ದಾವಣಗೆರೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ರವರ ಪರ ಗುರುತಿಸಿಕೊಂಡಿರುವ ಬಣ ಇಂದು ಹಮ್ಮಿಕೊಂಡಿರುವ ಸಭೆಗೆ ತಡರಾತ್ರಿಯೇ ಆಗಮಿಸಿದ್ದಾರೆ, ಹಾಗೂ ದಾವಣಗೆರೆಯಲ್ಲಿ ಬೃಹತ್ ಸಮಾವೇಶದ ಕುರಿತು ಚರ್ಚೆ ನಡೆಸಲಿದ್ದಾರೆ.
ನಗರದ ಸಾಯಿ ಇಂಟರ್ನ್ಯಾಷನಲ್ ಹೋಟೆಲ್ ಅಲ್ಲಿ ಮಾಜಿ ಶಾಸಕ ಎಂ.ಪಿ ರೇಣುಕಚಾರ್ಯರ ನೇತೃತ್ವದಲ್ಲಿ ಬಣದ ಸದಸ್ಯರು ಇಂದು ಮೊದಲಿಗೆ ನಗರ ದೇವತೆ ಶ್ರೀ ದುರ್ಗಾಂಭಿಕ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆಯಲ್ಲಿದ್ದಾರೆ. ನಂತರ 11ಗಂಟೆಗೆ ಸರಿಯಾಗಿ ಹಮ್ಮಿಕೊಂಡಿರುವ ಸಭೆಗೆ ಸರಿಸುಮಾರು 40ಕ್ಕೂ ಹೆಚ್ಚು ಜನ ಶಾಸಕರು ಮಾಜಿ ಸಚಿವರು ಭಾಗವಹಿಸುವ ಸಂಭವವಿದೆ.
ಬಿ.ವೈ ವಿಜಯೇಂದ್ರ ರವರು ಪಕ್ಷದ ಸಾರಥ್ಯ ವಹಿಸಿಕೊಂಡು ವರ್ಷ ಕಳೆದಿದೆ. ಇವರ ನೇತೃತ್ವದಲ್ಲಿ ಪಕ್ಷ 17ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ, ರಾಜ್ಯದ ಉದ್ದಗಲಕ್ಕೂ ಸಂಚಾರ ನಡೆಸಿ ಪಕ್ಷ ಬಲಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಪಕ್ಷವನ್ನು ಮತ್ತಷ್ಟು ಸಬಲಗೊಳಿಸಲು ಹಾಗೂ ವಿಜಯೇಂದ್ರರ ಕೈ ಬಲಗೊಳಿಸಲು ಈ ಸಭೆ ನಡೆಸುತ್ತಿದ್ದೇವೆ ಎಂದು ಎಂ.ಪಿ ರೇಣುಕಚಾರ್ಯ ಸುದ್ದಿಗಾರರ ಜೊತೆ ಮಾತನಾಡಿದರು.
ಬಿ.ಎಸ್.ಯಡಿಯೂರಪ್ಪನವರಿಗೂ ಶಕ್ತಿ ತುಂಬಿದ್ದು ಇದೇ ಮಧ್ಯ ಕರ್ನಾಟಕ, ಈಗ ಬಿ.ವೈ ವಿಜಯೇಂದ್ರನವರಿಗೂ ಇಲ್ಲಿಂದಲೇ ಶಕ್ತಿ ತುಂಬುವ ಪ್ರಯತ್ನ ನಡೆಯುತ್ತಿದೆ. ಮೈಸೂರು ಹಾಗೂ ಕೋಲಾರದ ಕುರುಡುಮಲೆ ಸೇರಿ ಒಟ್ಟು ಆರು ಸಭೆಗಳನ್ನು ಮಾಡಿದ್ದೇವೆ, ಇದು ಯಾರ ವಿರುದ್ಧದ ಹೋರಾಟವಲ್ಲ, ಇದು ಯಾರೊಬ್ಬರಿಗೂ ಸಂದೇಶ ರವಾನಿಸುವ ಉದ್ದೇಶವು ಇಲ್ಲ ಎಂದು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು.
ಮಾಜಿ ಶಾಸಕರಾದ ಎಸ್.ವಿ ರಾಮಚಂದ್ರಪ್ಪ, ರಾಣೇಬೆನ್ನೂರಿನ ಅರುಣ್ ಕುಮಾರ್, ಬ್ಯಾಡಗಿ ವಿರೂಪಾಕ್ಷಪ್ಪ, ಶಿವಮೊಗ್ಗದ ಕುಮಾರಸ್ವಾಮಿ, ಕೊಳ್ಳೆಗಾಲದ ಎಂ.ಮಹೇಶ್, ಮೊಳಕಾಲ್ಮೂರಿನ ನೆರ್ಲಗುಂಟೆ ತಿಪ್ಪೇಸ್ವಾಮಿ, ಮೈಸೂರಿನ ಎಲ್.ನಾಗೇಂದ್ರ, ಗುಂಡ್ಲುಪೇಟೆಯ ನಿರಂಜನ್, ಕಡೂರು ಬೆಳ್ಳಿ ಪ್ರಕಾಶ್, ಶೀಲವಂತ್, ರಾಜಶೇಖರ್, ಮಸ್ಕಿ ಪ್ರತಾಪ್ ಗೌಡ ಸಭೆಗೆ ಆಗಿಮಿಸಿದ್ದಾರೆ.