Home ದಾವಣಗೆರೆ ವಿಶ್ವದಲ್ಲೇ ದೊಡ್ಡ ಪರಿಸರ ಪ್ರಶಸ್ತಿ ಗೆದ್ದ ಆಂಧ್ರದ ಕೃಷಿ ಮಾದರಿ: 22 ರಾಜ್ಯಗಳಲ್ಲಿ ಜಾರಿಗೆ ಸಿದ್ಧತೆ!
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ವಿಶ್ವದಲ್ಲೇ ದೊಡ್ಡ ಪರಿಸರ ಪ್ರಶಸ್ತಿ ಗೆದ್ದ ಆಂಧ್ರದ ಕೃಷಿ ಮಾದರಿ: 22 ರಾಜ್ಯಗಳಲ್ಲಿ ಜಾರಿಗೆ ಸಿದ್ಧತೆ!

Share
ಕೃಷಿ
Share

ನವದೆಹಲಿ: ಆಂಧ್ರಪ್ರದೇಶದ ಗ್ರಾಮೀಣ ಮಹಿಳೆಯರ ನೇತೃತ್ವದ ಮತ್ತು ಸಮುದಾಯ ಆಧಾರಿತ ನೈಸರ್ಗಿಕ ಕೃಷಿ ಕಾರ್ಯಕ್ರಮವಾದ ‘ಆಂಧ್ರಪ್ರದೇಶ ಕಮ್ಯುನಿಟಿ ಮ್ಯಾನೇಜ್ಡ್ ನ್ಯಾಚುರಲ್ ಫಾರ್ಮಿಂಗ್’ (APCNF) ಜಾಗತಿಕ ಮಟ್ಟದಲ್ಲಿ ದೇಶವೇ ಹೆಮ್ಮೆಪಡುವಂತಹ ಐತಿಹಾಸಿಕ ಸಾಧನೆ ಮಾಡಿದೆ.

ಜಗತ್ತಿನ ಅತ್ಯಂತ ದೊಡ್ಡ ಪರಿಸರ ಮತ್ತು ಆಹಾರ ವ್ಯವಸ್ಥೆ ಪರಿವರ್ತನೆ ಪ್ರಶಸ್ತಿಯಾದ ‘ಫುಡ್ ಪ್ಲಾನೆಟ್ ಪ್ರಶಸ್ತಿ 2026’ (Food Planet Prize) ಅನ್ನು ಎಪಿಸಿಎನ್‌ಎಫ್ ಮುಡಿಗೇರಿಸಿಕೊಂಡಿದೆ.

ಸ್ವೀಡನ್‌ನ ಬಾಸ್ಟಾಡ್‌ನಲ್ಲಿ ನಡೆದ ಸಮಾರಂಭದಲ್ಲಿ ಕರ್ಟ್ ಬರ್ಗ್‌ಫೋರ್ಸ್ ಫೌಂಡೇಶನ್ ಈ ಪ್ರಶಸ್ತಿಯನ್ನು ಘೋಷಿಸಿದ್ದು, ಇದು ಬರೋಬ್ಬರಿ 1.5 ಮಿಲಿಯನ್ ಡಾಲರ್ (ಸುಮಾರು 12.5 ಕೋಟಿ ರೂಪಾಯಿ) ನಗದು ಬಹುಮಾನವನ್ನು ಒಳಗೊಂಡಿದೆ. ಅಮೆರಿಕ ಮತ್ತು ನೆದರ್‌ಲ್ಯಾಂಡ್ಸ್‌ನಂತಹ ಬಲಿಷ್ಠ ದೇಶಗಳ ಯೋಜನೆಗಳನ್ನು ಹಿಂದಿಕ್ಕಿ ಭಾರತದ ಕೃಷಿ ಮಾದರಿ ಈ ಜಾಗತಿಕ ಗೌರವಕ್ಕೆ ಪಾತ್ರವಾಗಿದೆ.

ಏನಿದು ಎಪಿಸಿಎನ್‌ಎಫ್ ಮಾದರಿ?

ಆಂಧ್ರಪ್ರದೇಶ ಸರ್ಕಾರವು 2016 ರಲ್ಲಿ ಆರಂಭಿಸಿದ ಈ ಯೋಜನೆಯು ರಾಸಾಯನಿಕ ಮುಕ್ತ, ಸಂಪೂರ್ಣ ನೈಸರ್ಗಿಕ ಕೃಷಿಗೆ ಒತ್ತು ನೀಡುತ್ತದೆ. ಪ್ರಸ್ತುತ ಆಂಧ್ರಪ್ರದೇಶದ 8,000ಕ್ಕೂ ಹೆಚ್ಚು ಹಳ್ಳಿಗಳ ಸುಮಾರು 18 ಲಕ್ಷ ರೈತರು ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಹವಾಮಾನ ವೈಪರೀತ್ಯ, ಬರ ಹಾಗೂ ನೆರೆಹಾವಳಿಯ ನಡುವೆಯೂ ಕಡಿಮೆ ವೆಚ್ಚದಲ್ಲಿ ಸುಸ್ಥಿರ ಇಳುವರಿ ಪಡೆಯಬಹುದು ಎಂಬುದನ್ನು ಈ ರೈತರು ಸಾಬೀತುಪಡಿಸಿದ್ದಾರೆ.

ಮಹಿಳಾ ಶಕ್ತಿಯೇ ಈ ಯಶಸ್ಸಿನ ಬೆನ್ನೆಲುಬು

ಈ ಕೃಷಿ ಕ್ರಾಂತಿಯ ಹಿಂದೆ ಆಂಧ್ರದ ಮಹಿಳಾ ಶಕ್ತಿಯ ದೊಡ್ಡ ಪಾತ್ರವಿದೆ. ರಾಜ್ಯದ ಸುಮಾರು 3.4 ಲಕ್ಷ ಮಹಿಳಾ ಸ್ವಸಹಾಯ ಸಂಘಗಳು ಮತ್ತು 10,000ಕ್ಕೂ ಹೆಚ್ಚು ರೈತ ತರಬೇತುದಾರರು ಮನೆಮನೆಗೆ ಭೇಟಿ ನೀಡಿ, ರೈತರಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಆಂದೋಲನವನ್ನು ಯಶಸ್ವಿಗೊಳಿಸಿದ್ದಾರೆ. ವರ್ಷಪೂರ್ತಿ ಹೊದಿಕೆ ಬೆಳೆ (Cover Cropping) ಮತ್ತು ಸ್ಥಳೀಯ ನೈಸರ್ಗಿಕ ಕೀಟನಾಶಕಗಳ ಬಳಕೆಯನ್ನು ಇಲ್ಲಿ ಪ್ರೋತ್ಸಾಹಿಸಲಾಗುತ್ತದೆ.

ಜಾಗತಿಕ ಮಟ್ಟದಲ್ಲಿ ಆಂಧ್ರ ಮಾದರಿ ಜಾರಿ!

ಆಂಧ್ರಪ್ರದೇಶದ ಈ ಯಶಸ್ವೀ ಕೃಷಿ ಮಾದರಿಯನ್ನು ಈಗ ಭಾರತದ ಇತರ 22 ರಾಜ್ಯಗಳು ಅಳವಡಿಸಿಕೊಳ್ಳುತ್ತಿವೆ. ಅಷ್ಟೇ ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ರೀಲಂಕಾ ಮತ್ತು ಜಾಂಬಿಯಾ ದೇಶಗಳು ಕೂಡ ಈ ಮಾದರಿಯನ್ನು ಅನುಕರಿಸಲು ಮುಂದಾಗಿವೆ.

2047ರ ವೇಳೆಗೆ ಆಂಧ್ರಪ್ರದೇಶವನ್ನು 100% ಸಂಪೂರ್ಣ ನೈಸರ್ಗಿಕ ಕೃಷಿ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೊಂದಿದ್ದು, ಈ ಪ್ರಶಸ್ತಿಯು ಆಡಳಿತದ ‘ಸ್ವರ್ಣ ಆಂಧ್ರ@2047’ ಮುನ್ನೋಟಕ್ಕೆ ದೊಡ್ಡ ಬಲ ನೀಡಿದೆ. ಪ್ರಶಸ್ತಿಯ ಮೊತ್ತವನ್ನು ಕೃಷಿ ಸಂಶೋಧನೆ ಮತ್ತು ‘ರೈತ ವಿಜ್ಞಾನಿ’ಗಳ ತರಬೇತಿಗೆ ಬಳಸಲಾಗುವುದು ಎಂದು ಎಪಿಸಿಎನ್‌ಎಫ್ ತಿಳಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles