SUDDIKSHANA KANNADA NEWS/ DAVANAGERE/ DATE:19-12-2024
ದಾವಣಗೆರೆ: ಜಿಲ್ಲಾ ವರದಿಗಾರರ ಕೂಟದಿಂದ 3ನೇ ವರ್ಷದ ಪಿಪಿಎಲ್-2ಕೆ24ನ್ನು ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಡಿ.21ರಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದು, ಕೂಟದ 4 ತಂಡ ಪ್ರಶಸ್ತಿಗಾಗಿ ಸೆಣಸಿದರೆ, ಅಫಿಷಿಯಲ್ ಕಪ್‌ಗಾಗಿ ನಾಲ್ಕು ತಂಡ ಪೈಪೋಟಿ ನಡೆಸಲಿವೆ ಎಂದು ಕೂಟದ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶನಿವಾರ ಬೆಳಿಗ್ಗೆ 7.30ಕ್ಕೆ ಕೂಟದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಟೂರ್ನಿ ಉದ್ಘಾಟಿಸುವರು. ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ನಿಕಟ ಪೂರ್ವ ಅಧ್ಯಕ್ಷರಾದ ಕೆ.ಏಕಾಂತಪ್ಪ, ಎಂ.ಎಸ್.ವಿಕಾಸ್, ಜಿ.ಎಂ.ಆರ್.ಆರಾಧ್ಯ, ಮಲ್ಲಿಕಾರ್ಜುನ ಕಬ್ಬೂರು, ಬಸವರಾಜ ದೊಡ್ಮನಿ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ.ಮಂಜುನಾಥ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.
ಅಫಿಷಿಯಲ್ ಕಪ್‌ಗಾಗಿ ಜಿಲ್ಲಾ ಪೊಲೀಸ್ ತಂಡ ಹಾಗೂ ವರದಿಗಾರರ ಕೂಟದ ಮಧ್ಯೆ ಉದ್ಘಾಟನಾ ಪಂದ್ಯ ನಡೆಯಲಿದೆ. 2ನೇ ಪಂದ್ಯ ಜಿಲ್ಲಾಧಿಕಾರಿಗಳು ಹಾಗೂ ಕೂಟದ ಮತ್ತೊಂದು ತಂಡದ ಜೊತೆ ನಡೆಯಲಿದೆ. ಡಿ.22ರ ಬೆಳಿಗ್ಗೆ 7.30ಕ್ಕೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ 2ನೇ ದಿನದ ಪಂದ್ಯಗಳಿಗೆ ಚಾಲನೆ ನೀಡುವರು. ಇದೇ ಮೊದಲ ಬಾರಿಗೆ ಪಿಪಿಎಲ್-24ಗೆ ನಗದು ಬಹುಮಾನ ನೀಡುತ್ತಿರುವುದು ವಿಶೇಷ ಎಂದು ಅವರು ಹೇಳಿದರು.
ಸುವರ್ಣ ನ್ಯೂಸ್‌ನ ಡಾ.ವರದರಾಜ ನೇತೃತ್ವದ ಚಾಲುಕ್ಯ ತಂಡ, ವಾರ್ತಾ ವಿಹಾರದ ಎನ್.ವಿ.ಬದರೀನಾಥರ ಕದಂಬ ತಂಡ, ಪವರ್ ಟಿವಿ ಮಧು ನಾಗರಾಜರ ರಾಷ್ಟ್ರಕೂಟ ಹಾಗೂ ಜೆಕೆ ಟಿವಿಯ ಕರಿಬಸವರಾಜುರ ಹೊಯ್ಸಳ ತಂಡಗಳು ಪಿಪಿಎಲ್-24 ಪ್ರಶಸ್ತಿಗೆ ಸೆಣಸಲಿವೆ. ಕೂಟದಿಂದ ನಾಲ್ಕು ತಂಡಗಳಿಗೆ ರಾಜ್ಯದ ಪ್ರಸಿದ್ಧ ರಾಜ ವಂಶಗಳ ಹೆಸರನ್ನು ಇಟ್ಟಿದ್ದರಿಂದ ಕೂಟದ ಪಂದ್ಯಾವಳಿ ರಂಗೇರುವಂತಾಗಿದೆ. ನಾಲ್ಕೂ ತಂಡಗಳು ವಿಭಿನ್ನ ಬಣ್ಣಗಳ ಕ್ರೀಡಾ ಸಮವಸ್ತ್ರ ಧರಿಸಿ ಅಂಗಣಕ್ಕಿಳಿಯಲಿವೆ ಎಂದು ಅವರು ತಿಳಿಸಿದರು.
ಹರಿಹರ ನಗರವಾಣಿ ಸಂಪಾದಕ ಕುಣಿಬೆಳಕೆರೆ ಸುರೇಶ ಪ್ರಥಮ ಬಹುಮಾನ 10 ಸಾವಿರ ರು. ನಗದು, ದಾವಣಗೆರೆ ಕನ್ನಡಿಗ ಸಂಪಾದಕ ಆರ್.ರವಿ ದ್ವಿತೀಯ ನಗದು ಬಹುಮಾನ ನೀಡಿದ್ದಾರೆ. ಪ್ರಥಮ, ದ್ವಿತೀಯ ಸ್ಥಾನ ಪಡೆಯುವ ತಂಡಗಳಿಗೆ ಟ್ರೋಫಿಯನ್ನು ಇಂದಿನ ಸುದ್ದಿ ಸಂಪಾದಕರಾಗಿದ್ದ ದಿವಂಗತ ವೀರಪ್ಪ ಎಂ.ಭಾವಿ ಸ್ಮರಣಾರ್ಥ ಅನಿಲಕುಮಾರ ವಿ.ಭಾವಿ ಪ್ರಾಯೋಜಿಸಿದ್ದಾರೆ. ಉತ್ತಮ ಬ್ಯಾಟ್ಸ್ ಮನ್, ಬೌಲರ್, ಆಲ್ರೌಂಡರ್, ಸರಣಿ ಶ್ರೇಷ್ಟ, ಪಂದ್ಯ ಶ್ರೇಷ್ಟ ಹೀಗೆ 5 ವೈಯಕ್ತಿಕ ಪ್ರಶಸ್ತಿಗೆ ಸುಭಾಷಿತ ಪತ್ರಿಕೆ ಡಾ.ಕೆ.ಜೈಮುನಿ ಟ್ರೋಫಿಗಳನ್ನು ಹಾಗೂ ಮಾಗನೂರು ಮಂಜಪ್ಪ ತಲಾ 2 ಸಾವಿರ ನಗದು ಬಹುಮಾನ ನೀಡಿದ್ದಾರೆ ಎಂದು ಅವರು ಹೇಳಿದರು.
ಎರಡೂ ದಿನ ಉಪಹಾರವನ್ನು ವಾರ್ತಾ ವಿಹಾರದ ಎಂ.ವೈ.ಸತೀಶ, ಜನತಾವಾಣಿ ಬಿ.ಸಿಕಂದರ್, ಮಧ್ಯಾಹ್ನದ ಊಟವನ್ನು ಮಾಗನೂರು ಮಂಜಪ್ಪ, ನೀರಿನ ವ್ಯವಸ್ಥೆಯನ್ನು ನಗರವಾಣಿ ಕೆ.ಬಿ.ರಾಜು ಮಾಡಿದ್ದಾರೆ. ಪಂದ್ಯಾವಳಿ ಯಶಸ್ಸಿಗೆ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಸಹಕರಿಸಬೇಕು. ಕಳೆದ ಕೆಲವು ದಿನಗಳಿಂದ ಪಂದ್ಯಾವಳಿಗೆ ಸಿದ್ಧತೆ ಮಾಡಿಕೊಂಡಿದ್ದ ಎಲ್ಲಾ ತಂಡಗಳು ಈಗ ಪಂದ್ಯಾವಳಿಯನ್ನು ಇದಿರು ನೋಡುತ್ತಿವೆ ಎಂದು ನಾಗರಾಜ ಬಡದಾಳ ತಿಳಿಸಿದರು.
ಕೂಟದ ಕ್ರೀಡಾ ಕಾರ್ಯದರ್ಶಿಗಳಾದ ಮಹೇಶ ಕಾಶೀಪುರ, ಮಹದೇವ ಮಾತನಾಡಿ, ಪ್ರತಿ 6 ಓವರ್‌ಗೆ ಸೀಮಿತವಾಗಿರುತ್ತದೆ. ಪ್ರತಿ ತಂಡಕ್ಕೆ ನಾಲ್ವರು ಮಹಿಳಾ ಪತ್ರಕರ್ತರು ಮಾರ್ಗದರ್ಶಕರಾಗಿರುತ್ತಾರೆ. ಪಂದ್ಯಗಳಲ್ಲಿ ಅಂಪೈರ್‌ಗಳದ್ದೇ ಅಂತಿಮ ತೀರ್ಮಾನ. ಅಂತಿಮವಾಗಿ ಕೂಟದ ನಾಲ್ವರು ಕ್ರೀಡಾ ಕಾರ್ಯದರ್ಶಿ ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲಾ ತಂಡಗಳು, ಫ್ರಾಂಚೈಸಿಗಳು ಬದ್ಧವಾಗಿರಬೇಕು ಎಂದರು.
ಕೂಟದ ಎಂ.ವೈ.ಸತೀಶ, ಪವನ ಐರಣಿ, ಪಿ.ಎಸ್.ಲೋಕೇಶ, ಆರ್.ರಮೇಶ, ಪ್ರಾಂಚೈಸಿಗಳಾದ ಎನ್.ವಿ.ಬದರೀನಾಥ, ಡಾ.ಸಿ.ವರದರಾಜ, ಮಧು ನಾಗರಾಜ, ಬಿ.ಸಿಕಂದರ್, ಆರ್.ತಿಪ್ಪೇಸ್ವಾಮಿ, ಡಾ.ಕೆ.ಜೈಮುನಿ, ಮಾಗನೂರು ಮಂಜಪ್ಪ, ಆರ್.ರವಿಬಾಬು, ಪುನೀತ್ ಆಪ್ತಿ, ಸುರೇಶ ಕುಣಿಬೆಳಕೆರೆ, ದೇವಿಕಾ ಸುನಿಲ್, ತೇಜಸ್ವಿನಿ ಪ್ರಕಾಶ, ಎಚ್.ಭಾರತಿ, ಸುರೇಶ ಕಕ್ಕರಗೊಳ್ಳ, ವಿನಾಯಕ ಪೂಜಾರ, ಎಚ್.ಎಂ.ಪಿ.ಕುಮಾರ, ನೂರುಲ್ಲಾ, ಬಸವರಾಜ, ನಿಂಗಪ್ಪ, ಸುರೇಶ ಕೋಲ್ಕುಂಟೆ, ವಿಠ್ಠಲ, ಮಧುಕುಮಾರ, ಅಣ್ಣಪ್ಪ, ಪರಶುರಾಮ, ವಸಂತಕುಮಾರ, ವಿಜಯಕುಮಾರ ಜೈನ್, ಗಣೇಶ ಪೂಜಾರ, ಶ್ಯಾಮ್, ಪ್ರವೀಣ ಬಾಡ, ಯಶವಂತ, ಶಿವರಾಜ ಈಳಿಗೇರ, ಅನಿಲಕುಮಾರ ಎಂ.ಭಾವಿ, ಕಿರಣಕುಮಾರ ಇತರರು ಇದ್ದರು.