Home “ನಾನು ಅವನನ್ನು ಕೊಂದೆ, ನಾನು ಸಾಯ್ತಿದ್ದೇನೆ!” ಅತ್ತೆ-ಸೋದರಳಿಯನ ಅಕ್ರಮ ಸಂಬಂಧ ಭೀಕರ ಅಂತ್ಯ!
Home

“ನಾನು ಅವನನ್ನು ಕೊಂದೆ, ನಾನು ಸಾಯ್ತಿದ್ದೇನೆ!” ಅತ್ತೆ-ಸೋದರಳಿಯನ ಅಕ್ರಮ ಸಂಬಂಧ ಭೀಕರ ಅಂತ್ಯ!

Share
ಅತ್ತೆ
Share

ಬಸಿರ್ಹತ್, ಪಶ್ಚಿಮ ಬಂಗಾಳ: ಪ್ರೀತಿ, ಪ್ರೇಮ ಹಾಗೂ ಅಕ್ರಮ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಅತ್ಯಂತ ಭೀಕರ ತಿರುವುಗಳನ್ನು ಪಡೆದುಕೊಳ್ಳುತ್ತಿವೆ. ಇದಕ್ಕೆ ಪೂರಕವೆಂಬಂತೆ ಪಶ್ಚಿಮ ಬಂಗಾಳದ ಬಸಿರ್ಹತ್‌ನಲ್ಲಿ ಅತ್ತೆ ಮತ್ತು ಸೋದರಳಿಯನ ನಡುವಿನ ಅನೈತಿಕ ಸಂಬಂಧವೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಬಾಡಿಗೆ ಮನೆಯಲ್ಲಿ ಯುವಕನ ಶವ ರಕ್ತದ ಮಡುವಿನಲ್ಲಿ ಪತ್ತೆಯಾದರೆ, ಇತ್ತ ಮಹಿಳೆಯ ಶವ ರೈಲ್ವೆ ಹಳಿಗಳ ಮೇಲೆ ಛಿದ್ರಗೊಂಡ ಸ್ಥಿತಿಯಲ್ಲಿ ಸಿಕ್ಕಿದೆ.

ಮದುವೆಯಾಗಿದ್ದರೂ ಸೋದರಳಿಯನ ಜೊತೆ ಲಿವ್-ಇನ್!

ಮೃತರನ್ನು ದೆಬಾಶಿಶ್ ಮೊಂಡಲ್ (32) ಮತ್ತು ರುನು ಮೊಂಡಲ್ (33) ಎಂದು ಗುರುತಿಸಲಾಗಿದೆ. ಇಬ್ಬರೂ ಬಸಿರ್ಹತ್‌ನ ತತ್ರಾ ಪ್ರದೇಶದ ನಿವಾಸಿಗಳು. ಪೊಲೀಸ್ ಮೂಲಗಳ ಪ್ರಕಾರ, ರುನುಗೆ ಸುಮಾರು 14 ವರ್ಷಗಳ ಹಿಂದೆಯೇ ವಿವಾಹವಾಗಿತ್ತು. ಆದರೆ, ಮದುವೆಯ ನಂತರ ತವರು ಮನೆಗೆ ಬಂದಾಗ ಆಕೆಗೆ ಸೋದರಳಿಯನಾಗಬೇಕಾದ ದೆಬಾಶಿಶ್ ಪರಿಚಯವಾಗಿದ್ದ. ದಿನಕಳೆದಂತೆ ಇವರಿಬ್ಬರ ನಡುವಿನ ಪರಿಚಯ ಅಕ್ರಮ ಪ್ರೀತಿಗೆ ತಿರುಗಿತ್ತು. ಕೊನೆಗೆ ಇಬ್ಬರೂ ಸಮಾಜ, ಸಂಸಾರ ಎಲ್ಲವನ್ನೂ ಬಿಟ್ಟು ಬಸಿರ್ಹತ್‌ನ ಬಾಡಿಗೆ ಮನೆಯೊಂದರಲ್ಲಿ ‘ಲಿವ್-ಇನ್ ರಿಲೇಶನ್‌ಶಿಪ್’ ಆರಂಭಿಸಿದ್ದರು.

“ನಾನು ಅವನನ್ನು ಕೊಂದಿದ್ದೇನೆ..” ತಂದೆಗೆ ಬಂತು ಶಾಕಿಂಗ್ ಕರೆ!

ಕಳೆದ ಕೆಲವು ದಿನಗಳಿಂದ ದೆಬಾಶಿಶ್ ಈ ಅಕ್ರಮ ಸಂಬಂಧದಿಂದ ಬೇಸತ್ತಿದ್ದ ಎನ್ನಲಾಗಿದೆ. ಮಾನಸಿಕ ತೊಳಲಾಟದಲ್ಲಿದ್ದ ಆತ, ತನಗೆ ವಾಪಸ್ ಮನೆಗೆ ಬರಬೇಕು ಎಂದು ತನ್ನ ತಂದೆಗೆ ಫೋನ್ ಮಾಡಿ ಅತ್ತಿದ್ದ ಎನ್ನಲಾಗಿದೆ. ಆದರೆ, ಇದಾದ ಬೆನ್ನಲ್ಲೇ ದೆಬಾಶಿಶ್ ತಂದೆಗೆ ಮತ್ತೊಂದು ಶಾಕಿಂಗ್ ಫೋನ್ ಕಾಲ್ ಬಂದಿದೆ. ಸ್ವತಃ ರುನು ಫೋನ್ ಮಾಡಿ, “ನಾನು ದೆಬಾಶಿಶ್‌ನನ್ನು ಕೊಲೆ ಮಾಡಿದ್ದೇನೆ, ಈಗ ನಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಹೇಳಿ ಫೋನ್ ಕಟ್ ಮಾಡಿದ್ದಾಳೆ!

ರೈಲ್ವೆ ಹಳಿಯಲ್ಲಿ ಮಹಿಳೆ, ಕೋಣೆಯಲ್ಲಿ ಯುವಕನ ಶವ!

ಫೋನ್ ಕಾಲ್ ಬಂದ ಬೆನ್ನಲ್ಲೇ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಬಸಿರ್ಹತ್ ಸ್ಟೇಷನ್ ಸಮೀಪದ ಅನಂತಪುರದಲ್ಲಿ ರೈಲ್ವೆ ಹಳಿಗಳ ಮೇಲೆ ರುನು ಮೃತದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣವೇ ಪೊಲೀಸರು ಅವರಿಬ್ಬರು ವಾಸವಿದ್ದ ಬಾಡಿಗೆ ಮನೆಯ ಬೀಗ ಮುರಿದು ಒಳಹೊಕ್ಕಾಗ, ಅಲ್ಲಿ ದೆಬಾಶಿಶ್ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ.

“ರುನು ಮೊದಲು ನಮ್ಮ ಹುಡುಗನನ್ನು ಕೊಲೆ ಮಾಡಿ, ಆಮೇಲೆ ತಾನು ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ದೆಬಾಶಿಶ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸದ್ಯಕ್ಕೆ ಪೊಲೀಸರು ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *