Home ಕ್ರೈಂ ನ್ಯೂಸ್ ರಾಮಮಂದಿರದಲ್ಲಿ ಕಾಣೆಯಾಯಿತೇ ಚಿನ್ನದ ಗ್ರಂಥ? ಟ್ರಸ್ಟ್ ವಿರುದ್ಧ ಮಾಜಿ ಗೃಹ ಕಾರ್ಯದರ್ಶಿ ಗಂಭೀರ ಆರೋಪ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರಾಮಮಂದಿರದಲ್ಲಿ ಕಾಣೆಯಾಯಿತೇ ಚಿನ್ನದ ಗ್ರಂಥ? ಟ್ರಸ್ಟ್ ವಿರುದ್ಧ ಮಾಜಿ ಗೃಹ ಕಾರ್ಯದರ್ಶಿ ಗಂಭೀರ ಆರೋಪ!

Share
ರಾಮಮಂದಿರ
Share

ನವದೆಹಲಿ: ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ದುರುಪಯೋಗ ಮತ್ತು ಹಗರಣದ ತನಿಖೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಮಂದಿರಕ್ಕೆ ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಲೇಪಿತ ‘ರಾಮಚರಿತಮಾನಸ’ ಗ್ರಂಥವನ್ನು ದೇಣಿಗೆಯಾಗಿ ನೀಡಿದ್ದ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಎಸ್. ಲಕ್ಷ್ಮೀನಾರಾಯಣ್ ಅವರು ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ತಾವು ನೀಡಿದ ಪವಿತ್ರ ಗ್ರಂಥವನ್ನು ದೇವಸ್ಥಾನದ ಪ್ರದರ್ಶನದಿಂದ ದಿಢೀರ್ ಆಗಿ ತೆಗೆದುಹಾಕಲಾಗಿದ್ದು, ಅದು ಈಗ ಎಲ್ಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

147 ಕೆಜಿ ತೂಕದ ಚಿನ್ನದ ಗ್ರಂಥದ ವೈಶಿಷ್ಟ್ಯವೇನು?

ಮಾಜಿ ಐಎಎಸ್ ಅಧಿಕಾರಿ ಎಸ್. ಲಕ್ಷ್ಮೀನಾರಾಯಣ್ ಹಾಗೂ ಅವರ ಪತ್ನಿ ಸರಸ್ವತಿ ಅವರು ಏಪ್ರಿಲ್ 2024 ರಲ್ಲಿ ರಾಮಮಂದಿರ ಟ್ರಸ್ಟ್‌ಗೆ ಈ ಅಪರೂಪದ ಕಾಣಿಕೆಯನ್ನು ಸಮರ್ಪಿಸಿದ್ದರು. ಇದು ಚಿನ್ನ, ಬೆಳ್ಳಿ ಮತ್ತು ತಾಮ್ರದಿಂದ ಮಾಡಲ್ಪಟ್ಟಿದ್ದು, ಸುಮಾರು 147 ಕೆಜಿ ತೂಕವಿದೆ. ಗೋಸ್ವಾಮಿ ತುಳಸೀದಾಸರ ರಾಮಚರಿತಮಾನಸದ ಎಲ್ಲಾ 10,902 ಶ್ಲೋಕಗಳನ್ನು ಒಳಗೊಂಡಿರುವ 522 ಚಿನ್ನದ ಲೇಪಿತ ಪುಟಗಳನ್ನು ಈ ಗ್ರಂಥ ಹೊಂದಿದೆ. ಇದರ ಅಂದಾಜು ಮೌಲ್ಯ ₹4.5 ಕೋಟಿಯಿಂದ ₹5 ಕೋಟಿ ಎಂದು ಹೇಳಲಾಗಿದೆ.

ಪ್ರದರ್ಶನದಿಂದ ದಿಢೀರ್ ನಾಪತ್ತೆ!

“ಆರಂಭದಲ್ಲಿ ಈ ರಾಮಚರಿತಮಾನಸವನ್ನು ಗರ್ಭಗುಡಿಯ ಬಳಿ ಇಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ನಂತರ ಅಲ್ಲಿ ಜಾಗವಿಲ್ಲ ಎಂದು ಬೇರೆಡೆ ಪ್ರದರ್ಶನಕ್ಕೆ ಇಡಲಾಗಿತ್ತು. ಭಕ್ತರು ನಿತ್ಯವೂ ಇದರ ದರ್ಶನ ಪಡೆಯುತ್ತಿದ್ದರು. ಆದರೆ, ಸುಮಾರು 5 ತಿಂಗಳ ಬಳಿಕ ಅದನ್ನು ಅಲ್ಲಿಂದ ದಿಢೀರ್ ಆಗಿ ತೆರವುಗೊಳಿಸಲಾಗಿದೆ. ಅದು ಈಗ ಎಲ್ಲಿದೆ ಎಂಬ ಬಗ್ಗೆ ಟ್ರಸ್ಟ್‌ನಿಂದ ಯಾವುದೇ ಅಧಿಕೃತ ಸ್ಪಷ್ಟನೆ ಸಿಗುತ್ತಿಲ್ಲ” ಎಂದು ಲಕ್ಷ್ಮೀನಾರಾಯಣ್ ಎನ್‌ಡಿಟಿವಿ ಸಂದರ್ಶನದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಆಡಿಟ್‌ಗೆ ಮಾಜಿ ಅಧಿಕಾರಿಯ ಆಗ್ರಹ

ರಾಮಮಂದಿರದ ನಗದು ದೇಣಿಗೆ ಹಗರಣದ ಬೆನ್ನಲ್ಲೇ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ರಾಜೀನಾಮೆ ಪಡೆದುಕೊಳ್ಳಲಾಗಿದೆ. ಈ ಕುರಿತು ಮಾತನಾಡಿರುವ ಮಾಜಿ ಗೃಹ ಕಾರ್ಯದರ್ಶಿಗಳು, “ನನ್ನ ಪರಿಚಿತರು ಮತ್ತು ಸಾರ್ವಜನಿಕರು ನೀವು ನೀಡಿದ ಚಿನ್ನದ ಗ್ರಂಥ ಸುರಕ್ಷಿತವಾಗಿದೆಯೇ ಎಂದು ಕೇಳಲು ಆರಂಭಿಸಿದ್ದಾರೆ. ಇದು ನನಗೆ ತೀವ್ರ ಆತಂಕ ತಂದಿದೆ. ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿರಿಯ ಅಧಿಕಾರಿಗಳು ಹಾಗೂ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನೂ ಭೇಟಿಯಾಗಿ ಮಂದಿರದ ಒಟ್ಟು ಕಾಣಿಕೆಗಳ ಬಗ್ಗೆ ಪಾರದರ್ಶಕ ಆಡಿಟ್ (ಲೆಕ್ಕಪರಿಶೋಧನೆ) ನಡೆಸುವಂತೆ ಮನವಿ ಮಾಡಿದ್ದೇನೆ” ಎಂದು ತಿಳಿಸಿದ್ದಾರೆ.

ನಮಗೆ ಯಾವುದೇ ಪ್ರಚಾರ ಬೇಡ, ಭಕ್ತರ ನಂಬಿಕೆಯ ಕಾಣಿಕೆಗಳ ಬಗ್ಗೆ ಕೇವಲ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ನಾವು ಬಯಸುತ್ತಿದ್ದೇವೆ ಎಂದು ನಿವೃತ್ತ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *