Home ದಾವಣಗೆರೆ ಮಕ್ಕಳೂ ಸೇರಿ 150 ಜನರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಆಮೀರ್ ಖಾನ್: ಬೆಂಗಳೂರು ಮೂಲದ ಗೌರಿ ಸ್ಪ್ರ್ಯಾಟ್ ಜೊತೆ ಸರಳ ವಿವಾಹ!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಮಕ್ಕಳೂ ಸೇರಿ 150 ಜನರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಆಮೀರ್ ಖಾನ್: ಬೆಂಗಳೂರು ಮೂಲದ ಗೌರಿ ಸ್ಪ್ರ್ಯಾಟ್ ಜೊತೆ ಸರಳ ವಿವಾಹ!

Share
ಆಮೀರ್ ಖಾನ್
Share

ಮುಂಬೈ: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್ ಖ್ಯಾತಿಯ ನಟ ಆಮೀರ್ ಖಾನ್ (61) ಅವರು ತಮ್ಮ ದೀರ್ಘಕಾಲದ ಗೆಳತಿ ಗೌರಿ ಸ್ಪ್ರ್ಯಾಟ್ (47) ಅವರೊಂದಿಗೆ ಶನಿವಾರ ಮಧ್ಯಾಹ್ನ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಆಮೀರ್ ಖಾನ್ ಅವರ ನಿವಾಸದಲ್ಲಿ ಅತ್ಯಂತ ಸರಳವಾಗಿ ಮತ್ತು ಖಾಸಗಿಯಾಗಿ ಮದುವೆ ನೋಂದಣಿ ಪ್ರಕ್ರಿಯೆ ನೆರವೇರಿದೆ.

ಶನಿವಾರ ಮಧ್ಯಾಹ್ನ ಸುಮಾರು 12.45ರ ಸುಮಾರಿಗೆ ಆಮೀರ್ ಖಾನ್ ಮತ್ತು ಗೌರಿ ಮದುವೆ ಪತ್ರಗಳಿಗೆ ಸಹಿ ಹಾಕುವ ಮೂಲಕ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ದಂಪತಿಗಳು ಅತ್ಯಂತ ಭಾವುಕರಾಗಿ ಮತ್ತು ಸಂತೋಷದಿಂದ ಕಾಣಿಸಿಕೊಂಡರು ಎಂದು ಸಮಾರಂಭದಲ್ಲಿದ್ದ ಆಪ್ತರು ತಿಳಿಸಿದ್ದಾರೆ.

150 ಆಪ್ತರ ಸಮ್ಮುಖದಲ್ಲಿ ನಡೆದ ವಿವಾಹ:

ತೀರಾ ಖಾಸಗಿಯಾಗಿ ನಡೆದ ಈ ವಿವಾಹ ಮಹೋತ್ಸವದಲ್ಲಿ ಕೇವಲ 150 ಆಪ್ತರು ಮತ್ತು ಕುಟುಂಬದ ಸದಸ್ಯರು ಮಾತ್ರ ಭಾಗಿಯಾಗಿದ್ದರು. ಮದುವೆಯಲ್ಲಿ ಆಮೀರ್ ಖಾನ್ ಅವರ ಮಕ್ಕಳಾದ ಜುನೈದ್, ಐರಾ ಮತ್ತು ಆಜಾದ್ ಹಾಗೂ ಗೌರಿ ಅವರ ಪುತ್ರ ಭಾಗವಹಿಸಿ ದಂಪತಿಗೆ ಶುಭ ಹಾರೈಸಿದರು. ಇವರಲ್ಲದೆ ಚಿತ್ರರಂಗದ ಪ್ರಮುಖರಾದ ವೀರ್ ದಾಸ್, ಇರ್ಫಾನ್ ಪಠಾಣ್, ಎಲ್ಲೀ ಅವ್ರಾಮ್ ಸೇರಿದಂತೆ ಹಲವು ಗಣ್ಯರು ಮುಂಬೈನ ಈ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

25 ವರ್ಷಗಳ ಪರಿಚಯ, 2 ವರ್ಷಗಳ ಪ್ರೀತಿ:

ಚಾಕೊಲೇಟ್ ಹೀರೊ ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಕಳೆದ 25 ವರ್ಷಗಳಿಂದ ಪರಸ್ಪರ ಪರಿಚಿತರು. ಆದರೆ ಇವರಿಬ್ಬರ ನಡುವೆ ಪ್ರೀತಿ ಮೊಳೆದದ್ದು ಎರಡು ವರ್ಷಗಳ ಹಿಂದೆ ಮಾತ್ರ. ಇದೇ ವರ್ಷದ ಆರಂಭದಲ್ಲಿ ಆಮೀರ್ ಖಾನ್ ಅವರು ತಮ್ಮ ಸಂಬಂಧವನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದರು.

ಯಾರೀ ಗೌರಿ ಸ್ಪ್ರ್ಯಾಟ್?

ಮೂಲತಃ ಬೆಂಗಳೂರಿನವರಾದ ಗೌರಿ ಸ್ಪ್ರ್ಯಾಟ್ ಸೌಂದರ್ಯ ಮತ್ತು ವೆಲ್ನೆಸ್ (Beauty & Wellness) ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನ ಬ್ಲೂ ಮೌಂಟೇನ್ ಶಾಲೆಯಲ್ಲಿ ಓದಿದ ಇವರು, ನಂತರ 2004 ರಲ್ಲಿ ಲಂಡನ್‌ನ ಯೂನಿವರ್ಸಿಟಿ ಆಫ್ ದಿ ಆರ್ಟ್ಸ್‌ನಲ್ಲಿ ಸ್ಟೈಲಿಂಗ್ ಮತ್ತು ಫೋಟೋಗ್ರಫಿ ಕೋರ್ಸ್ ಮುಗಿಸಿದ್ದಾರೆ. ಪ್ರಸ್ತುತ ಇವರು ಮುಂಬೈನಲ್ಲಿ ಪ್ರಸಿದ್ಧ ‘ಬಿಬ್ಲಂಟ್’ (BBlunt) ಸಲೂನ್ ನಡೆಸುತ್ತಿದ್ದಾರೆ. ಇವರ ತಾಯಿ ರೀಟಾ ಸ್ಪ್ರ್ಯಾಟ್ ಕೂಡ ಈ ಹಿಂದೆ ಸಲೂನ್ ಉದ್ಯಮದಲ್ಲಿದ್ದರು. ಗೌರಿ ಹೆಚ್ಚಾಗಿ ಗ್ಲಾಮರ್ ಪ್ರಪಂಚದಿಂದ ದೂರವೇ ಉಳಿದಿದ್ದಾರೆ.

ನಟ ಆಮೀರ್ ಖಾನ್ ಅವರಿಗೆ ಇದು ಮೂರನೇ ಮದುವೆಯಾಗಿದೆ. ಈ ಹಿಂದೆ ಅವರು ರೀನಾ ದತ್ತಾ ಮತ್ತು ಕಿರಣ್ ರಾವ್ ಅವರನ್ನು ವಿವಾಹವಾಗಿದ್ದರು. ಕಿರಣ್ ರಾವ್ ಅವರಿಂದ 2021 ರಲ್ಲಿ ವಿಚ್ಛೇದನ ಪಡೆದಿದ್ದ ಆಮೀರ್, ಮಗ ಆಜಾದ್‌ನ ಜಂಟಿ ಪಾಲನೆ ಮಾಡುತ್ತಿದ್ದಾರೆ. ಇದೀಗ 61ನೇ ವಯಸ್ಸಿನಲ್ಲಿ ಆಮೀರ್ ಖಾನ್ ಹೊಸ ಜೀವನ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Share

Leave a comment

Leave a Reply

Your email address will not be published. Required fields are marked *

Related Articles