ದಾವಣಗೆರೆ: ಜಿಲ್ಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ತಲೆ ಎತ್ತಿರುವ ನಕಲಿ ಕ್ಲಿನಿಕ್‌ಗಳಿಗೆ ಕಡಿವಾಣ ಹಾಕಲು ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿಯು ತೀವ್ರ ಸ್ವರೂಪದ ಕಾನೂನು ಕ್ರಮ ಕೈಗೊಳ್ಳಬೇಕು. ಈ ಮೂಲಕ ದಾವಣಗೆರೆಯನ್ನು ಸಂಪೂರ್ಣ “ನಕಲಿ ವೈದ್ಯ ಮುಕ್ತ ಜಿಲ್ಲೆ”ಯನ್ನಾಗಿಸಲು ಕ್ರಮವಹಿಸುವಂತೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಡೆದ ‘ನಕಲಿ ವೈದ್ಯರ ಪತ್ತೆ ಮತ್ತು ಕಾನೂನು ಕ್ರಮ ಕೈಗೊಳ್ಳುವ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯ ಮಟ್ಟದ ಗುಪ್ತಚರ ಇಲಾಖೆಯ ವರದಿ ಹಾಗೂ ಸಾರ್ವಜನಿಕರ ದೂರುಗಳ ಅನ್ವಯ ಸದ್ಯ ಜಿಲ್ಲೆಯಲ್ಲಿ 40 ನಕಲಿ ವೈದ್ಯರ ಪ್ರಕರಣಗಳು ದಾಖಲಾಗಿವೆ. ತಾಲೂಕು ವೈದ್ಯಾಧಿಕಾರಿಗಳ ತಂಡವು ಈಗಾಗಲೇ ಹಲವೆಡೆ ಯಶಸ್ವಿ ದಾಳಿಗಳನ್ನು ನಡೆಸಿದ್ದು, ಪರಿಶೀಲನೆ ಚುರುಕುಗೊಳಿಸಲಾಗಿದೆ ಎಂದರು.
KPME ಕಾಯ್ದೆ ನಿಯಮಗಳು:
2007ರ ಕೆಪಿಎಂಇ (KPME) ಕಾಯ್ದೆಯ ಸೆಕ್ಷನ್ 2(K) ಪ್ರಕಾರ ಖಾಸಗಿ ವೈದ್ಯಕೀಯ ವೃತ್ತಿ ನಡೆಸಲು ಕನಿಷ್ಠ ಎಂಬಿಬಿಎಸ್ (MBBS) ಅಥವಾ ಮಾನ್ಯತೆ ಪಡೆದ ಆಯುರ್ವೇದ, ಸಿದ್ದ, ಯುನಾನಿ, ಹೋಮಿಯೋಪತಿ ಪದವಿಗಳೊಂದಿಗೆ ನೋಂದಣಿ ಕಡ್ಡಾಯವಾಗಿದೆ. ಕೇವಲ ಕೆಲವು ತಿಂಗಳುಗಳ ತರಬೇತಿ ಪಡೆದು ಚುಚ್ಚುಮದ್ದು ಹಾಗೂ ಸ್ಟೀರಾಯ್ಡ್ ಔಷಧಿ ನೀಡುವುದು ಕಾನೂನುಬಾಹಿರವಾಗಿದೆ. ನಿಯಮ ಉಲ್ಲಂಘಿಸುವ ನಕಲಿ ವೈದ್ಯರಿಗೆ ಕೆಪಿಎಂಇ ಕಾಯ್ದೆಯ ಸೆಕ್ಷನ್ 34, 36ರ ಅಡಿ ₹25,000 ದಿಂದ ₹1 ಲಕ್ಷದವರೆಗೆ ದಂಡ ಹಾಗೂ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ, ಡಾ. ಮಂಜುನಾಥ ಪಾಟೀಲ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಯೋಗೇಂದ್ರ ಕುಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.





Leave a comment