ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಸದ್ಯದಲ್ಲೇ ಜನಸಾಮಾನ್ಯರಿಗೆ ಬಸ್ ಪ್ರಯಾಣ ದರ ಏರಿಕೆಯ ಬಿಸಿ ತಟ್ಟುವುದು ಬಹುತೇಕ ಖಚಿತವಾಗಿದೆ. ಕರ್ನಾಟಕದ ನಾಲ್ಕೂ ರಾಜ್ಯ ಸಾರಿಗೆ ನಿಗಮಗಳು (ಕೆಎಸ್‌ಆರ್‌ಟಿಸಿ, BMTC, NWKRTC ಮತ್ತು KKRTC) ಬಸ್ ಟಿಕೆಟ್ ದರವನ್ನು ಶೇ. 10 ರಿಂದ ಶೇ. 12 ರಷ್ಟು ಹೆಚ್ಚಿಸುವಂತೆ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿವೆ.
ಆರ್ಥಿಕ ನಷ್ಟಕ್ಕೆ ಕಾರಣಗಳೇನು?
ಡೀಸೆಲ್ ಮತ್ತು ಸಂಬಳದ ಹೊರೆ: ಇತ್ತೀಚೆಗೆ ಇಂಧನ ದರದಲ್ಲಿ ಲೀಟರ್‌ಗೆ ₹7.81 ಹೆಚ್ಚಳವಾಗಿರುವುದು ನಿಗಮಗಳಿಗೆ ₹395 ಕೋಟಿ ಹೆಚ್ಚುವರಿ ವೆಚ್ಚ ತಂದೊಡ್ಡಿದೆ. ಇದರೊಂದಿಗೆ ನೌಕರರ ಶೇ. 12.5 ರಷ್ಟು ವೇತನ ಪರಿಷ್ಕರಣೆಯಿಂದ ₹873.64 ಕೋಟಿ ಆರ್ಥಿಕ ಹೊರೆ ಬಿದ್ದಿದೆ.
₹6,000 ಕೋಟಿ ಬಾಕಿ ಸಾಲ: ನಾಲ್ಕೂ ನಿಗಮಗಳು ಒಟ್ಟಾರೆಯಾಗಿ ಪ್ರಾವಿಡೆಂಟ್ ಫಂಡ್ (PF), ಗ್ರಾಚ್ಯುಟಿ, ನಿವೃತ್ತಿ ಸೌಲಭ್ಯ ಹಾಗೂ ಡೀಸೆಲ್ ಬಾಕಿ ಸೇರಿದಂತೆ ಸುಮಾರು ₹6,000 ಕೋಟಿಗೂ ಅಧಿಕ ಹೊಣೆಗಾರಿಕೆಯನ್ನು ಹೊಂದಿವೆ. ನೌಕರರ ಹಳೇ ಸಂಬಳದ ಬಾಕಿ ಉಳಿದಿರುವ ₹821 ಕೋಟಿ ಪಾವತಿಸಲು ಹಣದ ತೀವ್ರ ಅಭಾವ ಎದುರಾಗಿದೆ.
ಶಕ್ತಿ ಯೋಜನೆಯ ಪ್ರಭಾವ: ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ ಯೋಜನೆ’ ಜಾರಿಯಾದಾಗಿನಿಂದ, ಹಣ ಪಾವತಿಸಿ ಪ್ರಯಾಣಿಸುವ ಪುರುಷ ಪ್ರಯಾಣಿಕರ ಸಂಖ್ಯೆ ಶೇ. 48 ರಿಂದ ಶೇ. 36 ಕ್ಕೆ ಕುಸಿದಿದೆ. ಇದರಿಂದ ನಿಗಮಗಳ ದೈನಂದಿನ ನಗದು ಹರಿವು (Cash Inflow) ಗಣನೀಯವಾಗಿ ಕಡಿಮೆಯಾಗಿದೆ.
ಕಳೆದ 2025ರ ಜನವರಿ 5 ರಂದು ಕೊನೆಯ ಬಾರಿಗೆ ಬಸ್ ದರ ಪರಿಷ್ಕರಣೆ ಮಾಡಲಾಗಿತ್ತು. ಪ್ರಸ್ತುತ ಎದುರಾಗಿರುವ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ದರ ಏರಿಕೆ ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದು, ಮುಖ್ಯಮಂತ್ರಿ ಮತ್ತು ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.





Leave a comment