ ಕುತೂಹಲಕ್ಕಾಗಲಿ ಅಥವಾ ಬಳಕೆಯ ಉದ್ದೇಶದಿಂದಾಗಲಿ ಮನೆಗೆ ಕೊಂಡೊಯ್ಯಬಾರದು. ಅವುಗಳ ಕವಾಟಗಳು (valves) ಹಾನಿಗೊಳಗಾಗಿದ್ದರೆ ಭಾರಿ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ” ಎಂದು ಎಚ್ಚರಿಸಿದ್ದಾರೆ.

ಸಿಲಿಂಡರ್ ಸಿಕ್ಕರೆ ಎಲ್ಲಿ ಒಪ್ಪಿಸಬೇಕು? ಸಾರ್ವಜನಿಕರಿಗೆ ಸಿಲಿಂಡರ್‌ಗಳು ಸಿಕ್ಕಲ್ಲಿ ತಕ್ಷಣವೇ ಕೆಳಗಿನ ಸ್ಥಳಗಳಲ್ಲಿ ಒಪ್ಪಿಸಲು ಆಡಳಿತ ಮಂಡಳಿ ಮನವಿ ಮಾಡಿದೆ:

  • ನೇರವಾಗಿ ಎಚ್‌ಪಿಸಿಎಲ್ ಪ್ಲಾಂಟ್ ಅಥವಾ ಹತ್ತಿರದ ಎಚ್‌ಪಿಸಿಎಲ್ ಗ್ಯಾಸ್ ಏಜೆನ್ಸಿಗಳಿಗೆ.

  • ಖಾಲಾಪುರ ತಹಶೀಲ್ದಾರ್ ಕಚೇರಿ.

  • ಸ್ಥಳೀಯ ಉಪವಿಭಾಗಾಧಿಕಾರಿ (SDO) ಕಚೇರಿ.

ಮಹಾರಾಷ್ಟ್ರದ ರಾಯಗಢ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles