ನವದೆಹಲಿ: ಕೋಟ್ಯಂತರ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಪಿಎಫ್ ಕ್ಲೈಮ್‌ಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬಕ್ಕೆ ಮುಕ್ತಿ ಹಾಡಲು ಇಪಿಎಫ್‌ಒ ಸಂಪೂರ್ಣ ನೂತನ ಹಾಗೂ ಆಧುನಿಕ ಕೇಂದ್ರಿಕೃತ ಪೋರ್ಟಲ್ (Centralised Portal) ಅನ್ನು ಪರಿಚಯಿಸಿದೆ. ಈ ವಾರದಿಂದಲೇ ಇದು ಸಂಪೂರ್ಣವಾಗಿ ಜಾರಿಗೆ ಬರಲಿದ್ದು, ಪಿಎಫ್ ಪ್ರಕ್ರಿಯೆಗಳು ಇನ್ಮುಂದೆ ಅತ್ಯಂತ ವೇಗವಾಗಿ ನಡೆಯಲಿವೆ.
ಒಂದೇ ಪೋರ್ಟಲ್‌ನಲ್ಲಿ ಎಲ್ಲಾ ಸೇವೆಗಳು:
ಇದುವರೆಗೆ ಪಿಎಫ್ ಸದಸ್ಯರು ತಮ್ಮ ಖಾತೆಯ ಬ್ಯಾಲೆನ್ಸ್ ನೋಡಲು, ಕ್ಲೈಮ್ ಮಾಡಲು ಅಥವಾ ಸ್ಟೇಟಸ್ ತಿಳಿಯಲು ಬೇರೆ ಬೇರೆ ವೆಬ್‌ಸೈಟ್‌ಗಳನ್ನು ಅವಲಂಬಿಸಬೇಕಿತ್ತು. ಆದರೆ ಇನ್ಮುಂದೆ ‘ಯೂನಿಫೈಡ್ ಮೆಂಬರ್ ಪೋರ್ಟಲ್’ (Unified Member Portal) ಮೂಲಕ ಒಂದೇ ಕಡೆ ಎಲ್ಲಾ ಸೇವೆಗಳನ್ನು ಪಡೆಯಬಹುದು.
ದೇಶದ ಯಾವುದೇ ಕಚೇರಿಯಿಂದಲೂ ಕ್ಲೈಮ್ ವಿಲೇವಾರಿ:
ಹಳೆಯ ನಿಯಮದ ಪ್ರಕಾರ, ನಿಮ್ಮ ಪಿಎಫ್ ಖಾತೆ ಯಾವ ಪ್ರಾದೇಶಿಕ ಕಚೇರಿಯಲ್ಲಿ ಇರುತ್ತಿತ್ತೋ, ಅಲ್ಲಿ ಮಾತ್ರ ನಿಮ್ಮ ಕ್ಲೈಮ್ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಹೊಸ ಕೇಂದ್ರಿಕೃತ ವ್ಯವಸ್ಥೆಯಿಂದಾಗಿ, ದೇಶದ ಯಾವುದೇ ಮೂಲೆಯಲ್ಲಿರುವ ಇಪಿಎಫ್‌ಒ ಕಚೇರಿಯೂ ನಿಮ್ಮ ಕ್ಲೈಮ್ ಅನ್ನು ಪರಿಶೀಲಿಸಿ ಮಂಜೂರು ಮಾಡಬಹುದಾಗಿದೆ. ಇದರಿಂದ ಕಾಯುವ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ.
ಆಟೋಮೇಷನ್ ಹಾಗೂ ಕಡಿಮೆ ರಿಜೆಕ್ಷನ್:
ಹೊಸ ಪೋರ್ಟಲ್‌ನಲ್ಲಿ ಹೆಚ್ಚಿನ ಪ್ರಕ್ರಿಯೆಗಳನ್ನು ಸ್ವಯಂಚಾಲಿತ (Automation) ಗೊಳಿಸಲಾಗಿದೆ. ಅರ್ಜಿ ಸಲ್ಲಿಸುವ ಮುನ್ನವೇ ಅರ್ಹತೆಯ ನಿಯಮಗಳನ್ನು ಸ್ಪಷ್ಟವಾಗಿ ತೋರಿಸುವುದರಿಂದ, ತಪ್ಪು ಮಾಹಿತಿಯಿಂದಾಗಿ ಅರ್ಜಿಗಳು ತಿರಸ್ಕೃತಗೊಳ್ಳುವ (Rejection) ಸಾಧ್ಯತೆ ತುಂಬಾ ಕಡಿಮೆ ಇರಲಿದೆ.
ಬಡ್ಡಿ ಹಣ ಜಮೆ ಪ್ರಕ್ರಿಯೆ ಆರಂಭ:
2025-26ರ ಹಣಕಾಸು ವರ್ಷದ ಇಪಿಎಫ್ ಬಡ್ಡಿ ಹಣವನ್ನು ಇದೇ ಹೊಸ ಸಿಸ್ಟಮ್ ಮೂಲಕ ಕ್ರೆಡಿಟ್ ಮಾಡಲು ಇಪಿಎಫ್‌ಒ ಸಜ್ಜಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಒಟ್ಟು 34 ಕೋಟಿಗೂ ಅಧಿಕ ಸದಸ್ಯರ ಖಾತೆಗಳಿಗೆ 1.44 ಲಕ್ಷ ಕೋಟಿ ರೂ. ಬಡ್ಡಿ ಹಣ ಜಮೆಯಾಗಲಿದೆ. ಮುಂದಿನ ವರ್ಷದಿಂದ ಈ ಬಡ್ಡಿ ಜಮೆ ಪ್ರಕ್ರಿಯೆಯೂ ಸಂಪೂರ್ಣ ಆಟೋಮ್ಯಾಟಿಕ್ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





Leave a comment