ದಾವಣಗೆರೆ: ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ನಿರಂತರ ಪ್ರಯತ್ನದ ಫಲವಾಗಿ ಜಿಲ್ಲಾ ಬಾಲಭವನದ ಟಾಯ್ ಟ್ರೈನ್ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು, ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿರುವ ಬಾಲಭವನದಲ್ಲಿ ಮಂಗಳವಾರ ಟಾಯ್ ಟ್ರೈನ್ ಪುನರಾರಂಭಿಸಲಾಯಿತು. ಸಂಸದರು ಇದಕ್ಕೆ ಚಾಲನೆ ನೀಡಿದರು.
2014-15ರಲ್ಲಿ 3.8 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ಬಾಲಭವನದಲ್ಲಿ ಮಕ್ಕಳ ಮನರಂಜನೆಗಾಗಿ ಟಾಯ್ ಟ್ರೈನ್ ಅಳವಡಿಸಲಾಗಿತ್ತು. ಕೋವಿಡ್ ನಂತರ ರೈಲು ಹಾಗೂ ಹಳಿಗಳು ದುರಸ್ಥಿಗೊಂಡ ಪರಿಣಾಮ ಸಂಚಾರ ಸ್ಥಗಿತಗೊಂಡಿತ್ತು. ಮಕ್ಕಳಿಂದ ಹಾಗೂ ಪೋಷಕರಿಂದ ಟಾಯ್ ಟ್ರೈನ್ ಪುನರಾರಂಭಿಸುವಂತೆ ಬೇಡಿಕೆ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಹಳಿ ದುರಸ್ತಿಗೆ ಮನವಿ ಸಲ್ಲಿಸಿದ್ದರು.
ಸಂಸದರ ನಿರಂತರ ಅನುಸರಣೆ ಮತ್ತು ಪ್ರಯತ್ನದ ಫಲವಾಗಿ ₹3,09,745 ಅನುದಾನ ಬಿಡುಗಡೆಯಾಗಿ ಟ್ರ್ಯಾಕ್ ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ. ಟ್ರ್ಯಾಕ್ನಲ್ಲಿದ್ದ ಮರದ ಸ್ಲೀಪರ್ಗಳನ್ನು ಬದಲಿಸಿ ಸಿಮೆಂಟ್ ಸ್ಲೀಪರ್ಗಳನ್ನು ಅಳವಡಿಸಲಾಗಿದ್ದು, ಅಗತ್ಯ ವೆಚ್ಚವನ್ನು ಜಿಲ್ಲಾಡಳಿತದ ನೆರವಿನಿಂದ ಭರಿಸಲಾಗಿದೆ. ಇದರಿಂದ ಟಾಯ್ ಟ್ರೈನ್ ಸಂಚಾರ ಮತ್ತಷ್ಟು ಸುರಕ್ಷಿತ ಹಾಗೂ ಸುಗಮವಾಗಿದೆ.
ಜಿಲ್ಲಾ ಬಾಲಭವನವು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತಂದು ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನ ಹಾಗೂ ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ. ರಾಜ್ಯ ಬಾಲಭವನ ಸೊಸೈಟಿ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ, ಸೃಜನಾತ್ಮಕ ಕಲೆ, ಬರವಣಿಗೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಆಯೋಜಿಸಲಾಗುತ್ತಿದೆ.
ದಾವಣಗೆರೆ ನಗರ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಮಕ್ಕಳಿಗೆ ಪ್ರತಿದಿನ ಸಂಜೆ 5ರಿಂದ 7 ಗಂಟೆಯವರೆಗೆ ಟಾಯ್ ಟ್ರೈನ್ನಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ₹10 ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ₹5 ದರ ನಿಗದಿಪಡಿಸಲಾಗಿದೆ. ಈ ಮೂಲಕ ಸಂಗ್ರಹವಾಗುವ ಮೊತ್ತವನ್ನು ಟಾಯ್ ಟ್ರೈನ್ ನಿರ್ವಹಣೆಗೆ ಬಳಸಿಕೊಳ್ಳಲಾಗುವುದು.
ಟಾಯ್ ಟ್ರೈನ್ ಪುನರಾರಂಭದಿಂದ ಮಕ್ಕಳಲ್ಲಿ ಸಂತಸ ಮನೆಮಾಡಿದ್ದು, ಬಾಲಭವನದ ಆಕರ್ಷಣೆ ಮತ್ತಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಕಲಿಕೆ, ಮನರಂಜನೆ ಹಾಗೂ ಸೃಜನಶೀಲತೆಗೆ ಪೂರಕವಾಗುವ ಇನ್ನಷ್ಟು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಂಬುಲೆನ್ಸ್ ಅನ್ನು ಲೋಕಾರ್ಪಣೆ ಮಾಡಿದರು.
ವಿಶೇಷ ಸೂಚನೆ: ಟಾಯ್ ಟ್ರೈನ್ ಟಿಕೆಟ್ಗಳ ಮೂಲಕ ಸಂಗ್ರಹವಾಗುವ ಹಣವನ್ನು ಸಂಪೂರ್ಣವಾಗಿ ಬಾಲಭವನದ ರೈಲಿನ ದೈನಂದಿನ ನಿರ್ವಹಣೆ ಹಾಗೂ ಇಂಧನ ವೆಚ್ಚಕ್ಕಾಗಿ ಮೀಸಲಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಜಿ ಎಂ ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಾನಾಯ್ಕ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್, ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
- Children Mini Train Repair
- Chinnari Express Davanagere
- Davanagere Balabhavan
- Davanagere News today.
- JH Patel Nagar Balabhavan
- MP PRABHA MALLIKARJUN
- Toy Train Resumed
- ಕರ್ನಾಟಕ ವಾರ್ತೆ ದಾವಣಗೆರೆ
- ಚಿನ್ನಾರಿ ಎಕ್ಸ್ಪ್ರೆಸ್
- ಜೆ ಹೆಚ್ ಪಟೇಲ್ ಬಡಾವಣೆ
- ಟಾಯ್ ಟ್ರೈನ್ ಪುನರಾರಂಭ
- ದಾವಣಗೆರೆ ಬಾಲಭವನ
- ಮಕ್ಕಳ ರೈಲು ದುರಸ್ತಿ
- ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮನವಿ





Leave a comment